ನಾ. ಡಿಸೋಜ ಅವರು ಬರವಣಿಗೆಯಲ್ಲಿ ಮಾತ್ರವಲ್ಲದೆ ಪರಿಸರ ಹೋರಾಟದಲ್ಲೂ ಪಾತ್ರ ವಹಿಸಿದ್ದಾರೆ. ಇಕ್ಕೇರಿಯಲ್ಲಿ ಗಣಿಬೇಡ ಹೋರಾಟ ಅಂಬುತೀರ್ಥದಿಂದ ಅರಬ್ಬಿ ಸಮುದ್ರದವರೆಗಿನ ಶರಾವತಿ ನಡೆ ಸಾಗರದಲ್ಲಿ ರೈಲ್ವೆ ಹೋರಾಟ ಮಲೆನಾಡಿನಲ್ಲಿ ಕಲ್ಲು ಗಣಿಗಾರಿಕೆ ವಿರುದ್ಧದ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಸ್ಥಳೀಯರಿಗೆ ಸಮಸ್ಯೆ ಎದುರಾದಾಗ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯಲು ರಾಜ್ಯ ಸರ್ಕಾರ ಮುಂದಾದಾಗ ಸಮಾನ ಮನಸ್ಕರೊಂದಿಗೆ ಸೇರಿ ನಾ.ಡಿಸೋಜಾ ಮತ್ತೆ ಬೀದಿಗಿಳಿದಿದ್ದರು. ‘ಈ ಅವೈಜ್ಞಾನಿಕ ಯೋಜನೆಯನ್ನು ವಿರೋಧಿಸಬೇಕು. ಬೇಸಿಗೆಯಲ್ಲಿ ಸ್ಥಳೀಯ ಜನರು–ಜಾನುವಾರುಗಳಿಗೆ ನೀರು ಸಾಕಾಗುವುದಿಲ್ಲ. ಅದರ ಪ್ರಸ್ತಾವವೇ ಮೂರ್ಖತನದ್ದು’ ಎಂದು ಕಟುವಾಗಿ ಹೇಳಿದ್ದರು.