ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಸಿಗರ ಸೆಳೆಯಲು ಎನ್‌ಎಂಪಿಟಿ ಯತ್ನ

ವಿದೇಶಿ ಐಷಾರಾಮಿ ಹಡಗುಗಳ ಸಂಖ್ಯೆ ಹೆಚ್ಚಿಸಲು ಕಾರ್ಯಯೋಜನೆ ಸಿದ್ಧ
Published : 9 ನವೆಂಬರ್ 2018, 20:23 IST
ಫಾಲೋ ಮಾಡಿ
Comments

ಮಂಗಳೂರು: ರಾಜ್ಯದ ಕರಾವಳಿ ಭಾಗದ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ನವ ಮಂಗಳೂರು ಬಂದರು (ಎನ್‌ಎಂಪಿಟಿ), ಇದೀಗ ಇನ್ನಷ್ಟು ಪ್ರವಾಸಿ ಹಡಗುಗಳ ಸ್ವಾಗತಕ್ಕೆ ಸಜ್ಜಾಗುತ್ತಿದೆ.

ಅಧಿಕಾರಿಗಳಿಂದ ಅಧ್ಯಯನ ವರದಿ ಪಡೆದಿರುವ ಎನ್‌ಎಂಪಿಟಿ, ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರವಾಸಿಗರ ಆಕರ್ಷಣೆಗೆ ಯೋಜನೆ ರೂಪಿಸುತ್ತಿದೆ.

ದೇಶದ 12 ಬಂದರುಗಳ ಪೈಕಿ, ಪ್ರವಾಸಿಗರ ಆಕರ್ಷಣೆಯಲ್ಲಿ ಮಂಗಳೂರು ಬಂದರಿಗೆ ನಾಲ್ಕನೇ ಸ್ಥಾನ ದೊರೆತಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನಲ್ಲಿ ಅನೇಕ ಪ್ರವಾಸಿ ತಾಣಗಳಿದ್ದರೂ, ಎನ್‌ಎಂಪಿಟಿಗೆ ಬರುವ ಪ್ರವಾಸಿ ಹಡಗುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಪ್ರವಾಸಿಗರ ಸಂಖ್ಯೆಯನ್ನು ಮತ್ತೆ ಹೆಚ್ಚಿಸುವ ಹೊಸ ಕಾರ್ಯತಂತ್ರದಲ್ಲಿ ನೂತನ ಅಧ್ಯಕ್ಷ ಎಂ.ಟಿ. ಕೃಷ್ಣಬಾಬು ತೊಡಗಿದ್ದಾರೆ.

ಎನ್‌ಎಂಪಿಟಿಗೆ ಬರಲು ಪ್ರವಾಸಿಗರು ಹಿಂದೇಟು ಹಾಕುತ್ತಿರುವುದೇಕೆ ಎಂಬ ಬಗ್ಗೆ ಅಧ್ಯಯನ ನಡೆಸಲು ಅಧಿಕಾರಿಗಳ ತಂಡವೊಂದು ಕೊಚ್ಚಿ ಬಂದರಿಗೆ ಈಚಗೆ ಭೇಟಿ ನೀಡಿದ್ದು, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಎನ್‌ಎಂಪಿಟಿಅಧ್ಯಯನ ವರದಿ ನೀಡಿದೆ.

ಇ–ವೀಸಾ: ಮಂಗಳೂರು ಬಂದರಿನಲ್ಲೂ ಎಲೆಕ್ಟ್ರಾನಿಕ್‌ ವೀಸಾ (ಇ–ವೀಸಾ) ಸೌಲಭ್ಯ ಆರಂಭವಾಗಿದ್ದು, ಕಳೆದ ವರ್ಷ ಏಪ್ರಿಲ್ 8ರಂದು ಪ್ರಯಾಣಿಕ ಹಡಗಿನ ಮೂಲಕ ಎನ್‌ಎಂಪಿಟಿಗೆ ಭೇಟಿ ನೀಡಿದ ಇಂಗ್ಲೆಂಡ್‌, ಅಮೆರಿಕ ಹಾಗೂ ಆಸ್ಟ್ರೇಲಿಯದ 6 ಪ್ರವಾಸಿಗರಿಗೆ ಇ–ವೀಸಾ ನೀಡಲಾಗಿತ್ತು.

ಕೇಂದ್ರ ಸರ್ಕಾರ 16 ವಿಮಾನ ನಿಲ್ದಾಣಗಳ ಜತೆಗೆ, 5 ಬೃಹತ್‌ ಬಂದರುಗಳಾದ ಮಂಗಳೂರು, ಕೊಚ್ಚಿ, ಚೆನ್ನೈ, ಗೋವಾ ಹಾಗೂ ವಿಶಾಖಪಟ್ಟಣಗಳಲ್ಲಿ ಪ್ರವಾಸಿಗರಿಗೆ ಮೂಲಕ ಇ- ವೀಸಾ ವ್ಯವಸ್ಥೆ ಮಾಡಿದೆ.

ಅಧಿಕಾರಿಗಳ ವರದಿ: ಕೊಚ್ಚಿ ಬಂದರಿಗೆ ಭೇಟಿ ನೀಡಿರುವ ಅಧಿಕಾರಿಗಳು, ಅಲ್ಲಿನ ಬಂದರಿನಲ್ಲಿ ಇರುವ ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ. ಪ್ರಮುಖವಾಗಿ ಪ್ರವಾಸೋದ್ಯಮದ ಅವಕಾಶಗಳ ಬಗ್ಗೆ ಅಲ್ಲಿನ ಪ್ರಚಾರ ವೈಖರಿಗಳನ್ನು ಅಧ್ಯಯನ ಮಾಡಿದ್ದಾರೆ.

ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಮೂಲಕ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಪ್ರವಾಸಿ ತಾಣಗಳ ಕುರಿತು ಇನ್ನಷ್ಟು ಪ್ರಚಾರದ ಅವಶ್ಯಕತೆ ಇದೆ ಎನ್ನುವ ಅಂಶವನ್ನು ಅಧಿಕಾರಿಗಳು ವಿವರಿಸಿದ್ದಾರೆ. ಇದೀಗ ಎನ್ಎಂಪಿಟಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಪ್ರವಾಸೋದ್ಯಮದ ಪ್ರಚಾರಕ್ಕೆ ಯೋಜನೆ ರೂಪಿಸಲು ಕೋರಲಿದೆ.

ಈಗಾಗಲೇ ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್‌ ಕೂಡ ಎನ್‍ಎಂಪಿಟಿ ಅಭಿವೃದ್ಧಿಗೆ ಪೂರಕವಾದ ಅಗತ್ಯ ಮೂಲ ಸೌಕರ್ಯಗಳನ್ನು ರಾಜ್ಯ ಸರ್ಕಾರ ಒದಗಿಸಲಿದೆ ಎಂದಿದ್ದಾರೆ.

ಎನ್‍ಎಂಪಿಟಿ ಮೂಲಕ ರಾಜ್ಯದ ಕಾಫಿ ರಫ್ತು ಇನ್ನಷ್ಟು ಹೆಚ್ಚಿಸಲು ಒತ್ತು ನೀಡಬೇಕು. ವಿದೇಶಗಳಿಂದ ಎನ್‍ಎಂಪಿಟಿಗೆ ಪ್ರಯಾಣಿಕ ಹಡಗುಗಳಲ್ಲಿ ವಿದೇಶಿ ಪ್ರವಾಸಿಗರು ಬಂದಾಗ, ಅವರಿಗೆ ರಾಜ್ಯದ ಸಂಸ್ಕೃತಿ, ಕಲೆ ಪರಿಚಯಿಸಲು ಮತ್ತು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಮೂಲಕ ಯೋಜನೆ ಹಾಕಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

**

ಪ್ರವಾಸಿಗರನ್ನು ಆಕರ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮೀಕ್ಷೆ ನಡೆಸಿದ್ದು, ಪ್ರವಾಸೋದ್ಯಮ ಇಲಾಖೆಯ ಮೂಲಕ ಯೋಜನೆ ರೂಪಿಸಲಾಗುವುದು.
–ಎಂ.ಟಿ. ಕೃಷ್ಣಬಾಬು,ಎನ್‌ಎಂಪಿಟಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT