ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ವಾಹನ ತೆರಿಗೆ ಹೆಚ್ಚಳ: ಯಾವ ವಾಹನಕ್ಕೆ ಎಷ್ಟು? ಎಂಬ ವಿವರ ಇಲ್ಲಿದೆ..

ಬಜೆಟ್‌ ಘೋಷಣೆಯಂತೆ ಮೋಟಾರು ವಾಹನಗಳ ತೆರಿಗೆ ಪರಿಷ್ಕರಣೆ ಸೋಮವಾರದಿಂದಲೇ ಜಾರಿಯಾಗಿದೆ. ಇದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹472 ಕೋಟಿ ಹೆಚ್ಚುವರಿ ವರಮಾನ ಸಂಗ್ರಹಿಸುವ ಗುರಿ ಇದೆ
Published 25 ಜುಲೈ 2023, 1:06 IST
Last Updated 25 ಜುಲೈ 2023, 1:06 IST
ಅಕ್ಷರ ಗಾತ್ರ

ಬೆಂಗಳೂರು: ಬಜೆಟ್‌ ಘೋಷಣೆಯಂತೆ ಮೋಟಾರು ವಾಹನಗಳ ತೆರಿಗೆ ಪರಿಷ್ಕರಣೆ ಸೋಮವಾರದಿಂದಲೇ ಜಾರಿಯಾಗಿದೆ. ಇದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹472 ಕೋಟಿ ಹೆಚ್ಚುವರಿ ವರಮಾನ ಸಂಗ್ರಹಿಸುವ ಗುರಿ ಇದೆ.

ಆಯ್ದ ವಾಹನಗಳ ತೆರಿಗೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7ರಂದು ಮಂಡಿಸಿದ್ದ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಅದಕ್ಕೆ ಪೂರಕವಾಗಿ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಮಸೂದೆ–2023’ಕ್ಕೆ ವಿಧಾನಮಂಡಲದ ಒಪ್ಪಿಗೆ ಪಡೆಯಲಾಗಿತ್ತು.

ಶಾಲೆ, ಕಾಲೇಜುಗಳ ವಾಹನಗಳು, ಅತಿ ಭಾರದ ಸರಕು ಸಾಗಣೆ ವಾಹನಗಳು, ಮೋಟಾರು ಕ್ಯಾಬ್‌ಗಳ ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ. ಶಾಲೆಗಳ ಒಡೆತನದಲ್ಲಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಸಂಚಾರಕ್ಕೆ ಬಳಸುವ ವಾಹನಗಳ ಪ್ರತಿ ಚದರ ಮೀಟರ್‌ಗೆ ತೆರಿಗೆಯನ್ನು ₹20 ರಿಂದ ₹100ಕ್ಕೆ ಏರಿಕೆ ಮಾಡಲಾಗಿದೆ. ಇತರ ಶಿಕ್ಷಣ ಸಂಸ್ಥೆಗಳ ಒಡೆತನದಲ್ಲಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸಂಚಾರಕ್ಕೆ ಬಳಸುವ ವಾಹನಗಳ ಪ್ರತಿ ಚದರ ಮೀಟರ್‌ ವಿಸ್ತೀರ್ಣದ ತೆರಿಗೆಯನ್ನು ₹80ರಿಂದ ₹200ಕ್ಕೆ ಹೆಚ್ಚಿಸಲಾಗಿದೆ.

ಹೊರುವ ಭಾರವೂ ಸೇರಿದಂತೆ ಒಟ್ಟು ತೂಕ 1.5 ಟನ್‌ನಿಂದ 5.5 ಟನ್‌ಗಳವರೆಗೆ ಮಾತ್ರ ಇರುವ ವಾಹನಗಳಿಗೆ ಪೂರ್ಣಾವಧಿ ತೆರಿಗೆ ಪಡೆಯಲಾಗುತ್ತಿತ್ತು. ಅದಕ್ಕಿಂತ ಹೆಚ್ಚಿನ ಭಾರದ ವಾಹನಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿಸಬೇಕಿತ್ತು. ಈಗ 1.5 ಟನ್‌ನಿಂದ 12 ಟನ್‌ಗಳವರೆಗಿನ ತೂಕದ ವಾಹನಗಳಿಗೂ ಪೂರ್ಣಾವಧಿ ತೆರಿಗೆ ಸಂಗ್ರಹಿಸಲಾಗುತ್ತದೆ.

₹15 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕ್ಯಾಬ್‌ಗಳಿಗೆ ಮಾತ್ರ ಆ ವಾಹನದ ಮೌಲ್ಯದ ಶೇಕಡ 15ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ₹10 ಲಕ್ಷದಿಂದ ₹15 ಲಕ್ಷದವರೆಗಿನ ಬೆಲೆಯ ಕ್ಯಾಬ್‌ಗಳಿಗೆ ಅವುಗಳ ಮೌಲ್ಯದ ಶೇ 9ರಷ್ಟು ತೆರಿಗೆ ವಿಧಿಸಲಾಗುತ್ತದೆ. ₹15 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕ್ಯಾಬ್‌ಗಳಿಗೆ ಈ ಹಿಂದಿನಂತೆಯೇ ಅವುಗಳ ಮೌಲ್ಯದ ಶೇ 15ರಷ್ಟು ತೆರಿಗೆ ವಿಧಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT