ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕ: ತಗ್ಗದ ಮಳೆ ಆರ್ಭಟ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕ್ಷೀಣಿಸಿದ ವರ್ಷಧಾರೆ lಹುಬ್ಬಳ್ಳಿ– ಧಾರವಾಡ, ವಿಜಯಪುರದಲ್ಲಿ ಸಾಧಾರಣ ಮಳೆ
Last Updated 15 ಜುಲೈ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದು, ಹುಬ್ಬಳ್ಳಿ– ಧಾರವಾಡ, ವಿಜಯಪುರ
ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯ ಜಲಾನಯನ ಪ್ರದೇಶದಲ್ಲಿ ಮಳೆಯಾಗಿದ್ದು, ಕದ್ರಾ ಜಲಾಶಯದ 8 ಕ್ರೆಸ್ಟ್ ಗೇಟ್‌ಗಳನ್ನು ಶುಕ್ರವಾರ ತೆರೆಯಲಾಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಸಿಂಗ್ರಿಹಳ್ಳಿಯಲ್ಲಿ ಮನೆ ಕುಸಿದಿದೆ. ಹಲುವಾಗಲು–ಗರ್ಭಗುಡಿ ಗ್ರಾಮ ಸಂಪರ್ಕಿಸುವ ಸೇತುವೆ ಮುಳುಗಿದೆ.

ಬೆಳಗಾವಿ ನಗರ ಹಾಗೂ ಖಾನಾಪುರ ತಾಲ್ಲೂಕಿನಲ್ಲಿ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜುಲೈ 16ರಂದು ಕೂಡ ರಜೆ ನೀಡಲಾಗಿದೆ.

ಸಕಲೇಶಪುರದ ದೋಣಿಗಲ್‌ ಬಳಿ ಮಂಗಳೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲ ರೀತಿಯ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ‘ರಾಜ್ಯ ಸಾರಿಗೆ ಸಂಸ್ಥೆ, ಖಾಸಗಿ ಬಸ್‌ಗಳು, ಕಾರು ಸೇರಿದಂತೆ ಲಘು ವಾಹನಗಳು ಹಾಸನದಿಂದ ಅರಕಲಗೂಡು– ಕುಶಾಲನಗರ–ಸಂಪಾಜೆ ಮಾರ್ಗ ವಾಗಿ ಅಥವಾ ಹಾಸನ–ಬೇಲೂರು–ಮೂಡಿಗೆರೆ –ಚಾರ್ಮಾಡಿ ಘಾಟಿ ಮೂಲಕ ಮಂಗಳೂರಿಗೆ ಸಂಚರಿಸಬೇಕು’ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ನೆರಳೆಕೊಡಿಗೆ ಬಳಿ ಶೃಂಗೇರಿ– ಆಗುಂಬೆ ಸಂಪರ್ಕ ರಸ್ತೆ ಕೊಚ್ಚಿಹೋಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಹಲವು ಗ್ರಾಮಗಳ ಜಮೀನುಗಳು ಜಲಾವೃತವಾಗಿವೆ.

ವಿಡಿಯೊ ವೈರಲ್

ಶಕ್ತಿನಗರ: ರಾಯಚೂರು ತಾಲ್ಲೂಕಿನ ಗುರ್ಜಾಪುರ ಬಳಿ ಕೃಷ್ಣಾ ನದಿಗೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನಿರ್ಮಿಸಿರುವ ಅಣೆಕಟ್ಟು ಗೇಟ್ ತೆರೆಯಲು ಸಿಬ್ಬಂದಿ ಯೊಬ್ಬರನ್ನು ಕ್ರೇನ್‌ನಿಂದ ಇಳಿಸಿ ತೆರೆಯಲು ಯತ್ನಿಸಿದ ವಿಡಿಯೊ ವೈರಲ್ ಆಗಿದೆ.

‘ಅಣೆಕಟ್ಟಿನ‌ 194 ಪೈಕಿ 94 ಗೇಟ್‌ಗಳನ್ನು ಮಾತ್ರ ತೆರೆಯಲಾಗಿದೆ. ಇದರಿಂದ ಹಿನ್ನೀರು ಸಂಗ್ರಹವಾಗಿ ಗುರ್ಜಾಪುರ ಮತ್ತು ಅರಿಷಿಣಗಿ ಗ್ರಾಮಗಳ ಜಮೀನು ಜಲಾವೃತವಾಗಿವೆ. ಕ್ರೇನ್‌ ನೆರವಿನಿಂದ ಆರ್‌ಟಿಪಿಎಸ್‌ ಸಿಬ್ಬಂದಿಯೊಬ್ಬರನ್ನು ನದಿಯಲ್ಲಿ ಇಳಿಸಿ, ಗೇಟ್‌ ತೆರೆಯಲು ಕೆಪಿಸಿಎಲ್‌ನವರು ಪ್ರಯತ್ನಿಸಿದರು. ಆದರೆ, ಪ್ರವಾಹದ ಸೆಳೆತದಿಂದ ಅದು ಸಾಧ್ಯವಾಗಲಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT