ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸಿಂಗ್‌ | ವಿದ್ಯಾರ್ಥಿಗಳೇ ‘ನಕಲಿ’: ನೋಂದಣಿ ಮುಗಿದ 8 ತಿಂಗಳ ಬಳಿಕ ಹೆಸರು ಬದಲು

Published 27 ಅಕ್ಟೋಬರ್ 2023, 0:06 IST
Last Updated 27 ಅಕ್ಟೋಬರ್ 2023, 0:06 IST
ಅಕ್ಷರ ಗಾತ್ರ

ಬೆಂಗಳೂರು: ನರ್ಸಿಂಗ್‌ ಕೋರ್ಸ್‌ನ ಪ್ರವೇಶ ಪ್ರಕ್ರಿಯೆಯಲ್ಲಿ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿಯು ‘ನಕಲಿ’ ವಿದ್ಯಾರ್ಥಿಗಳನ್ನು ಸೃಷ್ಟಿಸಿದ ಪ್ರಕರಣ ಪತ್ತೆಯಾಗಿದೆ. ಹಾಗೆ ಸೃಷ್ಟಿಯಾದ ಸೀಟುಗಳಿಗೆ ನರ್ಸಿಂಗ್‌ ಶಾಲೆ ನಡೆಸುವವರು, ಪ್ರವೇಶ ಪ್ರಕ್ರಿಯೆ ಮುಗಿದ ಬಳಿಕ, ಅಸಲಿ ವಿದ್ಯಾರ್ಥಿಗಳನ್ನು ಅಕ್ರಮವಾಗಿ ನೋಂದಣಿ ಮಾಡಿಕೊಂಡಿದ್ದು, ಈ ಕುರಿತು ತನಿಖೆಗೆ ಆದೇಶಿಸಲಾಗಿದೆ.

ಜನರಲ್ ನರ್ಸಿಂಗ್ ಮಿಡ್‌ವೈಫರಿ (ಜಿಎನ್‌ಎಂ) ಡಿಪ್ಲೊಮಾ ಕೋರ್ಸ್‌ಗೆ 2022 ಡಿ. 31ರಂದೇ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗಿದೆ. ಆದರೆ, ನೋಂದಣಿಯಾದ 236 ವಿದ್ಯಾರ್ಥಿಗಳ (ನಕಲಿ ಹೆಸರು) ಬದಲು, ಬೇರೆ ವಿದ್ಯಾರ್ಥಿಗಳನ್ನು ಇದೇ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ನೋಂದಣಿ ಮಾಡಿರುವುದು ಗೊತ್ತಾಗಿದೆ. ನಕಲಿ ಹೆಸರುಗಳಲ್ಲಿ ನೋಂದಣಿ ಸಂಖ್ಯೆ ಸೃಷ್ಟಿಸಿ, ಬಳಿಕ ಹೆಸರು ಸೇರಿಸಿರುವುದನ್ನು ಪತ್ತೆ ಮಾಡಲಾಗಿದೆ.

ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ಗೆ ಅಕ್ರಮವಾಗಿ ನೋಂದಣಿ ಮಾಡಿಕೊಳ್ಳುವ ಪ್ರತಿ ವಿದ್ಯಾರ್ಥಿಯಿಂದ ನರ್ಸಿಂಗ್‌ ಶಾಲೆಯವರು ವರ್ಷಕ್ಕೆ ₹1 ಲಕ್ಷದಂತೆ ಹೆಚ್ಚುವರಿಯಾಗಿ ಒಟ್ಟು ₹3 ಲಕ್ಷ ವಸೂಲಿ ಮಾಡುತ್ತಾರೆ. ಹೀಗೆ ನೋಂದಣಿ ಮಾಡಲು ಮಂಡಳಿಯ ಸಿಬ್ಬಂದಿ ‌ಪ್ರತಿ ವಿದ್ಯಾರ್ಥಿಯಿಂದ ₹50 ಸಾವಿರದಿಂದ ₹1 ಲಕ್ಷದವರೆಗೆ ವಸೂಲು ಮಾಡಿ ಹಂಚಿಕೊಳ್ಳುತ್ತಾರೆ ಎಂದು ಆರೋಪಿಸಲಾಗಿದೆ.

ಅಸ್ತಿತ್ವದಲ್ಲಿ ಇಲ್ಲದೇ ಇರುವ ವಿದ್ಯಾರ್ಥಿಗಳ ಹೆಸರಿನಲ್ಲಿ ನೋಂದಾಯಿಸಿ, ಬಳಿಕ ಹೆಸರು ಬದಲಾವಣೆ ಮಾಡಿರುವುದು ಗಮನಕ್ಕೆ ಬರುತ್ತಿದ್ದಂತೆ ಮಂಡಳಿಯ ಅಧ್ಯಕ್ಷರೂ ಆಗಿರುವ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಬಿ.ಎಲ್‌. ಸುಜಾತಾ ರಾಥೋಡ್‌ ಅವರು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಂಡಳಿಯ ವಿಶೇಷ ಅಧಿಕಾರಿ ಡಾ. ವಿಜಯಕುಮಾರ್‌ ಕೆ.ಆರ್‌ (ಕರ್ನಾಟಕ ನರ್ಸಿಂಗ್ ಮತ್ತು ಅರೆವೈದ್ಯಕೀಯ ವಿಜ್ಞಾನಗಳ ಶಿಕ್ಷಣ (ನಿಯಂತ್ರಣ) ಪ್ರಾಧಿಕಾರ) ಅವರಿಗೆ ಸೂಚಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಾ. ವಿಜಯಕುಮಾರ್‌, ‘ವಿದ್ಯಾರ್ಥಿಗಳ ಹೆಸರು ಬದಲಾಗಿರುವುದು ನಿಜ. ಈ ಬಗ್ಗೆ ಸಂಬಂಧಪಟ್ಟ ನರ್ಸಿಂಗ್‌ ಶಾಲೆಗಳಿಂದ ವಿವರಣೆ ಪಡೆಯುವಂತೆ ಮಂಡಳಿಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ’ ಎಂದಿದ್ದಾರೆ.

‘ವಿದ್ಯಾರ್ಥಿಗಳನ್ನು ಹೆಸರು ಬದಲಿಸಿರುವ ನರ್ಸಿಂಗ್ ಶಾಲೆಗಳಿಗೆ ಮಂಡಳಿಯ ಕಾರ್ಯದರ್ಶಿ ಪತ್ರ ಬರೆದು ಎಲ್ಲ ಮಾಹಿತಿಯೊಂದಿಗೆ ವಿವರಣೆ ನೀಡುವಂತೆ ತಿಳಿಸಿದ್ದಾರೆ. ಹೆಸರುಗಳಲ್ಲಿನ ಅಕ್ಷರ ತಪ್ಪುಗಳನ್ನು ಸರಿಪಡಿಸಲು ಅವಕಾಶವಿದೆ. ಆದರೆ, ಸಂಪೂರ್ಣ ಹೆಸರು ಬದಲಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ವಿದ್ಯಾರ್ಥಿಗಳ ಹೆಸರು ಬದಲಾಗಿರುವುದಕ್ಕೆ ಸಂಬಂಧಪಟ್ಟಂತೆ ನರ್ಸಿಂಗ್‌ ಶಾಲೆಯವರು ಸೂಕ್ತ ವಿವರಣೆ ನೀಡದೇ ಇದ್ದರೆ, ಬದಲಾದ ಹೆಸರಿನ ವಿದ್ಯಾರ್ಥಿಯ ನೋಂದಣಿಯನ್ನು ತಡೆ ಹಿಡಿಯಲಾಗುವುದು ಎಂದೂ ಅವರು ಹೇಳಿದ್ದಾರೆ. 

ಏನಿದು ಪ್ರಕರಣ?: 2022–23ನೇ ಸಾಲಿನ ನರ್ಸಿಂಗ್ ಕೋರ್ಸ್‌ಗೆ ಪ್ರವೇಶಕ್ಕೆ ಪರೀಕ್ಷಾ ಮಂಡಳಿಯಲ್ಲಿ ವಿದ್ಯಾರ್ಥಿಗಳ ಆನ್‌ಲೈನ್‌ ನೋಂದಣಿಯು 2022 ಸೆ. 1ರಿಂದ ಡಿ. 31ರವರೆಗೆ ನಡೆದಿತ್ತು. ಅದರಂತೆ ನರ್ಸಿಂಗ್‌ ಶಾಲೆಯವರು ವಿದ್ಯಾರ್ಥಿಗಳ ವಿದ್ಯಾರ್ಹತೆಯ ದಾಖಲೆಗಳ ಸಹಿತ ಡಿ. 31ರವರೆಗೆ ಆನ್‌ಲೈನ್‌ನಲ್ಲಿ ನೋಂದಾಯಿಸಿದ್ದಾರೆ. ಹೀಗೆ ನೋಂದಾಯಿಸಿದ ವಿದ್ಯಾರ್ಥಿಗಳ ಮೂಲ ದಾಖಲಾತಿಗಳನ್ನು ಪರೀಕ್ಷಾ ಮಂಡಳಿಗೆ ಸಲ್ಲಿಸಲು 2023 ಮಾರ್ಚ್‌ 5ರಿಂದ 15ರವರೆಗೆ ಕಾಲಾವಾಕಾಶ ನೀಡಲಾಗಿತ್ತು. ಆದರೆ, ಕೆಲವು ಶಾಲೆಯವರು ಆನ್‌ಲೈನ್‌ನಲ್ಲಿ ಮೊದಲು ನೀಡಿದ್ದ ಹೆಸರುಗಳನ್ನು ಮಂಡಳಿಯ ಸಿಬ್ಬಂದಿಯ ನೆರವಿನಿಂದ ಬದಲಾವಣೆ ಮಾಡಿದ್ದಾರೆ. ಮಂಡಳಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ಕೆಳಹಂತದಲ್ಲಿ ಈ ಅಕ್ರಮ ನಡೆದಿರುವುದು ಗೊತ್ತಾಗಿದೆ.

‘ಖಾಸಗಿ ನರ್ಸಿಂಗ್‌ ಶಾಲೆಗಳು ಈ ಅಕ್ರಮ ದಾರಿಯಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಕೋರ್ಸ್‌ಗೆ ನೋಂದಣಿ ಮಾಡಿಕೊಳ್ಳುತ್ತಿವೆ. ಈ ರೀತಿ ನೋಂದಣಿಯಾದ ವಿದ್ಯಾರ್ಥಿಗಳು ಪರೀಕ್ಷೆಗೆ ಮಾತ್ರ ಹಾಜರಾಗುತ್ತಾರೆ. ಅವರನ್ನು ಪಾಸ್‌ ಮಾಡಿ ಪ್ರಮಾಣಪತ್ರಗಳನ್ನು ಶಾಲೆಯವರೇ ತಲುಪಿಸುತ್ತಾರೆ. ನರ್ಸಿಂಗ್‌ ಮಂಡಳಿಯ ಸಿಬ್ಬಂದಿಯ ಜೊತೆ ನರ್ಸಿಂಗ್‌ ಶಾಲೆಯವರು ಹೊಂದಾಣಿಕೆ ಮಾಡಿಕೊಂಡು ಈ ದಂಧೆಯಲ್ಲಿ ತೊಡಗಿದ್ದಾರೆ. ಹಲವು ವರ್ಷಗಳಿಂದ ಈ ಅಕ್ರಮ ನಡೆಯುತ್ತಿದೆ’ ಎಂದು ನರ್ಸಿಂಗ್‌ ಮಂಡಳಿಯ ಸಿಬ್ಬಂದಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT