ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ ಕೋವಿಡ್ ಲಸಿಕೆ: ಆಯ್ದ ಖಾಸಗಿ ಆಸ್ಪತ್ರೆಗಳಲ್ಲಷ್ಟೇ ಲಭ್ಯ

ರಾಜ್ಯದಲ್ಲಿ ಲಸಿಕೆಯ ದಾಸ್ತಾನು ಸಂಪೂರ್ಣ ಖಾಲಿ *ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯ
Published 4 ಮೇ 2023, 19:16 IST
Last Updated 4 ಮೇ 2023, 19:16 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವು ಕೋವಿಡ್ ಲಸಿಕೆಯ ಪೂರೈಕೆಯನ್ನು ಸ್ಥಗಿತ ಮಾಡಿರುವುದರಿಂದ ರಾಜ್ಯದಲ್ಲಿ ಲಸಿಕೆಯ ದಾಸ್ತಾನು ಸಂಪೂರ್ಣ ಖಾಲಿಯಾಗಿದೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ದೊರೆಯುತ್ತಿಲ್ಲ.

ರಾಜ್ಯದಲ್ಲಿ 5 ಕೋಟಿಗೂ ಅಧಿಕ ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಅವರಲ್ಲಿ ಹೆಚ್ಚಿನವರು ಇನ್ನೂ ಮುನ್ನೆಚ್ಚರಿಕೆ ಡೋಸ್ (ಬೂಸ್ಟರ್ ಡೋಸ್) ಲಸಿಕೆ ಹಾಕಿಸಿಕೊಂಡಿಲ್ಲ. 12ರಿಂದ 14 ವರ್ಷದವರು, ವೃದ್ಧರು, ಸಹ ಅಸ್ವಸ್ಥತೆ ಇರುವವರು ಹಾಗೂ ವಿದೇಶಗಳಿಗೆ ತೆರಳುವವರು ಹೆಚ್ಚಾಗಿ ಲಸಿಕೆ ಪಡೆಯಲು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ, ದಾಸ್ತಾನು ಇಲ್ಲದಿರುವುದರಿಂದ ಲಸಿಕೆ ದೊರೆಯುತ್ತಿಲ್ಲ. ಇದರಿಂದ ಕೋವಿಡ್ ಲಸಿಕೆ ಪಡೆಯುವುದು ಸಮಸ್ಯೆಯಾಗಿದೆ.

ಕಳೆದ ವರ್ಷಾಂತ್ಯಕ್ಕೆ ಚೀನಾ ಸೇರಿ ಕೆಲವೆಡೆ ಕೋವಿಡ್ ಪ್ರಕರಣಗಳು ಹೆಚ್ಚಳವಾಗಿತ್ತು. ಇಲ್ಲಿಯೂ ರೂಪಾಂತರಿ ವೈರಾಣು ಕಾಣಿಸಿಕೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ಮುನ್ನೆಚ್ಚರಿಕೆ ಡೋಸ್‌ಗೆ ಶಿಫಾರಸು ಮಾಡಿತ್ತು. ಇದರಿಂದಾಗಿ ಕಳೆದ ಜನವರಿ ತಿಂಗಳಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಳವಾಗಿತ್ತು. ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಲಸಿಕೆಗಳನ್ನು 12 ವರ್ಷಗಳು ಮೇಲ್ಪಟ್ಟವರಿಗೆ ಒದಗಿಸಲಾಗಿತ್ತು. ಆರೋಗ್ಯ ಇಲಾಖೆಯು ಲಸಿಕೆ ಪೂರೈಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಆದರೆ, ಲಸಿಕೆ ಪೂರೈಕೆಯಾಗದಿದ್ದರಿಂದ ಇರುವ ದಾಸ್ತಾನು ಈಗ ಖಾಲಿಯಾಗಿದೆ. ಇದರಿಂದಾಗಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಣೆ ಸ್ಥಗಿತ ಮಾಡಲಾಗಿದೆ. 

ಖಾಸಗಿಯಲ್ಲಿಯೂ ಸಮಸ್ಯೆ: ಕೋವಿನ್ ಪೋರ್ಟಲ್‌ ಮಾಹಿತಿ ಪ್ರಕಾರ ರಾಜ್ಯದಲ್ಲಿ 8 ಖಾಸಗಿ ವೈದ್ಯಕೀಯ ಕೇಂದ್ರಗಳಲ್ಲಿ ಮಾತ್ರ ಕೋವಿಡ್ ಲಸಿಕೆ ಒದಗಿಸಲಾಗುತ್ತಿದೆ. ಈ ಎಲ್ಲ ಕೇಂದ್ರಗಳು ಬೆಂಗಳೂರಿನಲ್ಲಿದ್ದು, ದಾಸ್ತಾನು ಇರುವ ಲಸಿಕೆಯನ್ನು ಮಾತ್ರ ನೀಡುತ್ತಿವೆ. ಶ್ರೀಸಾಯಿ, ಮೆಡಿಹೋಪ್, ಪರಿಮಳಾ ಸೇರಿ ಬೆರಳಣಿಕೆಯಷ್ಟು ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿದ್ದು, ಅಲ್ಲಿಯೂ ಮುಂಚಿತವಾಗಿ ಕಾಯ್ದಿರಿಸಿಕೊಳ್ಳಬೇಕಾಗಿದೆ. ಮಣಿಪಾಲ್, ಅಪೋಲೊ, ನಾರಾಯಣ ಹೆಲ್ತ್ ಸೇರಿ ವಿವಿಧ ಪ್ರಮುಖ ಆಸ್ಪತ್ರೆಗಳಲ್ಲಿನ ದಾಸ್ತಾನು ಸಹ ಖಾಲಿಯಾಗಿದೆ. 

‘ಲಸಿಕೆ ಸಂಬಂಧ ಮಕ್ಕಳು ಸೇರಿ ವಿವಿಧ ವಯೋಮಾನದವರು ಭೇಟಿ ನೀಡುತ್ತಿದ್ದಾರೆ. ಆದರೆ, ಕೆಲ ದಿನಗಳಿಂದ ಲಸಿಕೆ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದಾಗಿ ದಾಸ್ತಾನು ಖಾಲಿಯಾಗಿದ್ದು, ಲಸಿಕೆ ವಿತರಣೆ ನಡೆಯುತ್ತಿಲ್ಲ’ ಎಂದು ಬೆಂಗಳೂರಿನ ಆಸ್ಪತ್ರೆಯೊಂದರ ಲಸಿಕೆ ವಿಭಾಗದ ಮುಖ್ಯಸ್ಥರು ತಿಳಿಸಿದರು.

‘ಕೇಂದ್ರ ಸರ್ಕಾರ ಲಸಿಕೆ ಪೂರೈಸದಿದ್ದರಿಂದ ಲಸಿಕೆಯ ದಾಸ್ತಾನು ಇಲ್ಲ. ಆದ್ದರಿಂದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಸಿಗುತ್ತಿಲ್ಲ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ. ತ್ರಿಲೋಕ್ ಚಂದ್ರ ಹೇಳಿದರು. 

ಅಂಕಿ–ಅಂಶಗಳು

  • 12.21 : ಕೋಟಿ ಈವರೆಗೆ ವಿತರಿಸಿದ ಲಸಿಕೆಯ ಡೋಸ್‌ಗಳು

  • 5.53 : ಕೋಟಿ ಎರಡು ಡೋಸ್ ಲಸಿಕೆ ಪಡೆದವರು

  • 1.15 : ಕೋಟಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದವರು

ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೋವಿಡ್ ಲಸಿಕೆಯನ್ನು ಪೂರೈಕೆ ಮಾಡುತ್ತಿಲ್ಲ. ಆದ್ದರಿಂದ ಸದ್ಯ ಲಸಿಕೆಯ ದಾಸ್ತಾನು ಇಲ್ಲ. ಸ್ಥಳೀಯವಾಗಿ ಖರೀದಿ ಮಾಡಿ ವಿತರಿಸಲಾಗುವುದು.
ಡಿ. ರಂದೀಪ್ ಆರೋಗ್ಯ ಇಲಾಖೆ ಆಯುಕ್ತ

ಕೋವಿಶೀಲ್ಡ್‌ ಕೋವ್ಯಾಕ್ಸಿನ್ ಲಸಿಕೆಯಿಲ್ಲ

ರಾಜ್ಯದಲ್ಲಿ 2022ರ ಜ.10ರಿಂದ ಮೂರನೇ ಡೋಸ್ ಲಸಿಕೆ ವಿತರಿಸಲಾಗುತ್ತಿದೆ. ಎರಡು ಡೋಸ್ ಲಸಿಕೆ ಪಡೆದು ಆರು ತಿಂಗಳಾದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡಲಾಗುತ್ತದೆ. ಆರೋಗ್ಯ ಕಾರ್ಯಕರ್ತರು ಸೇರಿ ಕೆಲವರಿಗೆ ಮಾತ್ರ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಒದಗಿಸಲಾಗಿದೆ. ‘ಕೋವಿಶೀಲ್ಡ್‌’ ಹಾಗೂ ‘ಕೋವ್ಯಾಕ್ಸಿನ್’ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗೆ ಖಾಸಗಿ ಆಸ್ಪತ್ರೆಗಳು ₹ 386 ಪಡೆಯುತ್ತಿದ್ದವು. ಈಗ ಖಾಸಗಿ ಆಸ್ಪತ್ರೆಗಳಲ್ಲಿ ಈ ಎರಡು ಲಸಿಕೆಗಳು ದೊರೆಯುತ್ತಿಲ್ಲ. ಸದ್ಯ ‘ಕೊವೊವ್ಯಾಕ್ಸ್’ ಮೂಗಿನ ಮೂಲಕ ಹಾಕುವ ‘ಇನ್‌ಕೋವ್ಯಾಕ್’ ಹಾಗೂ ಕೋರ್ಬಿವ್ಯಾಕ್ಸ್ ಲಸಿಕೆ ಮಾತ್ರ ಲಭ್ಯವಿದೆ. ಇವುಗಳಿಗೆ ಕ್ರಮವಾಗಿ ₹ 386 ₹ 990 ಹಾಗೂ ₹ 400 ನಿಗದಿಪಡಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT