ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚರ್ಚೆಗೆ ಗ್ರಾಸವಾದ ‘ಸಿಎಂ ವಿವೇಚನಾ ಕೋಟಾ’ ಎಂಬ ಲೆಕ್ಕ ಶೀರ್ಷಿಕೆ

Published 21 ಫೆಬ್ರುವರಿ 2024, 16:20 IST
Last Updated 21 ಫೆಬ್ರುವರಿ 2024, 16:20 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದಿನ ಮೂವರು ಮುಖ್ಯಮಂತ್ರಿಗಳ ಅವಧಿಯಲ್ಲಿ ಮುಖ್ಯಮಂತ್ರಿ ವಿವೇಚನಾ ಕೋಟಾ ಎಂಬ ಹೊಸ ಲೆಕ್ಕ ಶೀರ್ಷಿಕೆ ಆರಂಭಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಲೋಕೋಪಯೋಗಿ, ಸಣ್ಣ ನೀರಾವರಿ, ಬೃಹತ್ ನೀರಾವರಿ ಸೇರಿದಂತೆ ಕೆಲವು ಇಲಾಖೆಗಳಲ್ಲಿ ಸಾವಿರಾರು ಕೋಟಿ ರೂಪಾಯಿಯ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ಶಿಸ್ತು ಹಾಳುಗೆಡವಿದ್ದಾರೆ’ ಎಂದು ವಿಧಾನಸಭೆಯಲ್ಲಿ ಬಜೆಟ್‌ ಚರ್ಚೆಯ ವೇಳೆ ಬಿಜೆಪಿಯ ಬಸವರಾಜ ಬೊಮ್ಮಾಯಿ ಆರೋಪಿಸಿದಾಗ ಮಧ್ಯಪ್ರವೇಶಿಸಿದ ಪ್ರಿಯಾಂಕ್‌, ‘ಮಾಜಿ ಮುಖ್ಯಮಂತ್ರಿ ನೀಡುತ್ತಿರುವ ಅಂಕಿ ಅಂಶಗಳ ಬಗ್ಗೆ ನನ್ನ ತಕರಾರಿಲ್ಲ. ಆದರೆ, ಮುಖ್ಯಮಂತ್ರಿ ವಿವೇಚನಾ ಕೋಟಾದ ಲೆಕ್ಕ ಶೀರ್ಷಿಕೆಯಡಿ ನನ್ನ ಇಲಾಖೆಯೊಂದರಲ್ಲೇ ಏಳೆಂಟು ಸಾವಿರ ಕೋಟಿ ರೂಪಾಯಿಯ ಬಿಲ್ ಬಾಕಿ ಉಳಿದಿತ್ತು. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಇರಿಸಲಾಗಿದ್ದ ₹ 1 ಸಾವಿರ ಕೋಟಿಯ ಠೇವಣಿ ತೆಗೆದು ಈ ಕೋಟಾದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಇದು ಯಾವ ಆರ್ಥಿಕ ಶಿಸ್ತು’ ಎಂದು ಪ್ರಶ್ನಿಸಿದರು.

‘ವಿವೇಚನಾ ಕೋಟಾದಡಿ ಹಿಂದಿನ ಮುಖ್ಯಮಂತ್ರಿಗಳು ಎಷ್ಟು ಕಾಮಗಾರಿಗಳನ್ನು ಮಂಜೂರು ಮಾಡಿದ್ದಾರೆ, ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ಎಂಬ ಅಂಕಿ ಅಂಶ ಕೊಡಿ’ ಎಂದು ಪ್ರಿಯಾಂಕ್ ಖರ್ಗೆ ಕೆಣಕಿದರು. ಕಾಂಗ್ರೆಸ್‌ನ ಕೆ.ಎಂ. ಶಿವಲಿಂಗೇಗೌಡ‌, ‘ಲೋಕೋಪಯೋಗಿ ಇಲಾಖೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಬೇಕಾಬಿಟ್ಟಿ ನೀಡಿದ್ದರಿಂದಾಗಿಯೇ ಆರ್ಥಿಕ ಶಿಸ್ತು ಹದಗೆಟ್ಟಿದೆ’ ಎಂದು ದೂರಿದರು.

‘ಎಲ್ಲ ಕಾಲದಲ್ಲೂ ಮುಖ್ಯಮಂತ್ರಿ ವಿವೇಚನಾ ಕೋಟಾ ಚಾಲ್ತಿಯಲ್ಲಿದ್ದು, ನಾವು ಆರ್ಥಿಕ ಇಲಾಖೆಯ ಪೂರ್ವಾನುಮತಿ ಪಡೆದೇ ಕಾಮಗಾರಿಗಳಿಗೆ ಮಂಜೂರಾತಿ ನೀಡಿದ್ದೇವೆ’ ಎಂದು ಬೊಮ್ಮಾಯಿ ಸಮರ್ಥಿಸಿದಾಗ, ‘ಈ ರೀತಿ ಕಾಮಗಾರಿ ಹಂಚಿಕೆ ಬೇಡ ಎಂದು ಆರ್ಥಿಕ ಇಲಾಖೆ ತಿರಸ್ಕರಿಸಿರುವ ದಾಖಲೆಯಿದೆ. ನೀವು ಸಾಲ ಮಾಡಿ ತುಪ್ಪ ತಿಂದಿದ್ದೀರಾ. ನಾವು ಅದಕ್ಕೆ ಬಡ್ಡಿ ಕಟ್ಟುವಂತಾಗಿದೆ’ ಎಂದು‌ ಆರೋಪಿಸಿದರು.

ಆಗ ಬೊಮ್ಮಾಯಿ, ‘ರಾಜ್ಯದ ಆದಾಯದಲ್ಲಿ ಶೇ‌ 19ರಷ್ಟು ಸಾಲ ಮತ್ತು ಬಡ್ಡಿಗೆ ಹೋಗುತ್ತಿದೆ. 2013ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಮಾಡಿದ್ದ ಸಾಲದ ಇಡುಗಂಟು 11 ವರ್ಷಗಳ ಬಳಿಕ ಒಮ್ಮೆಲೇ ತೀರುವಳಿ ಮಾಡಬೇಕು ಎಂಬ ಸನ್ನಿವೇಶ ಎದುರಾಯಿತು. 2023ರಲ್ಲಿ‌ ನಾವು ಪಾವತಿಸಿದ್ದೇವೆ’ ಎಂದರು. ಆಗ ಪ್ರಿಯಾಂಕ್, ‘ಸರ್ಕಾರಗಳು ನಿರಂತರ. ಯಾರೇ ಅಧಿಕಾರಕ್ಕೆ ಬರಲಿ ಹಿಂದಿನ ಸರ್ಕಾರಗಳು ಮಾಡಿದ ಸಾಲವನ್ನು ಆಡಳಿತ ನಡೆಸುವವರು ತೀರಿಸುವುದು ಅನಿವಾರ್ಯ. ಇಲ್ಲಿ ಮೂಲ ಪ್ರಶ್ನೆ ಇರುವುದು ಮುಖ್ಯಮಂತ್ರಿ ವಿವೇಚನಾ ಕೋಟಾ ಎಂಬ ಲೆಕ್ಕ ಶೀರ್ಷಿಕೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT