ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮೋಹನದಾಸ್‌ ಕಾಂಗ್ರೆಸ್‌ ಟೂಲ್‌ ಕಿಟ್‌: ಸಿ.ಟಿ.ರವಿ

Published 21 ಆಗಸ್ಟ್ 2023, 13:17 IST
Last Updated 21 ಆಗಸ್ಟ್ 2023, 13:17 IST
ಅಕ್ಷರ ಗಾತ್ರ

ಬೆಂಗಳೂರು: ‘ಶೇ 40 ಲಂಚ ಆರೋಪದ ತನಿಖೆಗೆ ನಾಗಮೋಹನದಾಸ್‌ ಸಮಿತಿ ರಚನೆ ಕಾಂಗ್ರೆಸ್‌ ಟೂಲ್‌ ಕಿಟ್‌ ಭಾಗವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಗತ್ಯಕ್ಕೆ ತಕ್ಕಂತೆ ವರದಿ ಕೊಡುತ್ತಾರೆ’ ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

‘ನಾಗಮೋಹನ್‌ದಾಸ್‌ ನಿಷ್ಪಕ್ಷವಾಗಿ ತನಿಖೆ ಮಾಡುತ್ತಾರೆ ಎನ್ನುವ ವಿಶ್ವಾಸವಿಲ್ಲ. ಈ ಹಿಂದೆಯೂ ಇವರು ಕಾಂಗ್ರೆಸ್‌ನ ಮರ್ಜಿಗೆ ತಕ್ಕಂತೆ ಕೆಲಸ ಮಾಡಿದ್ದರು’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ತಮ್ಮ ಟೂಲ್‌ ಕಿಟ್‌ ರೀತಿ ಕೆಲಸ ಮಾಡಿಸಲು ನಾಗಮೋಹನ್‌ ದಾಸ್‌ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಮುಂದಿನ ಲೋಕಸಭೆ ವೇಳೆಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ಒಂದು ಮಧ್ಯಂತರ ವರದಿ ಪಡೆದುಕೊಂಡು ಅಜೆಂಡಾ ಸೆಟ್‌ ಮಾಡಲು ಕಾಂಗ್ರೆಸ್‌ ಇವರನ್ನು ಬಳಸಿಕೊಳ್ಳುತ್ತಿದೆ’ ಎಂದರು.

‘ಶೇ 40 ರಷ್ಟು ಲಂಚಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಪ್ರಕರಣಗಳಿಲ್ಲ. ಹುಸಿ ನಿರೂಪಣೆ ಮೂಲಕ ಅದನ್ನು ಸೃಷ್ಟಿಸಲಾಗಿತ್ತು. ನಿರ್ದಿಷ್ಟ ಪ್ರಕರಣಗಳಿದ್ದರೆ ಎಫ್‌ಐಆರ್ ದಾಖಲಿಸಿ, ಲೋಕಾಯುಕ್ತಕ್ಕೆ ದೂರು ನೀಡಲಿ. ಅಕ್ರಮಗಳು ಮತ್ತು ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡುವ ಮನಸ್ಸಿದ್ದರೆ 2013 ರಿಂದಲೂ ತನಿಖೆ ನಡೆಸಬೇಕು’ ಎಂದು ರವಿ ಆಗ್ರಹಿಸಿದರು.

ಮಸಾಲೆ ಅರೆಯೋದು ನಮಗೂ ಗೊತ್ತು:

‘ಕೋಳಿ ಕೇಳಿ ಮಸಾಲೆ ಅರೆಯಲ್ಲ’ ಎನ್ನುವ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿ, ‘ಯಾರೂ ಕೋಳಿನ ಕೇಳಿ ಮಸಾಲೆ ಅರೆಯಲ್ಲ. ಮಸಾಲೆ ಅರೆಯುವುದು ಕಾಂಗ್ರೆಸ್‌ನವರಿಗೆ ಮಾತ್ರವಲ್ಲ. ನಮಗೂ ಚೆನ್ನಾಗಿ ಗೊತ್ತು. ಮಲೆನಾಡಿನವರಿಗೆ ಇನ್ನೂ ಚೆನ್ನಾಗಿ ಅರೆಯುತ್ತಾರೆ’ ಎಂದು ಕಾಲೆಳೆದರು.

‘ನಮ್ಮ ಪಕ್ಷ ಬಿಟ್ಟು ಯಾರೂ ಹೋಗಲ್ಲ. ಪಕ್ಷ ಬಿಟ್ಟು ಹೋಗ್ತಾರೆ ಎನ್ನುವುದು ಊಹಾಪೋಹ. ಪಕ್ಷ ಕಟ್ಟಿದವರಿಗೆ ಪಕ್ಷ ಬೆಳೆಸೋದು ಮತ್ತು ಉಳಿಸೋದು ಗೊತ್ತಿದೆ. ಈಗ ಯಾರೆಲ್ಲ ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ಪ್ರಚಾರ ಇದೆಯಲ್ಲ. ಅವರು ಯಾರೂ ಪಕ್ಷ ಬಿಡುವುದಿಲ್ಲ’ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಲೋಡ್‌ ಶೆಡ್ಡಿಂಗ್ ಹೆಚ್ಚಾಗಿದೆ. ಇದರಿಂದ ಕರ್ನಾಟಕವನ್ನು ಕತ್ತಲಿಗೆ ದೂಡಿದಂತಾಗಿದೆ. ವಿದ್ಯುತ್‌ ದರವೂ ದುಪ್ಪಟಾಗಿ ರಾಜ್ಯದ ಜನತೆ ಸಂಕಷ್ಟಕ್ಕೀಡಾಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT