ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಯಪ್ಪ ‘ಉಪಾಹಾರ’ ಕೂಟ: ಸಚಿವರ ಸ್ಪರ್ಧೆಯ ಚರ್ಚೆ?

Published 8 ಫೆಬ್ರುವರಿ 2024, 16:39 IST
Last Updated 8 ಫೆಬ್ರುವರಿ 2024, 16:39 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಕೆ.ಎಚ್‌. ಮುನಿಯಪ್ಪ ನಿವಾಸದಲ್ಲಿ ಗುರುವಾರ ಬೆಳಿಗ್ಗೆ ಉಪಾಹಾರ ಸೇವಿಸುವ ನೆಪದಲ್ಲಿ ದಲಿತ ಸಚಿವರೂ ಸೇರಿದಂತೆ ಕೆಲವರು ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ನಾನಾ ಚರ್ಚೆಗಳಿಗೆ ಗ್ರಾಸವಾಗಿದೆ.

ಉಪಾಹಾರ ಕೂಟದಲ್ಲಿ ಸಚಿವರಾದ ಎಚ್​​.ಸಿ. ಮಹದೇವಪ್ಪ, ಜಿ. ಪರಮೇಶ್ವರ, ಸತೀಶ ಜಾರಕಿಹೊಳಿ ಇದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್. ಚಂದ್ರಪ್ಪ, ಬಿ.ಎಲ್. ಶಂಕರ್, ಎಂ.ಸಿ. ವೇಣುಗೋಪಾಲ, ಎಸ್.ಪಿ. ಮುದ್ದಹನುಮೇಗೌಡ ಕೂಡಾ ಇದ್ದರು.

ಲೋಕಸಭೆ ಚುನಾವಣೆಯಲ್ಲಿ ಸಚಿವರು ಕಣಕ್ಕಿಳಿಯಬೇಕಾದ ಅನಿವಾರ್ಯ ಬಂದರೆ ಸಿದ್ಧರಿರಬೇಕು ಎಂದು ಕಾಂಗ್ರೆಸ್‌ ವರಿಷ್ಠರು ಈಗಾಗಲೇ ಸೂಚನೆ ನೀಡಿದ್ದಾರೆ. ಉಪಾಹಾರ ಸೇವನೆ ವೇಳೆ ಈ ವಿಚಾರದ ಬಗ್ಗೆ ‌ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

ಸುದ್ದಿಗಾರರ ಜೊತೆ ಮಾತನಾಡಿದ ಸತೀಶ ಜಾರಕಿಹೊಳಿ‌, ‘ಸಚಿವರ ಸ್ಪರ್ಧೆಯ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಆದರೆ, ಆದಷ್ಟು ಬೇಗ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ’ ಎಂದರು.

‘ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಉಪಾಹಾರಕ್ಕೆ ಸೇರುತ್ತಿದ್ದೆವು. ಈ ಬಾರಿ ಕೋಲಾರದ ರುಚಿ ನೋಡೋಣವೆಂದು ಮುನಿಯಪ್ಪ ಅವರ ಮನೆಗೆ ಬಂದಿದ್ದೇವೆ. ಇದನ್ನು ಬಿಟ್ಟು ಬೇರೆ ಏನೂ ಇಲ್ಲ’ ಎಂದರು.

‘ರಾಜ್ಯಸಭೆ ಅಥವಾ ವಿಧಾನ ಪರಿಷತ್‌ ಯಾವುದೇ ಇರಬಹುದು, ಕಾಂಗ್ರೆಸ್ ಪರ ಒಲವು ಇರುವ ಸಮುದಾಯಗಳನ್ನು ಗುರುತಿಸಿ, ಯಾರು ಹೆಚ್ಚು ಕೆಲಸ ಮಾಡಿದ್ದಾರೆ ಅಂಥವರಿಗೆ ಸ್ಥಾನ ಕೊಡಬೇಕು ಎನ್ನುವುದು ನಮ್ಮ ಆಶಯ. ಪಕ್ಷದ ಮುಖಂಡರು ಏನು ತೀರ್ಮಾನ ಮಾಡುತ್ತಾರೊ ನೋಡೋಣ’ ಎಂದರು.

ಮುನಿಯಪ್ಪ‌ ಮಾತನಾಡಿ, ‌‘ಕೆಲವೊಮ್ಮೆ ಸತೀಶ ಜಾರಕಿಹೊಳಿ‌ ಮನೆಯಲ್ಲಿ ಉಪಾಹಾರಕ್ಕೆ ಸೇರುತ್ತೇವೆ. ಇವತ್ತು ನನ್ನ ಮನೆಯಲ್ಲಿ ಸೇರಿದ್ದೇವೆ, ಅಷ್ಟೆ’ ಎಂದರು.

‘ತಿಂಡಿ ತಿನ್ನುತ್ತಾ ಲೋಕಸಭೆ ತಯಾರಿ ಬಗ್ಗೆಯೂ ಚರ್ಚಿಸಿದ್ದೇವೆ.‌ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು. ಆದಷ್ಟು ಬೇಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಸರ್ಕಾರ ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಿಸಿಕೊಳ್ಳಬೇಕೆಂದು ಮಾತನಾಡಿಕೊಂಡಿದ್ದೇವೆ’ ಎಂದರು.

‘ಪರಸ್ಪರ ಚರ್ಚಿಸಿ ಆದಷ್ಟು ಬೇಗ ಅಭ್ಯರ್ಥಿಗಳನ್ನು ಘೋಷಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಹೇಳುತ್ತೇವೆ. ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೂ ತರುತ್ತೇವೆ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ರಾಜ್ಯಸಭೆಯಲ್ಲಿ ಸಮುದಾಯದ ಪ್ರಾತಿನಿಧ್ಯದ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಲೋಕಸಭೆ ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ವಿಚಾರದಲ್ಲೂ ಹೈಕಮಾಂಡ್ ತೀರ್ಮಾನ ಮಾಡಲಿದೆ. ಪಕ್ಷದ ಹಿತದೃಷ್ಟಿಯಿಂದ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಬದ್ಧ’ ಎಂದರು.

‘ಎಲ್ಲಿ ಸಚಿವರನ್ನು ನಿಲ್ಲಿಸಬೇಕೆಂದು ಅಂದುಕೊಂಡಿದ್ದಾರೋ ಅಲ್ಲಿ ಸಚಿವರೇ ನಿಂತು ಕೆಲಸ ಮಾಡಿದರೆ ಗೆಲ್ಲಬಹುದು. ನಮ್ಮದೇ ಆದ ಸಲಹೆಗಳನ್ನು ನಾವು ಕೊಡುತ್ತೇವೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಬೇಕು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT