ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ದಸರಾದಲ್ಲಿ ‘ಹಣದ ದರ್ಬಾರು’: ನಾಡಹಬ್ಬದ ಮೇಲೆ ಪ್ರಭಾವಿಗಳ ಹಿಡಿತ

Last Updated 22 ಸೆಪ್ಟೆಂಬರ್ 2019, 4:20 IST
ಅಕ್ಷರ ಗಾತ್ರ

ಇಡೀ ಮೈಸೂರು ಮತ್ತು ದಸರಾ ಈವೆಂಟ್‌ ಅನ್ನು ಸರಿಯಾಗಿ ಮರು ವಿನ್ಯಾಸ ಮಾಡಿ ಷೋಕೇಸ್ ಮಾಡಿದರೆ,ಒಂಬತ್ತು ದಿನ ಮಾತ್ರವಲ್ಲ, ಇಡೀ ಒಂದು ತಿಂಗಳು ದಸರಾ ಮಹೋತ್ಸವವನ್ನುಪ್ರಾಯೋಜನೆ ಮೂಲಕವೇನಡೆಸಿ ಒಂದಷ್ಟು ಆದಾಯವನ್ನು ಇಡುಗಂಟಾಗಿ ಇಡುವಷ್ಟು ಸಂಪನ್ಮೂಲ ಸಂಗ್ರಹಕ್ಕೆ ವಿಫುಲ ಅವಕಾಶಗಳಿವೆ. ಹೀಗಿದ್ದರೂ ನಾಡಹಬ್ಬದ ಸಲುವಾಗಿಸರ್ಕಾರಬಿಡುಗಡೆ ಮಾಡುವ ಹಣ ಪ‍್ರಭಾವಿಗಳ ಜೇಬುಸೇರುತ್ತಿರುವುದರ ಬಗ್ಗೆ ಪ್ರಜಾವಾಣಿ ಒಳನೋಟ ಬೆಳಕು ಚೆಲ್ಲಿದೆ.

**

ಮೈಸೂರು: ದಸರಾ ವಸ್ತು ಪ್ರದರ್ಶನದಲ್ಲಿ ₹ 10 ಲಕ್ಷಕ್ಕೆ ಮಳಿಗೆ ನಿರ್ಮಾಣದ ಗುತ್ತಿಗೆ ಪಡೆದುಕೊಂಡರೆ ಅದರಲ್ಲಿ ₹ 5–6 ಲಕ್ಷದೊಳಗೆ ಕಾಮಗಾರಿ ಮುಗಿಸಿ ಲಾಭವನ್ನೂ ತೆಗೆದುಕೊಳ್ಳಬೇಕಾದ ಪರಿಸ್ಥಿತಿಯಿದೆ. ಇನ್ನುಳಿದ ಹಣವು ಲಂಚ, ಕಮಿಷನ್‌ ರೂಪದಲ್ಲಿ ಕ್ಲರ್ಕ್‌ನಿಂದ ಹಿಡಿದು ಅಧಿಕಾರಿಗಳು, ರಾಜಕಾರಣಿಗಳ ಕೈಸೇರುತ್ತದೆ...

ದಸರಾ ಅಂಗವಾಗಿ ನಡೆಯುವ ವಸ್ತುಪ್ರದರ್ಶನದ ಮಳಿಗೆಯ ಗುತ್ತಿಗೆ ನೀಡಿಕೆ, ನಿರ್ಮಾಣದಲ್ಲಿ ಭ್ರಷ್ಟಾಚಾರ ಆವರಿಸಿಕೊಂಡಿರುವ ಬಗೆಯನ್ನು ಕಲಾ ನಿರ್ದೇಶಕರೊಬ್ಬರು ಸಂಕ್ಷಿಪ್ತವಾಗಿ ವಿವರಿಸಿದ್ದು ಹೀಗೆ.

ಸ್ತಬ್ಧಚಿತ್ರ, ವೇದಿಕೆ, ಸರ್ಕಾರಿ ಇಲಾಖೆಗಳು ಮತ್ತು ಜಿಲ್ಲಾ ಪಂಚಾಯಿತಿ ಮಳಿಗೆಗಳ ನಿರ್ಮಾಣದ ಟೆಂಡರ್‌ನಲ್ಲಿ ದೊಡ್ಡ ಲಾಬಿಯೇ ನಡೆಯುತ್ತದೆ. ಇದರಲ್ಲಿ ಇಲಾಖೆಯ ಕೆಲವು ಅಧಿಕಾರಿಗಳೇ ನೇರವಾಗಿ ಭಾಗಿಯಾಗುತ್ತಿದ್ದಾರೆ. ವಿಳಂಬವಾಗಿ ಟೆಂಡರ್‌ ಕರೆದು ತರಾತುರಿಯಲ್ಲಿ ತಮಗೆ ಬೇಕಾದವರಿಗೆ ಕಾಮಗಾರಿ ನೀಡುವ ‘ತಂತ್ರ’ ಅನುಸರಿಸಲಾಗುತ್ತದೆ.

‘ಕಳೆದ ವರ್ಷ ಆರೋಗ್ಯ ಇಲಾಖೆಯ ಮಳಿಗೆ ನಿರ್ಮಾಣಕ್ಕೆ ₹ 18 ಲಕ್ಷ ಮೌಲ್ಯ ನಿಗದಿಪಡಿಸಿ ಟೆಂಡರ್‌ ಕರೆಯಲಾಗಿತ್ತು. ಗುತ್ತಿಗೆದಾರರೊಬ್ಬರು ₹ 9 ಲಕ್ಷಕ್ಕೆ ಬಿಡ್‌ ಸಲ್ಲಿಸಿದ್ದರು. ಆದರೂ ತಮ್ಮ ಕಡೆಯವರಿಗೆ ಕಾಮಗಾರಿ ನೀಡುವ ಉದ್ದೇಶದಿಂದ ಇಡೀ ಟೆಂಡರ್‌ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ್ದರು’ ಎಂದು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಬೆಂಗಳೂರಿನ ಗುತ್ತಿಗೆದಾರರೊಬ್ಬರು ಆರೋಪಿಸುತ್ತಾರೆ.

ಟೆಂಡರ್‌ ಗೋಲ್‌ಮಾಲ್‌ ಒಂದೆರಡು ಇಲಾಖೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಖಡಕ್ ಅಧಿಕಾರಿಗಳು ಇಲ್ಲದ ಇಲಾಖೆಗಳಲ್ಲಿ ಇದು ಸಾಮಾನ್ಯ. ತಾಂತ್ರಿಕ ಬಿಡ್‌ನಲ್ಲಿ ವಿವಿಧ ಕಾರಣ ನೀಡಿ ಅರ್ಹರಿಗೆ ಅವಕಾಶವನ್ನು ತಪ್ಪಿಸಲಾಗುತ್ತದೆ. ಟೆಂಡರ್‌ ಸಲ್ಲಿಸುವ ಸಂಸ್ಥೆಗಳ ಅನುಭವ, ಹೊಂದಿರುವ ತಾಂತ್ರಿಕ ಗುಣಮಟ್ಟ ಗಣನೆಗೆ ಬರುವುದಿಲ್ಲ. ಕೆಲವು ಇಲಾಖೆಗಳು ಮಳಿಗೆ ನಿರ್ಮಾಣದ ಹೊಣೆಯನ್ನು ಏಜೆನ್ಸಿಗಳಿಗೆ ವಹಿಸಿರುತ್ತವೆ. ಆ ಏಜೆನ್ಸಿ ಶಿಫಾರಸು ಮಾಡುವವರಿಗೆ ಕಾಮಗಾರಿ ದೊರೆಯುವುದು ಖಚಿತ.

ಜಿಲ್ಲಾ ಪಂಚಾಯಿತಿಗಳ ಮಳಿಗೆ, ಸ್ತಬ್ಧಚಿತ್ರಗಳ ಗುತ್ತಿಗೆ ನೀಡಿಕೆಯಲ್ಲೂ ಅವ್ಯವಹಾರದ ವಾಸನೆ ಬಡಿಯುತ್ತದೆ. ಜಿಲ್ಲಾ ಪಂಚಾಯಿತಿಯಲ್ಲಿ ಆಡಳಿತ ನಡೆಸುವ ಪಕ್ಷದವರು ಶಿಫಾರಸು ಮಾಡುವವರಿಗೆ ಕಾಮಗಾರಿ ವಹಿಸಿಕೊಡಲಾಗುತ್ತದೆ. ಕಲಾವಿದರಿಗೆ ಚಿಕ್ಕಾಸಿನ ಬೆಲೆಯಿಲ್ಲ. ಸಾಮಾನ್ಯ ಕಾರ್ಪೆಂಟರ್‌ಗಳು ಕೂಡ ಪ್ರಭಾವ ಬಳಸಿಕೊಂಡು ಸ್ತಬ್ಧಚಿತ್ರ ನಿರ್ಮಾಣದ ಅವಕಾಶ ಗಿಟ್ಟಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ.

ಜಿಲ್ಲಾ ಪಂಚಾಯಿತಿಯ ಸ್ತಬ್ಧಚಿತ್ರಕ್ಕೆ ₹ 6 ರಿಂದ ₹ 8 ಲಕ್ಷದವರೆಗೆ ಕಾಮಗಾರಿ ಗುತ್ತಿಗೆ ನೀಡಲಾಗುತ್ತದೆ. ಗುತ್ತಿಗೆ ಪಡೆದುಕೊಳ್ಳಲು ಕನಿಷ್ಠ ₹ 1–2 ಲಕ್ಷ ‘ಕಮಿಷನ್’ ನೀಡಬೇಕು. ಕೆಲವೊಮ್ಮೆ ಟೆಂಡರ್‌ ಪಡೆದುಕೊಂಡವರು ಅದನ್ನು ಕಲಾವಿದರಿಗೆ ಉಪ ಗುತ್ತಿಗೆಗೆ ನೀಡುವರು. ಮಳಿಗೆ, ಸ್ತಬ್ಧಚಿತ್ರ ನಿರ್ಮಾಣಕ್ಕೆ ಹಗಲು ರಾತ್ರಿ ದುಡಿಯುವ ಕಲಾವಿದರಿಗೆ ಬಿಡಿಗಾಸು ಮಾತ್ರ ಸಿಗುತ್ತದೆ.

ಯುವ ದಸರಾ ಹೆಸರಲ್ಲಿ ಲೂಟಿ
ಯುವ ಸಮೂಹದಲ್ಲಿ ‘ಕ್ರೇಜ್‌’ ಹುಟ್ಟಿಸುವ ಉದ್ದೇಶದೊಂದಿಗೆ ಆರಂಭವಾದ ಯುವ ದಸರಾದಲ್ಲಿ ಲಕ್ಷ ಲಕ್ಷ ಲೂಟಿ ನಡೆಯುತ್ತದೆ ಎಂಬ ಆರೋಪ ಇದೆ. ಹಣ ಗಳಿಕೆಯೇ ಈ ಕಾರ್ಯಕ್ರಮದ ಮೂಲ ಉದ್ದೇಶ ಎನಿಸಿಕೊಂಡಿದೆ.

‘ಹೊರ ರಾಜ್ಯಗಳ ಕಲಾವಿದರನ್ನು ಕರೆಸಲು ಲಕ್ಷಾಂತರ ರೂಪಾಯಿ ಸುರಿಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟಿನ ದಂಧೆ ನಡೆಯುತ್ತದೆ. ಇಲ್ಲಿ ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಮತ್ತು ಅಧಿಕಾರಿಗಳ ನಡುವೆ ಒಳ ಒಪ್ಪಂದ ನಡೆಯುತ್ತದೆ. ₹ 25 ಲಕ್ಷ ನೀಡಿ ಕಲಾವಿದರನ್ನು ಕರೆಸಿದರೆ, ಐದು ಲಕ್ಷ ತಮ್ಮಲ್ಲೇ ಇರಿಸಿಕೊಳ್ಳುತ್ತಾರೆ. ಇದು ಮುಚ್ಚುಮರೆಯಿಲ್ಲದೆ ನಡೆಯುವ ವ್ಯವಹಾರ’ ಎಂದು ಕಲಾವಿದರೊಬ್ಬರು ಹೇಳುವರು.

ಪ್ರಭಾವಿಗಳ ಮುಷ್ಟಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡ ಬೇಕು ಎಂಬುದು ಪ್ರತಿಯೊಬ್ಬ ಕಲಾವಿದನ ಕನಸು. ನಾಡಹಬ್ಬದಲ್ಲಿ ಒಂದು ಅವಕಾಶಕ್ಕಾಗಿ ಹಾತೊರೆಯುತ್ತಾರೆ. ಆದರೆ ಇಲ್ಲಿ ಅವಕಾಶ ಗಿಟ್ಟಿಸಲು ಪ್ರಭಾವಿಗಳ ಶಿಫಾರಸು ಪತ್ರವೇ ಅರ್ಹತೆಯ ಮಾನದಂಡ ಎಂಬಂತಾಗಿದೆ.

ರಾಜಕೀಯ ಪಕ್ಷಗಳ ಮುಖಂಡರು ಮತ್ತು ಅಧಿಕಾರಿಗಳ ಮಾತೇ ಅಂತಿಮ. ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾ ತಂಡಗಳ ಆಯ್ಕೆಗೂ ಲಾಬಿ.

‘ಅರಮನೆಯ ಘನತೆಗೆ ಕುಂದುಂಟಾಗುವ ಕಾರ್ಯಕ್ರಮಗಳು ನಡೆಯುತ್ತಿರುವುದು ದುರಂತ. ವೈವಿಧ್ಯ ಮತ್ತು ಗುಣಮಟ್ಟದ ಕಾರ್ಯಕ್ರಮಗಳು ಅರಮನೆ ಆವರಣದಲ್ಲಿ ನಡೆಯಬೇಕು. ಶಾಸ್ತ್ರೀಯ, ಜಾನಪದ, ಸುಗಮ ಸಂಗೀತದ ಒಟ್ಟು ಸಮ್ಮಿಲನದಲ್ಲಿ ಸರ್ವರಿಗೂ ಮೆಚ್ಚುಗೆಯಾಗುವ ಕಾರ್ಯಕ್ರಮದಿಂದ ನೋಡುಗರಿಗೆ ಖುಷಿ ಉಂಟಾ ಗುತ್ತದೆ’ ಎಂಬುದು ರಂಗಕರ್ಮಿಯೊಬ್ಬರ ಅನಿಸಿಕೆ.

ಪಾಸ್‌ ಅವ್ಯವಸ್ಥೆ ಬಗೆಹರಿಸಲು ಪರಿಣತರ ಸಲಹೆ
* ಪಾಸ್‌ ಬೇಡ; ಬದಲಾಗಿ ಎಲ್ಲವನ್ನೂ ಟಿಕೆಟ್‌ ಆಗಿ ಪರಿವರ್ತಿಸಿ ಮಾರಾಟ ಮಾಡಿ
* ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಇತರರು ಹಣ ನೀಡಿಯೇ ಟಿಕೆಟ್‌ ಖರೀದಿಸಲಿ
* ಟಿಕೆಟ್‌ನಿಂದ ಬರುವ ಹಣವನ್ನು ಮೈಸೂರು ನಗರಾಭಿವೃದ್ಧಿಗೆ, ದಸರೆ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಿ
* ಸರತಿ ಸಾಲಿನಲ್ಲಿ ಬಂದವರ ಆಧಾರ್‌ ಸಂಖ್ಯೆ ಪಡೆದು ಒಬ್ಬರಿಗೆ 2 ಟಿಕೆಟ್‌ ನೀಡಬೇಕು
* ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿ ಟಿಕೆಟ್‌ ವಿತರಣೆ ಪ್ರಕ್ರಿಯೆ ಸೆರೆ ಹಿಡಿಯಬೇಕು. ಇದರಿಂದ ಕಾಳಸಂತೆಯಲ್ಲಿನ ಮಾರಾಟ ತಪ್ಪಿಸಬಹುದು
* ಎಷ್ಟು ಟಿಕೆಟ್‌ ಮಾರಾಟಕ್ಕಿವೆ, ಹಣವೆಷ್ಟು, ಎಲ್ಲಿ ಸಿಗುತ್ತವೆ ಎಂಬ ಪ್ರಕಟಣೆ ನೀಡಬೇಕು

**

ಸರ್ಕಾರ ಏನು ಮಾಡಬೇಕು?
* ದಸರಾ ಶಾಶ್ವತ ಪ್ರಾಧಿಕಾರ ರಚಿಸಬೇಕು
* 3 ತಿಂಗಳ ಮೊದಲೇ ಸಿದ್ಧತೆ, ಕಾಮಗಾರಿ ಆರಂಭವಾಗಬೇಕು
* ರಸ್ತೆಗಳ ದುರಸ್ತಿ ಕೈಗೊಂಡರೆ ಕನಿಷ್ಠ 10 ವರ್ಷಗಳಾದರೂ ಬಾಳಿಕೆ ಬರುವಂತೆ ನೋಡಿಕೊಳ್ಳಬೇಕು
* ಜನಪ್ರತಿನಿಧಿಗಳ ಉಪಸಮಿತಿ ರಚನೆ ಕೈಬಿಡಬೇಕು
* ಚೆಕ್‌ ಮೂಲಕವೇ ಕಲಾವಿದರಿಗೆ ಹಣ ಸಂದಾಯವಾಗಬೇಕು
* ಪ್ರವಾಸೋದ್ಯಮ ಇಲಾಖೆಯು ಚುರುಕಾಗಿ ಕಾರ್ಯನಿರ್ವಹಿಸಬೇಕು
* ಪ್ರವಾಸಿ ತಾಣಗಳಲ್ಲಿ ಏಕ ಟಿಕೆಟ್ ವ್ಯವಸ್ಥೆ ಜಾರಿಗೆ ತರಬೇಕು
* ವಾರ್ಷಿಕ ಕ್ಯಾಲೆಂಡರ್‌ ರೂಪಿಸಿ ದಸರೆ ಬಗ್ಗೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನಡೆಸಬೇಕು
* ದಸರೆ ವೇಳೆ ಪ್ರವಾಸಿ ವಾಹನಗಳ ಪ್ರವೇಶಕ್ಕೆ ತೆರಿಗೆ ವಿನಾಯಿತಿ ನೀಡುವುದು
* ಖರ್ಚಿನ ಮೇಲೆ ನಿಗಾ ಇಡಲು ಲೆಕ್ಕಪತ್ರಗಳ ಪರಿಶೀಲನಾ ಸಮಿತಿ ಹಾಗೂ ಲೆಕ್ಕ ಪರಿಶೋಧನಾ ಸಮಿತಿ ರಚಿಸಬೇಕು

***

ಮಿತಿ ಬೇಡವೇ?
ಇದು ದಸರಾ ಅಲ್ಲವೇ ಅಲ್ಲ. ನಾಡದೇವಿಯ ಹಬ್ಬ. ಆದರೆ, ಆಯಾ ಸರ್ಕಾರದ ಮಂತ್ರಿ ಮಿಂಚುವುದಕ್ಕೆ, ಆಡಳಿತಾರೂಢ ಪಕ್ಷದ ಕಾರ್ಯಕರ್ತರು ಒಂದಷ್ಟು ವ್ಯವಹಾರ ಮಾಡಿಕೊಳ್ಳುವುದಕ್ಕೆ ಸೀಮಿತವಾಗುತ್ತಿದೆ.

ಈ ಬಾರಿಯ ದಸರಾದಲ್ಲಿ ಕೇಂದ್ರದ ಸಾಧನೆ ಬಿಂಬಿಸುತ್ತಾರಂತೆ. ಪ್ರಧಾನಿ ಮೋದಿ ಗುಹೆಯಲ್ಲಿ ಧ್ಯಾನಾಸಕ್ತರಾದ ಸ್ತಬ್ಧಚಿತ್ರವನ್ನು ನಾವೂ ನೋಡಬೇಕೆ? ಚಮಚಾಗಿರಿಗೆ ಮಿತಿ ಬೇಡವೇ? ಕರ್ನಾಟಕದ ಪರಂಪರೆ, ಸಂಸ್ಕೃತಿ ಬಿಂಬಿಸಲಿ. ನವರಾತ್ರಿಯ ವೈಶಿಷ್ಟ್ಯ ಪ್ರದರ್ಶಿಸಲಿ.
– ಪ್ರೊ.ಪಿ.ವಿ.ನಂಜರಾಜ ಅರಸ್‌, ಇತಿಹಾಸ ತಜ್ಞ

**
ಸದಭಿಪ್ರಾಯ ಮೂಡಿಸುವಿಕೆ

ದಸರಾ ನಮ್ಮ ಪರಂಪರೆಯನ್ನಷ್ಟೇ ಬಿಂಬಿಸು ವುದಿಲ್ಲ. ಅಷ್ಟೊಂದು ಜನ ಸೇರಿಯೂ ಶಾಂತಿ ಯುತವಾಗಿ ನಡೆಯುವ ಈ ಸಂದರ್ಭದ ಬಗ್ಗೆ ವಿದೇಶಗಳಲ್ಲಿ ಸದಭಿಪ್ರಾಯವನ್ನೂ ಮೂಡಿಸುತ್ತಿದೆ. ಇದು ಮೈಸೂರಿ ಗಷ್ಟೇ ಹಿರಿಮೆಯಲ್ಲ. ದೇಶಕ್ಕೂ ಕೀರ್ತಿ ತರುತ್ತದೆ. ನಮ್ಮಲ್ಲಿ ಹೂಡಿಕೆಗೆ ಪೂರಕವಾದ ವಾತಾವರಣವಿದೆ ಎಂಬ ಸದಭಿಪ್ರಾಯ ಮೂಡಿದಾಗ, ವಿದೇಶಿಗರು ಬಂಡವಾಳ ಹೂಡುವುದು ಹೆಚ್ಚುತ್ತದೆ. ಇದರಿಂದ ಆರ್ಥಿಕತೆಗೆ ಬಲ ಸಿಗುವ ಜತೆಯಲ್ಲೇ ಉದ್ಯೋಗವೂ ಸೃಷ್ಟಿಯಾಗಲಿವೆ.
ಧರಣಿದೇವಿ ಮಾಲಗತ್ತಿ, ಪ್ರಾಂಶುಪಾಲರು, ಪೊಲೀಸ್ ತರಬೇತಿ ಶಾಲೆ, ಮೈಸೂರು

**

ಹೊಸತನ ಬರಲಿ
ಜನರ ನಿರೀಕ್ಷೆಗೆ ತಕ್ಕಂತೆ ದಸರಾ ಮರು ವಿನ್ಯಾಸಗೊಳ್ಳಬೇಕಿದೆ. ಇದೀಗ ಎಲ್ಲರ ಅಂಗೈನಲ್ಲೂ ಜಗತ್ತಿದೆ. ಇದಕ್ಕೆ ಪೂರಕವಾಗಿ ದಸರಾ ರೂಪುಗೊಳ್ಳಬೇಕು. ನಮಗೆ ಎಲ್ಲವೂ ಗೊತ್ತು ಎಂದು ನಾಮಕಾವಾಸ್ತೆ ಆಚರಣೆಗೆ ಮುಂದಾಗದೆ, ವಿಶ್ವ ದರ್ಜೆಯ ಇವೆಂಟ್‌ ಮ್ಯಾನೇಜ್‌ಮೆಂಟ್‌ ಹಾಗೂ ತಜ್ಞರ ಸಹಕಾರ ಪಡೆಯಬೇಕು. ಹೊಸ ಆಲೋಚನೆ ನಡೆಯಲಿ. ಮೈಸೂರಿನ ಸಂಗೀತ, ಕಲೆ, ಅರಮನೆ, ಸೌಂದರ್ಯ ಸೇರಿದಂತೆ ಎಲ್ಲವನ್ನೂ ವ್ಯವಸ್ಥಿತವಾಗಿ ಪ್ರದರ್ಶಿಸಬೇಕು. ಈ ಬಾರಿಯ ದಸರಾ ಮುಗಿಯುತ್ತಿದ್ದಂತೆ, ಮುಂದಿನ ಆಚರಣೆಯ ರೂಪುರೇಷೆ ಆರಂಭವಾಗಬೇಕು. ಹೊಸತನ ಅಳವಡಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ.
– ಕೃಷ್ಣಪ್ರಸಾದ್‌, ಪತ್ರಕರ್ತ

**

ಲೌಕಿಕ ಆರಾಧನೆ
ದಸರಾ ಧಾರ್ಮಿಕ ಆರಾಧನೆಯಲ್ಲ. ಲೌಕಿಕ ಮಾದರಿಯ ಆರಾಧನೆ. ರಾಜರ ಶೌರ್ಯ ಪ್ರದರ್ಶನದ ಹಬ್ಬವಿದು. ಆಯುಧಗಳ ಆರಾಧನೆ ನಡೆಯಲಿದೆ. ಆನೆ, ಕುದುರೆ, ಸೈನ್ಯವೇ ಇಲ್ಲಿ ಮುಖ್ಯ. ಎಲ್ಲ ಗ್ರಾಮೀಣರು ಆಚರಿಸುವ ಹಬ್ಬ ಇದಲ್ಲ. ಈಚೆಗೆ ಬೇರೆ ಬೇರೆ ಸ್ವರೂಪ ಹೊಂದಿದೆ.ಹಾಡು, ಸಂಗೀತ, ಪೂಜೆ ಸಮ್ಮಿಶ್ರಣದ ಮನರಂಜನೆಯ ಸಂಗತಿಯಾಗಿದ್ದು,ಸರ್ಕಾರದಿಂದಲೇ ಆಚರಿಸಲಾಗುತ್ತಿದೆ.
– ಹನೂರು ಕೃಷ್ಣಮೂರ್ತಿ, ಸಾಹಿತಿ‌‌

**

ನವಿರುಗೊಳ್ಳಲಿ
ದಸರಾ ಸಂಭ್ರಮ ದೊಂಬಿ ರೂಪದಲ್ಲಿದೆ. ಹಲವು ಆಯಾಮ ಇರುವುದನ್ನು ಅರಿತು ಆಚರಿಸಬೇಕು. ಎಲ್ಲವೂ ಇರಬೇಕು. ಇದರ ಜತೆಯಲ್ಲೇ ಸಂಗೀತ, ನೃತ್ಯ, ಕಲೆಗೆ ಹೆಚ್ಚಿನ ಮನ್ನಣೆ ಸಿಗಬೇಕು. ಇವುಗಳನ್ನು ಆಸ್ವಾದಿಸುವ ಪೂರಕ ವಾತಾವರಣ ಸೃಷ್ಟಿಸಬೇಕು. ಎಲ್ಲವೂ ನವಿರುಗೊಳ್ಳುವ ಜೊತೆಗೆ ಗಾಂಭೀರ್ಯವೂ ಇರಬೇಕು. ಆಡಳಿತಾರೂಢರು ಸಂವೇದನೆಯ ಅಂತಃಕರಣ ಗುರುತಿಸಿ, ದೊಂಬಿತನ ಸ್ವಚ್ಛಗೊಳಿಸಬೇಕು.
– ಪಂಡಿತ್ ರಾಜೀವ್‌ ತಾರಾನಾಥ್, ಸರೋದ್ ವಾದಕರು

**
ಜನರ ಉತ್ಸವವಾಗಲಿ

ಮೈಸೂರು ದಸರಾ ಸರ್ಕಾರಿ ಉತ್ಸವದ ಬದಲು ಜನರ ಉತ್ಸವವಾಗಲಿ ಎಂಬುದೇ ನನ್ನ ಆಶಯ. ಅಧಿಕಾರಿಯಾಗಿದ್ದಾಗಲೂ ಇದನ್ನೇ ಪ್ರತಿಪಾದಿಸಿದ್ದೆ. ರಾಜ್ಯೋತ್ಸವದ ಬದಲು ಧಾರ್ಮಿಕ– ಪ್ರಜೋತ್ಸವವಾಗಿ ಆಚರಣೆಯಾಗಬೇಕು.

– ಚಿರಂಜೀವಿಸಿಂಗ್, ನಿವೃತ್ತ ಐಎಎಸ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT