ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕ ಮಾಡಾಳ್‌ ನಾಲ್ಕು ದಿನ ಲೋಕಾಯುಕ್ತ ಪೊಲೀಸ್‌ ವಶಕ್ಕೆ

ಕಚ್ಚಾವಸ್ತು ಪೂರೈಕೆದಾರರ ಸಂಪರ್ಕದಲ್ಲಿದ್ದ ಅಪ್ಪ, ಮಗ
Last Updated 28 ಮಾರ್ಚ್ 2023, 20:33 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಅಧ್ಯಕ್ಷರಾಗಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳ್‌ ವಿರೂಪಾಕ್ಷಪ್ಪ ಮತ್ತು ಅವರ ಮಗ ಪ್ರಶಾಂತ್‌ ಮಾಡಾಳ್‌ ಮಾರ್ಚ್‌ 2ರಂದು ಲಂಚ ಪ್ರಕರಣ ದಾಖಲಾಗುವ ಮುನ್ನ ಕಚ್ಚಾವಸ್ತು ಪೂರೈಸುವ ಸಂಸ್ಥೆಗಳ ಪ್ರತಿನಿಧಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಲೋಕಾಯುಕ್ತ ಪೊಲೀಸರಿಗೆ ಲಭಿಸಿದೆ.

ಲಂಚ ಪ್ರಕರಣ ಹಾಗೂ ಶಾಸಕರ ಮನೆಯಲ್ಲಿ ₹ 6.10 ಕೋಟಿ ನಗದು ಪತ್ತೆಯಾಗಿರುವ ಕುರಿತು ತನಿಖೆ ಚುರುಕುಗೊಂಡಿದೆ. ಹಣ ಸಂಗ್ರಹದ ಮೂಲದ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಕೆಎಸ್‌ಡಿಎಲ್‌ 106 ಬಗೆಯ ಕಚ್ಚಾವಸ್ತುಗಳನ್ನು ಖರೀದಿಸುತ್ತಿದೆ. ಆರರಿಂದ ಏಳು ಮಂದಿ ಪ್ರಮುಖ ಪೂರೈಕೆದಾರರಿದ್ದಾರೆ. ಅವರೊಂದಿಗೆ ಅಪ್ಪ–ಮಗ ನಿರಂತರ ಸಂಪರ್ಕ
ದಲ್ಲಿದ್ದರು ಎಂಬುದಕ್ಕೆ ದಾಖಲೆಗಳು ಲಭಿಸಿವೆ ಎಂದು ಮೂಲಗಳು ತಿಳಿಸಿವೆ.

ವಿರೂಪಾಕ್ಷಪ್ಪ ಅವರನ್ನು ಸೋಮ ವಾರ ಬಂಧಿಸಿದ ಬಳಿಕ ತಡರಾತ್ರಿಯವರೆಗೆ ವಿಚಾರಣೆ ನಡೆಸಲಾಗಿದೆ. ಕೆಲವು ಪ್ರಶ್ನೆಗಳಿಗಷ್ಟೇ ಉತ್ತರಿಸಿದ್ದಾರೆ. ಅವರ ಮಲಗುವ ಕೋಣೆಯಲ್ಲಿ ಪತ್ತೆಯಾಗಿರುವ ₹ 6.10 ಕೋಟಿಯನ್ನು ತಲುಪಿಸಿದ ವ್ಯಕ್ತಿಗಳ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಅವರ ಮೊಬೈಲ್‌ ನಿಂದ ಸಂಗ್ರಹಿಸಿರುವ ಮಾಹಿತಿ ಆಧರಿಸಿ ಬುಧವಾರದಿಂದ ವಿಚಾರಣೆ ನಡೆಸಲು ಸಿದ್ಧತೆ ನಡೆದಿದೆ ಎಂದು ಹೇಳಿವೆ.

ಚುನಾವಣೆ ಘೋಷಣೆಯಾಗುವ ಮುನ್ನವೇ ಎಲ್ಲ ‍ಪೂರೈಕೆದಾರರಿಂದ ಲಂಚದ ಹಣವನ್ನು ವಸೂಲಿ ಮಾಡುವ ತರಾತುರಿಯಲ್ಲಿ ಅಪ್ಪ ಮತ್ತು ಮಗ ಇದ್ದರು.

ಅದೇ ಕಾರಣಕ್ಕಾಗಿ ಪ್ರಶಾಂತ್‌ ನಿತ್ಯವೂ ಬೆಂಗಳೂರು ಜಲಮಂಡಳಿ ಕಚೇರಿಯಿಂದ ಕ್ರೆಸೆಂಟ್‌ ರಸ್ತೆಯ ಖಾಸಗಿ ಕಚೇರಿಗೆ ಬಂದು ಕೆಎಸ್‌ಡಿಎಲ್‌ಗೆ ಕಚ್ಚಾವಸ್ತು ಪೂರೈಸುವ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡುತ್ತಿದ್ದರು ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.

ಡಿವಿಆರ್‌ ಮಾಹಿತಿ ನಾಪತ್ತೆ: ವಿರೂಪಾಕ್ಷಪ್ಪ ಅವರ ಬೆಂಗಳೂರಿನ ಮನೆ ಹಾಗೂ ಚನ್ನಗಿರಿ ತಾಲ್ಲೂಕಿನ ಚನ್ನೇಶಪುರದ ಮನೆಗಳಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ಮಾಹಿತಿಗಳನ್ನು ಡಿವಿಆರ್‌ನಿಂದ ಅಳಿಸಿ ಹಾಕಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಎರಡೂ ಡಿವಿಆರ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿರುವ ಲೋಕಾಯುಕ್ತ ಪೊಲೀಸರು, ಮಾರ್ಚ್‌ 2ರಂದು ಲಂಚ ಪ್ರಕರಣದಲ್ಲಿ ಪ್ರಶಾಂತ್‌ ಅವರನ್ನು ಬಂಧಿಸುವ ಮುಂಚಿನ ದೃಶ್ಯಾವಳಿಗಳನ್ನು ಹೊರತೆಗೆದುಕೊಡುವಂತೆ
ಮನವಿ ಮಾಡಿದ್ದಾರೆ.

ದಾವಣಗೆರೆಯಿಂದ ತಪ್ಪಿಸಿಕೊಂಡು ಬಂದಿದ್ದರು!

ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಸೋಮವಾರ ಮಧ್ಯಾಹ್ನ ಹೈಕೋರ್ಟ್‌ ಆದೇಶ ಹೊರಡಿಸುತ್ತಿದ್ದಂತೆಯೇ ಮಾಡಾಳ್‌ ವಿರೂಪಾಕ್ಷಪ್ಪ ಅವರ ಮೊಬೈಲ್‌ಗೆ ಕರೆ ಮಾಡಿದ್ದ ಲೋಕಾಯುಕ್ತದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು, ದಾವಣಗೆರೆ ಲೋಕಾಯುಕ್ತ ಪೊಲೀಸರ ಎದುರು ಹಾಜರಾಗುವಂತೆ ಸೂಚಿಸಿದ್ದರು. ಆಗ ಒಪ್ಪಿಕೊಂಡ ಶಾಸಕರು ನಂತರ ಕಣ್ತಪ್ಪಿಸಿ ಬೆಂಗಳೂರಿನತ್ತ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

‘ಕರೆಮಾಡಿ ಸೂಚನೆ ನೀಡಿದಾಗ ದಾವಣಗೆರೆ ಲೋಕಾಯುಕ್ತ ಪೊಲೀಸ್‌ ಕಚೇರಿಗೆ ಹೋಗುವುದಾಗಿ ವಿರೂಪಾಕ್ಷಪ್ಪ ತಿಳಿಸಿದ್ದರು. ನಂತರ ಕೆಲಕಾಲ ಸಂಪರ್ಕಕ್ಕೆ ಸಿಗಲಿಲ್ಲ. ದಾವಣಗೆರೆ ಲೋಕಾಯುಕ್ತ ಪೊಲೀಸರು ಅವರ ಮನೆಗೆ ಹೋದಾಗ ಅಲ್ಲಿಯೂ ಇರಲಿಲ್ಲ. ಕೆಲ ಹೊತ್ತಿನ ನಂತರ ಸಂಪರ್ಕಕ್ಕೆ ಸಿಕ್ಕ ಅವರು ಇರುವ ಸ್ಥಳದ ಕುರಿತು ಖಚಿತ ಮಾಹಿತಿ ನೀಡಿರಲಿಲ್ಲ. ಕ್ಷಣಕ್ಕೊಂದು ಸ್ಥಳದ ಹೆಸರು ಹೇಳುತ್ತಿದ್ದರು’ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ಶಾಸಕರು ಬೆಂಗಳೂರು ತಲುಪಲು ಅವಕಾಶ ನೀಡಿದರೆ ತಲೆಮರೆಸಿಕೊಳ್ಳಬಹುದು ಎಂಬ ಅನುಮಾನವಿತ್ತು. ಈ ಕಾರಣಕ್ಕಾಗಿ ತುಮಕೂರಿನಲ್ಲಿ ಒಂದು ತಂಡ ಮಧ್ಯಾಹ್ನದಿಂದಲೇ ಕಾದಿತ್ತು ಎಂದು ಮೂಲಗಳು ಹೇಳಿವೆ.

ನಾಲ್ಕು ದಿನ ತನಿಖಾ ತಂಡದ ವಶಕ್ಕೆ

ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಹೆಚ್ಚಿನ ವಿಚಾರಣೆಗೆ ನಾಲ್ಕು ದಿನ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿ ಜನಪ್ರತಿನಿಧಿಗಳ ಪ್ರಕರಣಗಳಿಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.

ಸೋಮವಾರ ರಾತ್ರಿ ವಿರೂಪಾಕ್ಷಪ್ಪ ಅವರನ್ನು ಬಂಧಿಸಲಾಗಿತ್ತು. ಮಂಗಳವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗೆ ವಶಕ್ಕೆ ನೀಡುವಂತೆ ಲೋಕಾಯುಕ್ತ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದರು. ಅದನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ನಾಲ್ಕು ದಿನ ವಶಕ್ಕೆ ನೀಡಿ ಆದೇಶ ಹೊರಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT