ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆರೋಲ್‌ ಕೋರಿಕೆ ನಿಯಮ ಪ್ರಶ್ನಿಸಿದ ಪಿಐಎಲ್‌: ನೋಟಿಸ್‌

Published 26 ಜೂನ್ 2024, 23:55 IST
Last Updated 26 ಜೂನ್ 2024, 23:55 IST
ಅಕ್ಷರ ಗಾತ್ರ

ಬೆಂಗಳೂರು: ‘ಸಜಾ ಬಂದಿ ಅಪರಾಧಿಗಳ ಜಾಮೀನು ಅರ್ಜಿ ಅಥವಾ ಮೇಲ್ಮನವಿ ವಿಚಾರಣೆಗೆ ಬಾಕಿ ಇದ್ದಾಗ ಅವರ ಪೆರೋಲ್ ಕೋರಿಕೆಯನ್ನು ಪರಿಗಣಿಸಬಾರದು’ ಎಂಬ ನಿಯಮ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಹೈಕೋರ್ಟ್‌ನ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಎಸ್‌.ಯು.ಶ್ಯಾಮ್‌ಕುಮಾರ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ‍ಪರ ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ಉಪ ಕಾರ್ಯದರ್ಶಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಲಾಗಿದೆ.

ಮನವಿ:

‘ಅಪರಾಧಿಗಳ ಜಾಮೀನು ಅರ್ಜಿ ಅಥವಾ ಮೇಲ್ಮನವಿ ಬಾಕಿ ಇದ್ದಾಗ ಅವರ ಪೆರೋಲ್ ಅಥವಾ ತಾತ್ಕಾಲಿಕ ಬಿಡುಗಡೆಯ ಮನವಿ ಪರಿಗಣಿಸಬಾರದು ಎಂದು ಕರ್ನಾಟಕ ಕಾರಾಗೃಹ (ಎರಡನೇ ತಿದ್ದುಪಡಿ) ಕಾಯ್ದೆ-2022ರಲ್ಲಿ ಹೇಳಲಾಗಿದೆ. ಇದು ಸುಪ್ರೀಂಕೋರ್ಟ್ ನಿರ್ದೇಶನಕ್ಕೆ ವಿರುದ್ಧವಾಗಿದೆ. ಆದ್ದರಿಂದ, ಕರ್ನಾಟಕ ಕಾರಾಗೃಹ ಕಾಯ್ದೆ-1963ರ ಕಲಂ 46ರಿಂದ 49 ಮತ್ತು ಕರ್ನಾಟಕ ಕಾರಾಗೃಹ (ಎರಡನೇ ತಿದ್ದುಪಡಿ) ಕಾಯ್ದೆ-2022 ಅನ್ನು ಸಂವಿಧಾನ ಬಾಹಿರ ಮತ್ತು ಸಂವಿಧಾನದ 14 ಮತ್ತು 21ನೇ ವಿಧಿಯಲ್ಲಿ ಖಾತರಿಪಡಿಸಲಾಗಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಘೋಷಿಸಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT