ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಡ್ಡಾ–ಮಾಳವೀಯ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

Published 7 ಜೂನ್ 2024, 23:50 IST
Last Updated 7 ಜೂನ್ 2024, 23:50 IST
ಅಕ್ಷರ ಗಾತ್ರ

ಬೆಂಗಳೂರು: ‘ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಬೇಕಾದ ಅನುದಾನವನ್ನು ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರಿಗೆ ಹಂಚುತ್ತಾರೆ ಎಂಬಂತಹ ಅನಿಮೇಟೆಡ್‌ ವಿಡಿಯೊವನ್ನು ಬಿಜೆಪಿಯ ಅಧಿಕೃತ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಬಿಜೆಪಿಯ ಐ.ಟಿ.ಸೆಲ್‌ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗಬಾರದು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ  ನಡ್ಡಾ ಹಾಗೂ  ಮಾಳವೀಯ ಸಲ್ಲಿಸಿರುವ ರಿಟ್‌ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರು ಶುಕ್ರವಾರ ವಿಚಾರಣೆ ನಡೆಸಿದರು. ‘ಮುಂದಿನ ವಿಚಾರಣೆಯವರೆಗೆ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು’ ಎಂದು ಆದೇಶಿಸಿದರು. ಜೆ.ಪಿ.ನಡ್ಡಾ ಮತ್ತು ಅಮಿತ್‌ ಮಾಳವೀಯ ಪರ ಹೈಕೋರ್ಟ್ ವಕೀಲ ಎಂ.ವಿನೋದ್‌ ಕುಮಾರ್ ಹಾಜರಿದ್ದರು.

ಪ್ರಕರಣವೇನು?: ‘ಅಮಿತ್‌ ಮಾಳವೀಯ ಅವರು ಜೆ.ಪಿ.ನಡ್ಡಾ ಮತ್ತು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸೂಚನೆಯಂತೆ ಪಕ್ಷದ ಅಧಿಕೃತ x ಖಾತೆಯಲ್ಲಿ ಎಚ್ಚರ,ಎಚ್ಚರ,ಎಚ್ಚರ ಎಂಬ ಒಂದು ಅನಿಮೇಟೆಡ್‌ ವಿಡಿಯೊ ಪೋಸ್ಟ್‌ ಮಾಡಿದ್ದರು. ಈ ವಿಡಿಯೊದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳನ್ನು ಮೊಟ್ಟೆಗಳೆಂದು ಬಿಂಬಿಸಿ ಈ ಮೊಟ್ಟೆಗಳಿರುವ ಬುಟ್ಟಿಗೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಎಂಬ ಮತ್ತೊಂದು ಮೊಟ್ಟೆಯನ್ನು ತಂದಿಟ್ಟು, ಈ ಮೊಟ್ಟೆ ಮರಿಯಾದ ನಂತರ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಬೇಕಾದ ಅನುದಾನವನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊಟ್ಟೆಯಿಂದ ಬಂದ ಮರಿಯ ಬಾಯಿಗೆ ತಿನ್ನಿಸುವಂತೆ ಅನಿಮೇಶನ್‌ ರೂಪಿಸಲಾಗಿದೆ. ಮುಸ್ಲಿಂ ಸಮುದಾಯ ಹೋಲುವ ಪಕ್ಷಿಯು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳನ್ನು ಗೂಡಿನಿಂದ ಒದ್ದು ಓಡಿಸುವಂತೆ ಚಿತ್ರಿಸಲಾಗಿದೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘2024ರ ಏಪ್ರಿಲ್‌ 4ರ ಸಂಜೆ ಪೋಸ್ಟ್‌ ಮಾಡಲಾಗಿರುವ ಈ ಟ್ವೀಟ್‌ ವಿವಿಧ ಸಮುದಾಯಗಳ ನಡುವೆ ದ್ವೇಷ ಕೆರಳಿಸುವ ರೀತಿಯಲ್ಲಿದೆ ಮತ್ತು ಆರೋಪಿಗಳು ಈ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಿಭಾಗದ ಉಪಾಧ್ಯಕ್ಷ ಎಂ.ರಮೇಶ್ ಬಾಬು 2024ರ ಏಪ್ರಿಲ್‌ 5ರಂದು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಇದರನ್ವಯ ಜನಪ್ರತಿನಿಧಿ ಕಾಯ್ದೆ–1951ರ ಕಲಂ 125 ಮತ್ತು ಐಪಿಸಿ 505 (2)ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT