ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮ, ದಾನ, ಭೇದ, ದಂಡ ಬಳಸಿ ಮರು ಮತಾಂತರಕ್ಕೆ ಮುಂದಾಗಬೇಕು: ಸಿ.ಟಿ. ರವಿ

Published 16 ಜೂನ್ 2023, 11:10 IST
Last Updated 16 ಜೂನ್ 2023, 11:10 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಮತಾಂತರ ನಿಷೇಧ ಕಾಯ್ದೆ ಹಿಂದಕ್ಕೆ ಪಡೆದಿರುವುದರಿಂದ ದೇಶ ಮತ್ತು ಹಿಂದೂ ಧರ್ಮ ಉಳಿಸಿಕೊಳ್ಳಲು ಎಲ್ಲಾ ಸಮುದಾಯದ ಮಠಾಧೀಶರು ಮಹಾ ಪಂಚಾಯತ್ ಕರೆಯಬೇಕು. ಸಾಮ, ದಾನ, ಭೇದ, ದಂಡ ಬಳಸಿ ಮರು ಮತಾಂತರಕ್ಕೆ ಮುಂದಾಗುವ ಅನಿವಾರ್ಯತೆ ಇದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಪಾದಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಲವಂತದ ಮತ್ತು ಆಮಿಷದ ಮತಾಂತರದ ವಿರುದ್ಧ ಇದ್ದ ಕಾಯ್ದೆಯನ್ನು ಈಗ ಕಾಂಗ್ರೆಸ್ ಹಿಂಪಡೆದಿದೆ. ಆ ಮೂಲಕ ಬಲವಂತದ ಮತಾಂತರದ ಪರವಾಗಿದೆ ಎಂಬುದನ್ನು ತೋರ್ಪಡಿಸಿದೆ’ ಎಂದರು.

‘ನಮ್ಮನ್ನು ನಾವು ಉಳಿಸಿಕೊಳ್ಳಲು ಸ್ವರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಬೇರೆ ಬೇರೆ ಕಾರಣಕ್ಕೆ ಹಿಂದೂ ಧರ್ಮದಿಂದ ಹೊರ ಹೋದವರನ್ನು ಮರಳಿ ಕರೆತರಬೇಕಾದ ಅವಶ್ಯಕತೆ ಇದೆ’ ಎಂದು ಅವರು ಹೇಳಿದರು.

‘ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಕುರಿತ ಪಾಠವನ್ನು ಪಠ್ಯದಿಂದ ಕೈಬಿಡಲಾಗಿದೆ. ಚಕ್ರವರ್ತಿ ಸೂಲಿಬೆಲೆ ಬರೆದಿದ್ದ ಲೇಖನ ದೇಶಪ್ರೇಮಿಗಳ ಬಗ್ಗೆಯೇ ಹೊರತು ಸೂಲಿಬೆಲೆ ಜೀವನ ಚರಿತ್ರೆ ಅಲ್ಲ. ಹೆಡಗೇವಾರ್ ಅವರ ಪಾಠವನ್ನೂ ಕೈಬಿಡಲಾಗಿದೆ. ಕಾಂಗ್ರೆಸ್‌ ನಾಯಕರಿಗೆ ದೇಶಭಕ್ತಿ ಎಂದರೆ ಅಸಹನೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ ಜತೆ ರಾಹುಲ್‌ ಗಾಂಧಿ ಒಪ್ಪಂದ ದೇಶಭಕ್ತಿಗೆ ವಿರುದ್ಧವಾದುದು ಎಂಬ ಅನುಮಾನ ಬರುತ್ತಿದೆ’ ಎಂದರು.

‘ಕಾಂಗ್ರೆಸ್‌ಗೆ ಅಂಬೇಡ್ಕರ್ ಕಂಡರೆ ಮಾತ್ರ ಅಸಹನೆ ಎಂದುಕೊಂಡಿದ್ದೆ. ಭಗತ್ ಸಿಂಗ್, ರಾಜಗುರು, ಸುಖದೇವ್ ಬಗ್ಗೆಯೂ ಅಸಹನೆ ಇದೆ ಎಂಬುದು ಅರ್ಥವಾಗಿದೆ. ನಾವು ಇದೇ ಪಠಗಳನ್ನು ಜನರ ಮುಂದೆ ಕೊಂಡೊಯ್ಯುತ್ತೇವೆ. ತಪ್ಪು ಹುಡುಕಲು ಜನರನ್ನು ಕೇಳುತ್ತೇವೆ’ ಎಂದು ಹೇಳಿದರು. 

‘ಎಪಿಎಂಸಿ ತಿದ್ದುಪಡಿ ಕಾಯ್ದೆಯಲ್ಲಿ ರೈತರೂ ಉದ್ದಿಮೆದಾರರಾಗುವ ಅವಕಾಶ ಇತ್ತು. ಅದನ್ನು ಹಿಂಪಡೆಯುವ ಮೂಲಕ ರೈತರನ್ನು ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ಸಿಲುಕಿಸುವುದು ಕಾಂಗ್ರೆಸ್ ಉದ್ದೇಶ. ಕಾಂಗ್ರೆಸ್ ಸುಳ್ಳು ಹೇಳಿ ರೈತರ ದಿಕ್ಕು ತಪ್ಪಿಸಿದೆ. ಸದ್ಯದಲ್ಲೇ ಸತ್ಯ ರೈತರಿಗೆ ಅರಿವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT