ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾರ ನೀಡದ ರಾಜ್ಯಪಾಲರ ನಡೆ ಪ್ರಶ್ನಿಸಿ ಪ್ರಾಧ್ಯಾಪಕಿ ಸಿ.ಗೀತಾ ಕೋರ್ಟ್‌ಗೆ!

ತಪ್ಪಿದ ಕುವೆಂಪು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಸ್ಥಾನ
Published 22 ಆಗಸ್ಟ್ 2023, 23:33 IST
Last Updated 22 ಆಗಸ್ಟ್ 2023, 23:33 IST
ಅಕ್ಷರ ಗಾತ್ರ

ಬೆಂಗಳೂರು: ಕುಲಪತಿ ನಿವೃತ್ತಿಯಾದ ಬಳಿಕ ಸೇವಾ ಹಿರಿತನದ ಆಧಾರದ ಮೇಲೆ ತಮಗೆ ಪ್ರಭಾರದ ಜವಾಬ್ದಾರಿ ನೀಡಿಲ್ಲ ಎಂದು ಆರೋಪಿಸಿ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಸಿ.ಗೀತಾ ಅವರು ರಾಜ್ಯಪಾಲರ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಬಿ.ಪಿ.ವೀರಭದ್ರಪ್ಪ ಅವಧಿ ಇದೇ ಆಗಸ್ಟ್‌ 1ರಂದು ಪೂರ್ಣಗೊಂಡಿತ್ತು. ತೆರವಾದ ಸ್ಥಾನಕ್ಕೆ ಎರಡು ವಾರ ಕಳೆದರೂ ಪ್ರಭಾರ ಕುಲಪತಿಗಳನ್ನು ನೇಮಿಸಿರಲಿಲ್ಲ. ಆ.14ರಂದು ಅಧಿಸೂಚನೆ ಹೊರಡಿಸಿದ್ದ ರಾಜ್ಯಪಾಲರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥ ಎಸ್‌.ವೆಂಕಟೇಶ್‌ ಅವರಿಗೆ ಪ್ರಭಾರ ವಹಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. 

ಸೇವಾ ಹಿರಿತನದಲ್ಲಿ ಮೊದಲ ಸ್ಥಾನದಲ್ಲಿದ್ದ ಸಿ.ಗೀತಾ ಅವರು ಹಿಂದೆ ಪ್ರಭಾರ ಕುಲಸಚಿವರಾಗಿ ಕೆಲಸ ಮಾಡಿದ್ದರು. ಈ ವೇಳೆ, ಸರ್ಕಾರದ ಅನುಮೋದನೆ ಪಡೆಯದೆ ‘ಡಿ’ ಗ್ರೂಪ್‌ ನೌಕರರಿಗೆ ಬಡ್ತಿ ನೀಡಿದ್ದಾರೆ ಎಂದು ಎನ್‌.ಇ.ಶಶಿಧರ್‌ ದೂರು ಸಲ್ಲಿಸಿದ್ದರು.

ಹಾಗೆಯೇ, ವಿಶೇಷ ಘಟಕ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಗಿರಿಜನ ಉಪಯೋಜನೆ (ಟಿಎಸ್‌ಪಿ) ಅನುದಾನದಲ್ಲಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ‘ಸ್ಮಾರ್ಟ್‌ಕ್ಲಾಸ್‌’ಗಳನ್ನು ಸಿದ್ಧಪಡಿಸಲಾಗಿತ್ತು. ಮಾರುಕಟ್ಟೆ ಬೆಲೆಗಿಂತ ಅಧಿಕ ದರದಲ್ಲಿ ಸಾಮಗ್ರಿಗಳನ್ನು ಖರೀದಿಸಿ ವಂಚಿಸಲಾಗಿದೆ. ಭೌತಿಕ ಪರಿಶೀಲನೆ ನಡೆಸದೆ, ನಗದು ರಸೀದಿ ಪಡೆಯದೆ ಗುತ್ತಿಗೆ ಕಂಪನಿಯೊಂದಕ್ಕೆ ₹2.99 ಕೋಟಿ ಪಾವತಿಸಲಾಗಿದೆ ಎಂದು ದೂರಿ ವಿದ್ಯಾವಿಷಯಕ ಪರಿಷತ್‌ ಸದಸ್ಯರಾದ ವೈ.ಆರ್ತೋಬ ನಾಯಕ  ದೂರು ನೀಡಿದ್ದರು. 

ಸೇವಾ ಹಿರಿತನದಲ್ಲಿ ಎರಡನೇ ಸ್ಥಾನದಲ್ಲಿರುವ ಯೋಗೀಶ್‌ ಅವರ ಮೇಲೂ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಯಾಗಿದ್ದ ಸಮಯದಲ್ಲಿ ಕೆಲ ಆರೋಪಗಳಿದ್ದವು. ಈ ಇಬ್ಬರ ಮೇಲೆ ಇಲಾಖಾ ವಿಚಾರಣೆ ಬಾಕಿ ಇರುವ ಕಾರಣ ಸೇವಾ ಹಿರಿತನದಲ್ಲಿ ಇಬ್ಬರ ನಂತರದ ಸ್ಥಾನದಲ್ಲಿರುವ ವೆಂಕಟೇಶ್‌ ಅವರಿಗೆ ಪ್ರಭಾರ ವಹಿಸುತ್ತಿರುವುದಾಗಿ ರಾಜ್ಯಪಾಲರು ಆದೇಶದಲ್ಲಿ ವಿವರಿಸಿದ್ದರು. 

‘ಕೆಲವರು ನನ್ನ ಮೇಲೆ ದುರುದ್ದೇಶದ ದೂರು ನೀಡಿದ್ದರು. ದೂರಿನಲ್ಲಿ ಸತ್ಯಾಂಶವಿಲ್ಲ ಎಂದು ಹಿಂದಿನ ಕುಲಪತಿ ವರದಿ ನೀಡಿದ್ದಾರೆ. ಹಾಗಿದ್ದರೂ ರಾಜ್ಯಪಾಲರು ಅದೇ ದೂರು ಉಲ್ಲೇಖಿಸಿ ಬೇರೆಯವರಿಗೆ ಪ್ರಭಾರ ವಹಿಸಿದ್ದಾರೆ. ಇದು ನಿಯಮಬಾಹಿರ ಕ್ರಮ’ ಎಂದು ದೂರಿರುವ ಗೀತಾ ಅವರು ರಾಜ್ಯಪಾಲ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಭಾರ ಕುಲಪತಿ ವೆಂಕಟೇಶ್‌ ಅವರನ್ನು ಪ್ರತಿವಾದಿಗಳನ್ನಾಗಿಸಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿವರಣೆ ಕೇಳಿ ಕೋರ್ಟ್‌ ಎಲ್ಲ ಪ್ರತಿವಾದಿಗಳಿಗೂ ನೋಟಿಸ್‌ ಜಾರಿ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT