ಬೆಂಗಳೂರು: ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಅದು ವಾಸಿಯಾಗದ ಹಂತ ತಲುಪಿ ವ್ಯಕ್ತಿಯೊಬ್ಬ ಮರಣ ಶಯ್ಯೆಯಲ್ಲಿ ಇದ್ದಾಗ ಆತನಿಗೆ ಘನತೆಯ ಸಾವನ್ನು ಸಾಧ್ಯವಾಗಿಸುವ ‘ಮರಣ ಇಚ್ಛೆಯ ಉಯಿಲು’ (ಲಿವಿಂಗ್ ವಿಲ್) ಬರೆಯುವ ಕುರಿತಂತೆ ಸುಪ್ರೀಂ ಕೋರ್ಟ್ 2023ರಲ್ಲಿ ಜಾರಿಗೊಳಿಸಿರುವ ‘ಸುಧಾರಿತ ವೈದ್ಯಕೀಯ ನಿರ್ದೇಶನಗಳನ್ನು’ ರಾಜ್ಯದಲ್ಲಿಯೂ ಜಾರಿಗೊಳಿಸಲು ನಿರ್ದೇಶನ ನೀಡಬೇಕು ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಹೈಕೋರ್ಟ್ ವಕೀಲರೂ ಆದ ನಗರದ 76 ವರ್ಷ ವಯಸ್ಸಿನ ಶಿವಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲೆ ಸ್ನೇಹ ನಾಗರಾಜ್ ಅವರ ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಿ ಎಂದು ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿತು.
ಏನಿದು ಅರ್ಜಿ?: ‘ಮನುಷ್ಯ ಗೌರವಯುತವಾಗಿ ಸಾಯುವ ಹಕ್ಕು ಹೊಂದಿದ್ದು, ಆತನಿಗೆ ಮಾರ್ಗಸೂಚಿಗಳ ಅನ್ವಯ ದಯಾಮರಣಕ್ಕೆ ಅನುಮತಿ ನೀಡಬಹುದು. ಪುನಶ್ಚೇತನಗೊಳ್ಳುವ ಯಾವುದೇ ಸಾಧ್ಯತೆಗಳು ಇಲ್ಲದ ಪರಿಸ್ಥಿತಿ ಇದ್ದಾಗ, ಬದುಕಿರಲು ಇಚ್ಛಿಸದ ವ್ಯಕ್ತಿಗೆ ಸಂಕಷ್ಟದಲ್ಲಿ ಜೀವನ ಮುಂದುವರಿಸುವ ಸ್ಥಿತಿ ಇರಬಾರದು. ಒಂದು ವೇಳೆ ವ್ಯಕ್ತಿ ಅಥವಾ ರೋಗಿಯು ತಾನು ಭವಿಷ್ಯದಲ್ಲಿ ಕೋಮಾ ಸ್ಥಿತಿಗೆ ತಲುಪಿದರೆ ಜೀವರಕ್ಷಕದ ಸಹಾಯದಿಂದ ನನ್ನನ್ನು ಬದುಕಿಸದಿರಿ ಎಂದು ಲಿವಿಂಗ್ ವಿಲ್ (ಮರಣ ಇಚ್ಛೆಯ ಉಯಿಲು) ಬರೆಯಲು ಅವಕಾಶ ನೀಡಿ’ ಎಂದು ಸುಪ್ರೀಂ ಕೋರ್ಟ್ 2018ರಲ್ಲಿ ಐತಿಹಾಸಿಕ ತೀರ್ಪು ನೀಡಿತ್ತು.
ಗಂಭೀರ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಅಳವಡಿಸಿರುವ ಜೀವರಕ್ಷಕ ಸಾಧನ ತೆಗೆಯುವುದಕ್ಕೆ ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಜೆಎಂಎಫ್‌ಸಿ) ಅನುಮತಿಯನ್ನು ಈ ಮೊದಲು ಕಡ್ಡಾಯಗೊಳಿಸಲಾಗಿತ್ತು. ಆದರೆ, ಈ ಆದೇಶವನ್ನು 2023ರಲ್ಲಿ ಮಾರ್ಪಾಡು ಮಾಡಿದ್ದ ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಸರಳೀಕರಿಸಿತ್ತು.
‘ಸುಧಾರಿತ ವೈದ್ಯಕೀಯ ನಿರ್ದೇಶನಗಳ ಅನ್ವಯ ಮರಣ ಇಚ್ಛೆಯ ಉಯಿಲು ಬರೆಯುವ
ವ್ಯಕ್ತಿಯು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ದಾಖಲೆಗಳಿಗೆ ಸಹಿ ಹಾಕಬೇಕು. ಅದನ್ನು ನೋಟರಿ ಅಥವಾ ಗೆಜೆಟೆಡ್ ಅಧಿಕಾರಿ ದೃಢೀಕರಿಸಬೇಕು’ ಎಂದು ಹೇಳಲಾಗಿತ್ತು. ಈ ಸುಧಾರಿತ ವೈದ್ಯಕೀಯ ನಿರ್ದೇಶನಗಳನ್ನು ಜಾರಿಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.