ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಸಾಹಿತ್ಯ ಸಂಭ್ರಮ; ಮೈಕ್‌, ಕುರ್ಚಿ ಕಿತ್ತೆಸೆದು ದಾಂದಲೆ

ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಚಿಂತಕ ಶಿವ ವಿಶ್ವನಾಥನ್ ಹೇಳಿಕೆಗೆ ಆಕ್ರೋಶ
Last Updated 20 ಜನವರಿ 2019, 19:41 IST
ಅಕ್ಷರ ಗಾತ್ರ

ಧಾರವಾಡ: ಸೈನಿಕರ ಕುರಿತು ಚಿಂತಕ ಡಾ. ಶಿವ ವಿಶ್ವನಾಥನ್‌ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಧಾರವಾಡ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭದ ವೇದಿಕೆ ಏರಿದ ಬಿಜೆಪಿ ಕಾರ್ಯಕರ್ತರು ಮೈಕ್‌, ಕುರ್ಚಿ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು.

ಭಾನುವಾರ ಸಂಜೆ ಹಿರಿಯ ಲೇಖಕ ಕೃಷ್ಣಮೂರ್ತಿ ಹನೂರು ಮಾತನಾಡುತ್ತಿದ್ದಾಗ ಒಮ್ಮೆಲೇ ಸಭಾಂಗಣಕ್ಕೆ ನುಗ್ಗಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಶರಣು ಅಂಗಡಿ ಮತ್ತಿತರರು ತೋಳೇರಿಸಿಕೊಂಡೇ ವೇದಿಕೆ ಹತ್ತಿ ಮೈಕ್‌ ಕಿತ್ತುಕೊಂಡರು. ಒಬ್ಬ ವ್ಯಕ್ತಿ ಕುರ್ಚಿಯನ್ನು ಎತ್ತಿ ವೇದಿಕೆ ಹಿಂದಿನ ಪರದೆಯತ್ತ ಎಸೆದ. ವೇದಿಕೆ ಮೇಲಿದ್ದ ಗಣ್ಯರು ಸ್ವಲ್ಪದರಲ್ಲಿ ತಪ್ಪಿಸಿಕೊಂಡರು. ಇನ್ನೊಬ್ಬ ವ್ಯಕ್ತಿ ಟಿಪಾಯಿಗಳನ್ನು ಕೆಳಕ್ಕೆಸೆದ. ಪೋಡಿಯಂ ಅನ್ನು ಮತ್ತೊಬ್ಬ ನೆಲಕ್ಕುರುಳಿಸಿದ.

ಪೊಲೀಸರು ಈ ನಾಲ್ವರನ್ನು ಹಿಡಿದು ವೇದಿಕೆಯಿಂದ ಕೆಳಗೆ ಎಳೆದುಕೊಂಡು ಬಂದರೂ ಮತ್ತೆ ವೇದಿಕೆಯತ್ತ ನುಗ್ಗಲು ಯತ್ನಿಸಿದರು.

ದಿಢೀರ್‌ ನಡೆದ ಈ ಘಟನೆಯಿಂದ ವೇದಿಕೆ ಮೇಲಿದ್ದ ಗಣ್ಯರು, ಸಂಘಟಕರು ಕಕ್ಕಾಬಿಕ್ಕಿಯಾದರು. ಸಭಿಕರೂ ವಿಚಲಿತರಾದರು. ಕೆಲವು ಸಭಿಕರು ಎದ್ದು ನಿಂತು, ‘ಸಾಂಸ್ಕೃತಿಕ ಗೂಂಡಾಗಿರಿಗೆ’ ಧಿಕ್ಕಾರ. ಇಂತಹ ಹಿಂಸೆಯನ್ನು ಒಪ್ಪುವುದಿಲ್ಲ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.

ಅಷ್ಟರಲ್ಲಿ ದಾಂದಲೆ ನಡೆಸಲು ಬಂದಿದ್ದವರ ಪೈಕಿ ಒಬ್ಬಾತ, ಸೈನಿಕರ ವಿರುದ್ಧ ಡಾ.ಶಿವ ವಿಶ್ವನಾಥನ್‌ ನೀಡಿರುವ ಹೇಳಿಕೆ ಸರಿಯಲ್ಲ ಎಂದು ಹೇಳಿ ಅವರ ವಿರುದ್ಧ ಘೋಷಣೆ ಕೂಗಿದರು. ದಾಂಧಲೆ ನಡೆಸಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ಹೊರಗೆ ಕರೆದೊಯ್ದರು.

‘ಇಂತಹ ಹಿಂಸೆಗಳಿಗೆ ಸೊಪ್ಪು ಹಾಕುವುದು ಬೇಡ. ಕಾರ್ಯಕ್ರಮ ಮುಂದುವರಿಸಿ. ಈ ಕೃತ್ಯಕ್ಕೆ ಪ್ರತಿಭಟನೆ ದಾಖಲಿಸಿ. ಇಂತಹ ಗೂಂಡಾಗಿರಿಗೆ ಮಣಿಯುವುದಿಲ್ಲ ಎಂಬ ಸಂದೇಶ ಸಾರಬೇಕು’ ಎಂದು ಸಭಿಕರು ಒತ್ತಾಯಿಸಿದರು.

ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ನ ಅಧ್ಯಕ್ಷ ರಾಘವೇಂದ್ರ ಪಾಟೀಲ ಮತ್ತು ಲೋಹಿತ ನಾಯ್ಕರ್ ಅವರು ಪ್ರತಿಭಟನಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ನಂತರ ವೇದಿಕೆ ಮೂಲಕ ತಮ್ಮ ಅಹವಾಲು ಸಲ್ಲಿಸಲು ಅವಕಾಶ ನೀಡಿದರು. ನಂತರ ಪಾಟೀಲ, ಮಾಜಿ ಸೈನಿಕರ ಕ್ಷಮೆ ಕೋರಿದರು.

ಶಿವ ವಿಶ್ವನಾಥನ್‌ ಹೇಳಿದ್ದೇನು?

ಶನಿವಾರ ನಡೆದ ‘ರಾಷ್ಟ್ರೀಯತೆ: ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು’ ಗೋಷ್ಠಿಯಲ್ಲಿ ಡಾ.ಶಿವ ವಿಶ್ವನಾಥನ್ ಹೇಳಿದ್ದು ಹೀಗೆ..

‘ನಾನು ಅಸ್ಸಾಂಗೆ ಭೇಟಿ ನೀಡಿದ್ದಾಗ, ಮಹಿಳೆಯರು ನಮಗೆ ಶಾಂತಿ ಬೇಕು ಎಂದು ಹೇಳಿದರು. ನಾನು ಒಬ್ಬ ಶಿಕ್ಷಣ ತಜ್ಞನಾಗಿ ಸಶಸ್ತ್ರ ಸೇನೆಯ ವಿಶೇಷ ಅಧಿಕಾರದ ಬಗ್ಗೆ ಕೆಲಸ ಮಾಡಲು ಸೂಚಿಸಿದೆ. ಅವರು ಸೇನೆಯಿಂದ ನಡೆದ 1,500 ಅತ್ಯಾಚಾರ ಮತ್ತು ಕೊಲೆಯ ಪ್ರಕರಣಗಳನ್ನು ದಾಖಲೀಕರಣ ಮಾಡಲು ಆರಂಭಿಸಿದರು. ಅದು ಭಯಾನಕವಾಗಿತ್ತು. ಇದು ಸೇನೆಯನ್ನು ನಾಶ ಮಾಡುತ್ತದೆ. 17ರಿಂದ 21 ವರ್ಷ ವಯಸ್ಸಿನೊಳಗಿನವರು ಯಾವುದೇ ಪರಿವೇ ಇಲ್ಲದೆ ಅತ್ಯಾಚಾರ ಮಾಡುವುದು ಸಾಧ್ಯ ಎಂದರೆ...’

ಇವರ ಈ ಮಾತಿಗೆ ಸಭೆಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸೇನಾಧಿಕಾರಿಯೂ ಆದ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ‘ನೀವು ಸೈನಿಕರನ್ನು ಅತ್ಯಾಚಾರಿಗಳು ಎಂದು ಹೇಗೆ ಹೇಳುತ್ತೀರಿ. ನಾನು 200 ಸೈನಿಕರ ತಂಡದ ನೇತೃತ್ವ ವಹಿಸಿದ್ದೆ. ಅಲ್ಲಿ ಅಂಥ ಯಾವುದೇ ಘಟನೆ ನಡೆದಿಲ್ಲ’ ಎಂದಿದ್ದರು. ಜತೆಗೆ ‘ನಾನು ಯಾವುದೇ ತಪ್ಪನ್ನು ಮಾಡಿಲ್ಲ’ ಎಂದು ಮೂರು ಬಾರಿ ಹೇಳಿದ್ದರು. ಇವರ ಆವೇಶದ ಮಾತುಗಳಿಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

*ಧಾರವಾಡ ಸಾಹಿತ್ಯ ಸಂಭ್ರಮದ ಚಟುವಟಿಕೆ ಸಾಹಿತ್ಯಕ್ಕೆ ಸೀಮಿತಗೊಳಿಸದಿದ್ದರೆ ಸಂಭ್ರಮವೂ ಇರುವುದಿಲ್ಲ, ಸಾಹಿತಿಗಳೂ ಇರುವುದಿಲ್ಲ.

-ಬಿ.ಎಲ್‌.ಸಂತೋಷ್, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ, ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT