ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಟ್ಟಿಹಳ್ಳಿ ಇಎಸ್‌ಜೆಡ್‌: ರಾಜ್ಯ ಸರ್ಕಾರಕ್ಕೆ ಗಡುವು

Published 25 ನವೆಂಬರ್ 2023, 16:31 IST
Last Updated 25 ನವೆಂಬರ್ 2023, 16:31 IST
ಅಕ್ಷರ ಗಾತ್ರ

ನವದೆಹಲಿ: ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ವಲಯ (ಇಎಸ್‌ಜೆಡ್) ಅಧಿಸೂಚನೆ ವಿಳಂಬಕ್ಕೆ ಕಾರಣವಾಗಿರುವ ಸಮಸ್ಯೆಗಳನ್ನು ಆರು ತಿಂಗಳೊಳಗೆ ಪರಿಹರಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.

ಮಾಧ್ಯಮ ವರದಿಗಳನ್ನು ಆಧರಿಸಿ ನ್ಯಾಯಮಂಡಳಿಯ ಪ್ರಧಾನ ಪೀಠವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ನೇತೃತ್ವದ ಪೀಠವು ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕುರಿತು ಕಳವಳ ವ್ಯಕ್ತಪಡಿಸಿದೆ. ಈ ಸಮಸ್ಯೆಯ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (ಪಿಸಿಸಿಎಫ್) ನಿರ್ದೇಶನ ನೀಡಿದೆ.

‘ಸುದ್ದಿಯಲ್ಲಿ ಪ್ರಸ್ತಾಪಿಸಿರುವ  ಅಂಶಗಳನ್ನು ಸರಿಯಾಗಿ ಪರಿಗಣಿಸಿ ಆರು ತಿಂಗಳ ಒಳಗೆ ಕಾನೂನಿನ ಪ್ರಕಾರ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೀಠ ಹೇಳಿದೆ. ಜತೆಗೆ, ಪ್ರಕರಣದ ವಿಲೇವಾರಿ ಮಾಡಿದೆ.

ವನ್ಯಜೀವಿಧಾಮದ ಕರಡು ಅಧಿಸೂಚನೆಯನ್ನು 1974ರಲ್ಲಿ ಹೊರಡಿಸಲಾಗಿತ್ತು. 1977ರಲ್ಲಿ ಅಂತಿಮ ಅಧಿಸೂಚನೆ ಪ್ರಕಟಗೊಂಡಿತ್ತು. ಅಭಯಾರಣ್ಯದ ವ್ಯಾಪ್ತಿಗೆ ಪಟ್ಟಣದ ಪ್ರದೇಶಗಳು, ಹಳ್ಳಿಗಳು ಹಾಗೂ ಕೃಷಿ ಭೂಮಿಗಳನ್ನು ಸೇರಿಸಿ ಈ ಅಧಿಸೂಚನೆ ಹೊರಡಿಸಲಾಗಿತ್ತು. 

ಬಳಿಕ ಅರಣ್ಯ ಇಲಾಖೆಯು ಗಡಿ ಪರಿಷ್ಕರಣಾ ಸಮಿತಿ ರಚಿಸಿ ವರದಿ ಪಡೆದಿತ್ತು. ’1974ರಲ್ಲಿ ಅಭಯಾರಣ್ಯದ ವ್ಯಾಪ್ತಿ ನಿರ್ಧರಿಸಿರುವುದು ಅವೈಜ್ಞಾನಿಕ. ಅರಣ್ಯೇತರ ಪ್ರದೇಶಗಳನ್ನೂ ಅಭಯಾರಣ್ಯದ ವ್ಯಾಪ್ತಿಗೆ ಸೇರಿಸಲಾಗಿತ್ತು. ಇದರಿಂದಾಗಿ, ಜನರಿಗೆ ತೊಂದರೆಯಾಗುತ್ತಿದೆ. ಗಡಿಯ ಪರಿಷ್ಕರಣೆ ಮಾಡಿದರೆ ಅಭಯಾರಣ್ಯದ ನಿರ್ವಹಣೆ ಪರಿಣಾಮಕಾರಿ ಆಗಲಿದೆ’ ಎಂದು ಸಮಿತಿ ವರದಿ ನೀಡಿತ್ತು. ವನ್ಯಜೀವಿ ಧಾಮದ ವ್ಯಾಪ್ತಿಯನ್ನು 700 ಚದರ ಕಿ.ಮೀಟರ್‌ನಿಂದ 395 ಚದರ ಕಿ.ಮೀಗೆ ಇಳಿಸಲು ರಾಜ್ಯ ಸರ್ಕಾರ ಇತ್ತೀಚೆಗೆ ತೀರ್ಮಾನಿಸಿತ್ತು. ‘ವನ್ಯಜೀವಿಧಾಮದ ಗಡಿಗಳ ಕುರಿತ ಗೊಂದಲದಿಂದಾಗಿ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆ ವಿಳಂಬವಾಗಿದೆ. ಈಚಿನ ವರ್ಷಗಳಲ್ಲಿ ಮಾನವ ಹಸ್ತಕ್ಷೇಪವೂ ಹೆಚ್ಚಾಗಿದೆ’ ಎಂದು ಎನ್‌ಜಿಟಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT