ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪಿಡಿಒಗಳ ವರ್ಗದಲ್ಲಿ ದಾಖಲೆ!

Published 22 ಡಿಸೆಂಬರ್ 2023, 16:13 IST
Last Updated 22 ಡಿಸೆಂಬರ್ 2023, 16:13 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಳ ತೋರಿಸದೇ ನೂರಾರು ಮಂದಿಯ ವರ್ಗಾವಣೆ, ಮುಖ್ಯಮಂತ್ರಿಯವರ ಅನುಮೋದನೆಗೂ ಮುನ್ನ ಪಟ್ಟಿ ಸೋರಿಕೆಯಂತಹ ಕಾರಣಗಳಿಂದ ವಿವಾದದ ಕೇಂದ್ರವಾಗಿದ್ದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವರ್ಗಾವಣೆ ಪ್ರಕ್ರಿಯೆ ಸಂಖ್ಯಾ ದೃಷ್ಟಿಯಲ್ಲೂ ದಾಖಲೆ ಬರೆದಿದೆ.

ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ನಿಯಮಗಳಡಿ ಆಯಾ ವೃಂದಬಲದ ಶೇಕಡ 6ರಷ್ಟು ವರ್ಗಾವಣೆಗೆ ಅವಕಾಶವಿತ್ತು. ಆದರೆ, ಈ ಬಾರಿ ಶೇ 30.07ರಷ್ಟು ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ವರ್ಗಾವಣೆ ಮಾಡಲಾಗಿದೆ. ಸಾಮಾನ್ಯ ವರ್ಗಾವಣೆ ನಿಯಮಗಳ ಮಿತಿಗೆ ಹೋಲಿಸಿದರೆ ಐದು ಪಟ್ಟು ಹೆಚ್ಚಿನ ವರ್ಗಾವಣೆ ಆಗಿವೆ.

ಒಟ್ಟು 6,021 ಪಿಡಿಒ ಹುದ್ದೆಗಳಿಗೆ ಮಂಜೂರಾತಿ ಇದೆ. ಈ ಪೈಕಿ 5,189 ಹುದ್ದೆಗಳು ಭರ್ತಿ ಇದ್ದು, 832 ಹುದ್ದೆಗಳು ಖಾಲಿ ಉಳಿದಿವೆ. 2023–24ನೇ ಸಾಲಿನಲ್ಲಿ ಈವರೆಗೆ ಒಟ್ಟು 1,562 ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಪಿಡಿಒ ಹುದ್ದೆಗಳನ್ನು ರಾಜ್ಯ ವೃಂದ ಎಂದು ನಿರ್ಧರಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಅಂತರ ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡಿತ್ತು.  ಜುಲೈ 4ರಿಂದ ಆರಂಭವಾದ ಪಿಡಿಒಗಳ ವರ್ಗಾವಣೆ ಪ್ರಕ್ರಿಯೆ ಇನ್ನೂ ನಿಂತಿಲ್ಲ. ನೂರಾರು ಪಿಡಿಒಗಳಿಗೆ ಸ್ಥಳ ತೋರಿಸದೇ ವರ್ಗಾವಣೆ ಮಾಡಿದ್ದು, ಅವರಲ್ಲಿ ಬಹುತೇಕರು ಪಂಚಾಯತ್‌ ರಾಜ್‌ ಆಯುಕ್ತಾಲಯದ ಕಚೇರಿ ಸುತ್ತುತ್ತಲೇ ಇದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ದೇವರ ಹಿಪ್ಪರಗಿ ಕ್ಷೇತ್ರದ ಶಾಸಕ ಭೀಮನಗೌಡ (ರಾಜುಗೌಡ) ಬಸನಗೌಡ ಪಾಟೀಲ ‍ಪ್ರಶ್ನೆಗೆ ವಿಧಾನಸಭೆಯಲ್ಲಿ ನೀಡಿರುವ ಉತ್ತರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರೇ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಅತ್ಯಧಿಕ 161 ಪಿಡಿಒಗಳನ್ನು ವರ್ಗಾವಣೆ ಮಾಡಲಾಗಿದೆ. ಹಾಸನ (105), ಮಂಡ್ಯ (100), ಬಾಗಲಕೋಟೆ ( 92) ನಂತರದ ಸ್ಥಾನಗಳಲ್ಲಿವೆ. ಬಳ್ಳಾರಿ (11), ಯಾದಗಿರಿ (12), ವಿಜಯನಗರ ಮತ್ತು ಧಾರವಾಡ (ತಲಾ 17) ಜಿಲ್ಲೆಗಳಲ್ಲಿ ಕಡಿಮೆ ಸಂಖ್ಯೆಯ ಪಿಡಿಒಗಳ ವರ್ಗಾವಣೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವರ ತವರು ಜಿಲ್ಲೆ ಕಲಬುರಗಿಯಲ್ಲಿ 64 ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯಾಗಿದೆ.

ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಅವಧಿಯಲ್ಲಿ ಆಯಾ ವೃಂದಬಲದ ಶೇ 6ರಷ್ಟು ಮಂದಿಯನ್ನು ವರ್ಗಾವಣೆ ಮಾಡುವ ಅಧಿಕಾರವನ್ನು ಸಚಿವರಿಗೆ ನೀಡಲಾಗಿತ್ತು. ಆ ಮಿತಿಯನ್ನು ಮೀರಿದ ಸಂಖ್ಯೆಯ ವರ್ಗಾವಣೆಗಳಿಗೆ ಮುಖ್ಯಮಂತ್ರಿಯವರ ಅನುಮೋದನೆ ಪಡೆದು ಆದೇಶ ಹೊರಡಿಸಲು ಅವಕಾಶ ನೀಡಲಾಗಿತ್ತು.

ಸಾಮಾನ್ಯ ವರ್ಗಾವಣೆ ನಿಯಮಗಳ ಪ್ರಕಾರ, ಒಟ್ಟು 312 ಪಿಡಿಒಗಳ ವರ್ಗಾವಣೆಗೆ ಮಾತ್ರ ಅವಕಾಶವಿತ್ತು. 850 ಪಿಡಿಒಗಳನ್ನು ಹೆಚ್ಚುವರಿಯಾಗಿ ವರ್ಗಾವಣೆ ಮಾಡಿರುವುದನ್ನು ಸಚಿವರು ವಿಧಾನಸಭೆಗೆ ನೀಡಿದ ಉತ್ತರದಲ್ಲಿ ಬಹಿರಂಗಪಡಿಸಿದ್ದಾರೆ.

ಶೇ 14.85ರಷ್ಟು ಆದೇಶಗಳಿಗೆ ತಡೆ

1,562 ವರ್ಗಾವಣೆ ಆದೇಶಗಳ ಪೈಕಿ 232 (ಶೇ 14.85) ಪಿಡಿಒಗಳ ವರ್ಗಾವಣೆಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ತಡೆಯಾಜ್ಞೆ ನೀಡಿದೆ. ಕೆಎಟಿ ಮತ್ತು ನ್ಯಾಯಾಲಯಗಳ ಆದೇಶಗಳನ್ನು ಉಲ್ಲಂಘಿಸಿರುವುದು, ಸ್ಥಳ ನಿಯುಕ್ತಿಗೊಳಿಸದೇ ವರ್ಗಾವಣೆ ಮಾಡಿರುವುದು, ವಯೋ ನಿವೃತ್ತಿಯ ಅಂಚಿನಲ್ಲಿರುವ ಅಧಿಕಾರಿಗಳು ಮತ್ತು ನೌಕರರನ್ನು ವರ್ಗಾವಣೆ ಮಾಡಬಾರದು ಎಂಬ ನಿಯಮ ಉಲ್ಲಂಘಿಸಿರುವ ಕಾರಣದಿಂದ ವರ್ಗಾವಣೆ ಆದೇಶಗಳಿಗೆ ಕೆಎಟಿ ತಡೆಯಾಜ್ಞೆ ನೀಡಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ.

ಒಂದು ಸ್ಥಳದಲ್ಲಿ ಕನಿಷ್ಠ ಎರಡು ವರ್ಷಗಳ ಸೇವಾವಧಿ ಪೂರ್ಣಗೊಳಿಸಿದವರನ್ನು ವರ್ಗಾವಣೆ ಮಾಡಲು ನಿಯಮಗಳಲ್ಲಿ ಅವಕಾಶವಿದೆ. ಅವಧಿ ಪೂರ್ಣಗೊಳ್ಳುವ ಮುನ್ನವೇ ವರ್ಗಾಯಿಸಲಾಗಿದೆ ಎಂಬ ಕಾರಣಕ್ಕೆ 186 ಪಿಡಿಗಳ ವರ್ಗಾವಣೆ ಆದೇಶಕ್ಕೆ ಕೆಎಟಿ ತಡೆ ನೀಡಿದೆ ಎಂಬುದನ್ನು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT