ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಿಸಿ ಮೀಸಲು: 156 ಜಾತಿಗಷ್ಟೇ ಪ್ರಾತಿನಿಧ್ಯ

ನ್ಯಾ.ಕೆ. ಭಕ್ತವತ್ಸಲ ಆಯೋಗದ ವರದಿ
Last Updated 22 ಜುಲೈ 2022, 20:13 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ 802 ಜಾತಿ ಮತ್ತು ಉಪ ಜಾತಿಗಳಲ್ಲಿ ಈವರೆಗೆ 156 ಸಮುದಾಯಗಳಿಗೆ ಮಾತ್ರ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ದೊರಕಿದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಆಯೋಗ ಗುರುತಿಸಿದೆ.

ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಖಾತರಿಪಡಿಸಲು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ಮೂರು ಹಂತದ ಪರಿಶೀಲನೆ ನಡೆಸುವುದಕ್ಕಾಗಿ ಈ ಆಯೋಗವನ್ನು ರಚಿಸಲಾಗಿತ್ತು. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ 646 ಸಮುದಾಯಗಳಿಗೆ ಈವರೆಗೂ ರಾಜಕೀಯ ಪ್ರಾತಿನಿಧ್ಯ ದೊರಕಿಲ್ಲ ಎಂದು ಆಯೋಗವು ರಾಜ್ಯ ಸರ್ಕಾರಕ್ಕೆ ಗುರುವಾರ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ರಾಜ್ಯದ ಗ್ರಾಮ ಪಂಚಾಯಿತಿ, ತಾಲ್ಲೂಕು ‍ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಗಳಿಗೆ 1996, 2001,
2010 ಮತ್ತು 2015ರಲ್ಲಿ ನಡೆದಿರುವ ಚುನಾವಣೆಗಳ ಮಾಹಿತಿಯ ಆಧಾರದಲ್ಲಿ ಆಯೋಗವು ಈ ವರದಿ ಸಿದ್ಧಪಡಿಸಿದೆ. ಈವರೆಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಪಡೆದಿರುವ ಮತ್ತು ಪಡೆಯದೇ ಇರುವ ಸಮುದಾಯಗಳನ್ನು ಗುರುತಿಸಿ, ಪಟ್ಟಿಯನ್ನೂ ವರದಿಯಲ್ಲಿ ನೀಡಲಾಗಿದೆ.

‘ಸಿಗದ ಅವಕಾಶ’: ‘ಹಿಂದುಳಿದ ವರ್ಗಗಳ ಬಹುತೇಕ ಜನರು ಮೀಸಲಾತಿ ಸೌಲಭ್ಯವನ್ನು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಬಳಸಲು ಬಯಸುತ್ತಾರೆ. ಮೀಸಲಾತಿಯನ್ನು ಬಳಸಿಕೊಂಡು ರಾಜಕೀಯ ಪ್ರವೇಶಿಸಲು ಇಚ್ಛಿಸುವವರು ಕಡಿಮೆ. ಬಯಸಿದರೂ ಅದು ಅತ್ಯಂತ ಸವಾಲಿನ ಹಾದಿಯಾಗಿರುತ್ತದೆ’ ಎಂದು ಆಯೋಗ ಹೇಳಿದೆ.

‘ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳು ಈವರೆಗೂ ರಾಜಕೀಯವಾಗಿ ಸರಿಯಾದ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗಿಲ್ಲ. ಹಿಂದುಳಿದ ವರ್ಗಗಳ ಜನರು ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ಒದಗಿಸಲು ಮೀಸಲಾತಿ ಸೌಲಭ್ಯ ಇರಲೇಬೇಕು. ಮೀಸಲಾತಿ ಸೌಲಭ್ಯ ರದ್ದುಗೊಂಡಲ್ಲಿ ಈ ಸಮುದಾಯದ ಜನರು ರಾಜಕೀಯ ಪ್ರಾತಿನಿಧ್ಯವನ್ನು ಕಳೆದುಕೊಳ್ಳುತ್ತಾರೆ’ ಎಂದು ಆಯೋಗ ವರದಿಯಲ್ಲಿ ತಿಳಿಸಿದೆ.

‘ಮೀಸಲಾತಿಯನ್ನು ನಿರಾಕರಿಸುವುದು ಒಂದು ವರ್ಗದ ಜನರು ಸ್ಥಳೀಯ ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸುವುದಕ್ಕೆ ಅವಕಾಶ ನಿರಾಕರಿಸಿದಂತೆ. ಮೀಸಲಾತಿಯ ಮೂಲಕ ಹಿಂದುಳಿದ ವರ್ಗಗಳಿಗೆ ರಾಜಕೀಯ ಶಕ್ತಿ ತುಂಬಲು ಸ್ಪಷ್ಟವಾದ ನೀತಿಯೊಂದನ್ನು ರೂಪಿಸಬೇಕು’ ಎಂದು ಆಯೋಗ ಶಿಫಾರಸು ಮಾಡಿದೆ.

ಸರ್ಕಾರದ ಬಳಿ ವರದಿ: ‘ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಹಿಂದುಳಿದಿರುವಿಕೆ ಕುರಿತು ಎಚ್‌. ಕಾಂತರಾಜ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿಸ್ತೃತವಾದ ಗಣತಿ ನಡೆಸಿತ್ತು ಎಂದು ವರದಿ ಹೇಳಿದೆ.

₹ 147 ಕೋಟಿ ವೆಚ್ಚ ಮಾಡಿ ಸಿದ್ಧಪಡಿಸಿರುವ ಗಣತಿಯ ವರದಿಯು ರಾಜ್ಯ ಸರ್ಕಾರದ ಬಳಿ ಇದೆ ಎಂಬ ಮಾಹಿತಿ ಲಭಿಸಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT