ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ| ಫಿರಂಗಿ ಸದ್ದಿಗೆ ಬೆಚ್ಚದ ಅಭಿಮನ್ಯು!

ದಸರಾ ಗಜಪಡೆಗಾಗಿ ಕುಶಾಲತೋಪು ಸಿಡಿಸುವ ತಾಲೀಮು
Last Updated 30 ಸೆಪ್ಟೆಂಬರ್ 2021, 15:57 IST
ಅಕ್ಷರ ಗಾತ್ರ

ಮೈಸೂರು: ಫಿರಂಗಿಯ ನಳಿಕೆಯಿಂದ ಕಿವಿಗಡಚಿಕ್ಕುವ ಶಬ್ದದೊಂದಿಗೆ ಬೆಂಕಿಯುಗುಳುತ್ತಾ ಕುಶಾಲತೋಪು ಸಿಡಿಯುತ್ತಿದ್ದಂತೆ, ಅಂಬಾರಿ ಹೊರಲಿರುವ ಅಭಿಮನ್ಯು ಆನೆ ಹಾಗೂ ಅದಕ್ಕೆ ಸಾಥ್ ನೀಡಲಿರುವ ಧನಂಜಯ, ವಿಕ್ರಮ, ಕಾವೇರಿ, ಚೈತ್ರಾ ಆನೆಗಳು ಕೊಂಚವೂ ಬೆದರಲಿಲ್ಲ. ಬದಲಿಗೆ ರಾಜಗಾಂಭೀರ್ಯದಿಂದ ನಿಂತಲ್ಲೇ ನಿಂತು ದಿಟ್ಟಿಸಿದವು. ಗಜಪಡೆಯ ಮೂರು ಆನೆಗಳು ಮಾತ್ರ ಬೆಚ್ಚಿ ಘೀಳಿಟ್ಟವು. ಕೆಲವು ಕುದುರೆಗಳು ಕೆನೆದವು.

ಜಂಬೂಸವಾರಿಯ ಸಂದರ್ಭದಲ್ಲಿ ಕುಶಾಲತೋಪು ಸಿಡಿಸಿದಾಗ ಆನೆ ಮತ್ತು ಕುದುರೆಗಳು ಬೆದರಬಾರದು ಎಂಬ ಕಾರಣಕ್ಕೆ, ಕುಶಾಲತೋಪು ಸಿಡಿಸುವ ಮೂರು ತಾಲೀಮುಗಳ ಪೈಕಿ ಮೊದಲನೇ ತಾಲೀಮು ಅರಮನೆಯ ಹೊರ ಆವರಣದಲ್ಲಿ ಗುರುವಾರ ನಡೆದಾಗ ಈ ದೃಶ್ಯಗಳು ಕಂಡುಬಂದವು.

ಲಕ್ಷ್ಮೀ ಮತ್ತು ಗೋಪಾಲಸ್ವಾಮಿ ಆನೆಗಳು ತುಸು ಹೆಚ್ಚು ಬೆದರಿ, ಹಿಂದಕ್ಕೆ ತಿರುಗಿ ಅರಮನೆಯತ್ತ ತೆರಳಲು ಹೆಜ್ಜೆ ಇಟ್ಟವು. ಅವುಗಳ ನಡುವೆ ನಿಂತಿದ್ದ ಅಶ್ವತ್ಥಾಮ ಸಹ ಗಲಿಬಿಲಿಗೆ ಒಳಗಾಯಿತು. ಕೂಡಲೇ ಮಾವುತರು ಮತ್ತು ಕಾವಾಡಿಗಳು ಆನೆಗಳನ್ನು ನಿಯಂತ್ರಿಸಿದರು.

21 ಬಾರಿ ಸಿಡಿದ ಕುಶಾಲತೋಪುಗಳಿಂದ ಹೊಮ್ಮಿದ ಬೆಂಕಿ ಉಂಡೆಗಳನ್ನು ಕಂಡು ನೋಡುಗರು ರೋಮಾಂಚಿತರಾದರು.ಕೆಲವರು ಕಿವಿಗೆ ಹತ್ತಿ ಇಟ್ಟುಕೊಂಡಿದ್ದರೆ, ಮತ್ತೆ ಕೆಲವರು ಕಿವಿಗಳನ್ನು ಪೂರ್ಣ ಮುಚ್ಚಿಕೊಂಡಿದ್ದರು. ಮುಂಜಾಗ್ರತೆಯಿಂದ ಎಲ್ಲ ಆನೆಗಳ ಕಾಲಿಗೆ ಸರಪಳಿಗಳನ್ನು ಬಿಗಿದು ಕಟ್ಟಲಾಗಿತ್ತು. ಅಗ್ನಿಶಾಮಕ ವಾಹನ, ಆಂಬುಲೆನ್ಸ್‌ಗಳನ್ನು ಸಜ್ಜುಗೊಳಿಸಲಾಗಿತ್ತು.

ನಗರ ಸಶಸ್ತ್ರ ಮೀಸಲು ಪಡೆಯ 30ಕ್ಕೂ ಹೆಚ್ಚು ಸಿಬ್ಬಂದಿ ತಾಲೀಮಿನಲ್ಲಿ ಪಾಲ್ಗೊಂಡಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಕರಿಕಾಳನ್ ಪ್ರತಿಕ್ರಿಯಿಸಿ, ‘ಮೊದಲ ದಿನದ ತಾಲೀಮಿಗೆ ಆನೆಗಳು ತೃಪ್ತಿಕರವಾಗಿ ಸ್ಪಂದಿಸಿವೆ. ಇನ್ನೆರಡು ಬಾರಿ ತಾಲೀಮು ನಡೆಸಿ, ಜಂಬೂಸವಾರಿಗೆ ಅಣಿಗೊಳಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT