ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

545 ಪಿಎಸ್‌ಐ: ‘ಹೈ.ಕ’ ಮೀಸಲು ಜಟಾಪಟಿ

Published : 22 ಸೆಪ್ಟೆಂಬರ್ 2024, 20:38 IST
Last Updated : 22 ಸೆಪ್ಟೆಂಬರ್ 2024, 20:38 IST
ಫಾಲೋ ಮಾಡಿ
Comments

ಬೆಂಗಳೂರು: ಹೈದರಾಬಾದ್‌– ಕರ್ನಾಟಕ (371ಜೆ) ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿ ನೀಡುವ ಕುರಿತ ಪ್ರಕರಣದಲ್ಲಿ ಹೈಕೋರ್ಟ್‌ ನೀಡಲಿರುವ ಅಂತಿಮ ತೀರ್ಪಿಗೆ ಒಳಪಟ್ಟು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) 545 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಪೊಲೀಸ್‌ ಮಹಾ ನಿರ್ದೇಶಕರಿಗೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ನಿರ್ದೇಶನ ನೀಡಿದ್ದಾರೆ.

ಆದರೆ, ಆ ಬೆನ್ನಲ್ಲೆ, ಗೃಹ ಇಲಾಖೆಯ ಎಸಿಎಸ್‌ಗೆ ಟಿಪ್ಪಣಿ ಕಳುಹಿಸಿರುವ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ, ‘ಹೈದರಾಬಾದ್‌– ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿ ಕುರಿತ ಗೊಂದಲಗಳನ್ನು ನಿವಾರಿಸಲು ಸೆ. 27ರಂದು ಸಚಿವ ಸಂಪುಟದ 371(ಜೆ) ಉಪ ಸಮಿತಿ ಸಭೆ ನಡೆಯಲಿದೆ. ಅಲ್ಲಿಯವರೆಗೆ ಆಯ್ಕೆ ಪಟ್ಟಿ (ನೇಮಕಾತಿ ಆದೇಶ) ಪ್ರಕಟಿಸದೆ ತಡೆಹಿಡಿಯಬೇಕು’ ಎಂದು ಸೂಚನೆ ನೀಡಿದ್ದಾರೆ.

ಎಸಿಎಸ್‌ ನೀಡಿದ ಸೂಚನೆಯೇನು: ಪಿಎಸ್‌ಐ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕಿದ್ದು, ಹೈದರಾಬಾದ್‌– ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಸ್ಪಷ್ಟೀಕರಣ ನೀಡುವಂತೆ ಪೊಲೀಸ್‌ ಮಹಾ ನಿರ್ದೇಶಕರು 2024ರ ಜೂನ್‌ 26ರಂದು ಗೃಹ ಇಲಾಖೆಯ ಎಸಿಎಸ್‌ಗೆ ಪತ್ರ ಬರೆದಿದ್ದರು.

ಈ ಪತ್ರಕ್ಕೆ ಗುರುವಾರ (ಸೆ. 19) ಪ್ರತಿಕ್ರಿಯಿಸಿರುವ ಎಸಿಎಸ್‌,  ‘ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿಗೆ 2021ರ ಜ 21ರಂದು ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಹೈ–ಕ ಭಾಗದ ಅಭ್ಯರ್ಥಿಗಳಿಗೆ ಹುದ್ದೆಗಳಲ್ಲಿ ನೀಡುವ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2023ರ ಫೆ. 1ರಂದು ಹೊರಡಿಸಿದ್ದ ಸುತ್ತೋಲೆಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) 2024ರ ಜ. 1ರಂದು ರದ್ದುಪಡಿಸಿದೆ. ಕೆಎಟಿ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ರಿಟ್‌ ಅರ್ಜಿ ವಿಚಾರಣೆಯ ಹಂತದಲ್ಲಿದೆ. ಆದರೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) 2023ರ ಫೆ. 1ರಂದು ಹೊರಡಿಸಿದ್ದ ಸುತ್ತೋಲೆಗಿಂತ ಎರಡು ವರ್ಷ ಮೊದಲೇ 545 ಪಿಎಸ್‌ಐ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ’ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

‘ಹೀಗಾಗಿ, ಹೈಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟು ಎಂಬ ಷರತ್ತು ವಿಧಿಸಿ, ಹೈ–ಕ ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿ ನೀಡುವ ಕುರಿತಂತೆ 2020ರ ಜೂನ್‌ 6ರಂದು ಡಿಪಿಎಆರ್‌ ಹೊರಡಿಸಿರುವ ಅಧಿಸೂಚನೆ ಅನ್ವಯ ನೇಮಕಾತಿಗೆ ಕ್ರಮ ವಹಿಸಬೇಕು. ಈ ನಿರ್ದೇಶನವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅನುಮೋದನೆಗೊಂಡಿದೆ’ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಆಯ್ಕೆಯಾದ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ನೇಮಕಾತಿ ಆದೇಶ ನೀಡುವಂತೆ ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿ ತೀವ್ರ ಒತ್ತಡ ಹೇರಿದ್ದಾರೆ. ಸಚಿವರ ಸೂಚನೆಯಂತೆ ನೇಮಕಾತಿ ಪ್ರಕ್ರಿಯೆ ತ್ವರಿತಗೊಳಿಸಲು ಗೃಹ ಇಲಾಖೆ ಮುಂದಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

‘ಆಯ್ಕೆ ಪಟ್ಟಿ ತಡೆಹಿಡಿಯಬೇಕು’

ಪೊಲೀಸ್‌ ಮಹಾ ನಿರ್ದೇಶಕರಿಗೆ ಗೃಹ ಇಲಾಖೆಯ ಎಸಿಎಸ್‌ ನಿರ್ದೇಶನ ನೀಡಿರುವುದು ಗೊತ್ತಾಗುತ್ತಿದ್ದಂತೆಯೇ ಎಸಿಎಸ್‌ಗೆ ಶನಿವಾರ ( ಸೆ. 21) ಟಿಪ್ಪಣಿ ನೀಡಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಪಿಎಸ್‌ಐ ಆಯ್ಕೆ ಪಟ್ಟಿ ಪ್ರಕಟಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ‘ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿರಿಸಿದ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವಾಗ ವಿವಿಧ ನೇಮಕಾತಿ ಪ್ರಾಧಿಕಾರಗಳು ಪಾಲಿಸಬೇಕಾದ ವಿಧಿ–ವಿಧಾನಗಳ ಬಗ್ಗೆ ಡಿಪಿಎಆರ್‌ ಹೊರಡಿಸಿರುವ ವಿವಿಧ ಸುತ್ತೋಲೆಗಳಲ್ಲಿ ಗೊಂದಲಗಳಿವೆ. ಅಲ್ಲದೆ, ಹೈಕೋರ್ಟ್‌ನಲ್ಲಿಯೂ ಪ್ರಕರಣ ಬಾಕಿ ಇದೆ’ ಎಂದು ಪ್ರಿಯಾಂಕ್‌ ತಿಳಿಸಿದ್ದಾರೆ.

ಕೆಎಟಿ ರದ್ದುಪಡಿಸಿದ್ದ ಸುತ್ತೋಲೆಯಲ್ಲಿ ಏನಿತ್ತು?

ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿ ನೀಡುವಾಗ ಅನುಸರಿಸಬೇಕಾದ ವಿಧಿ–ವಿಧಾನಗಳನ್ನು 2023ರ ಫೆ. 1ರ ಸುತ್ತೋಲೆಯಲ್ಲಿ ವಿವರಿಸಲಾಗಿದೆ. ಈ ಸುತ್ತೋಲೆಯ ಪ್ರಕಾರ, ‘ಹುದ್ದೆಗಳಿಗೆ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ತಯಾರಿಸುವಾಗ, ಮೊದಲು ಮೆರಿಟ್‌ (ಅರ್ಹತಾ) ಪಟ್ಟಿ ತಯಾರಿಸಬೇಕು. ಅಭ್ಯರ್ಥಿಗಳು ಯಾವುದೇ ವೃಂದವನ್ನು ಆಯ್ಕೆ ಮಾಡಿಕೊಂಡಿದ್ದರೂ ಅದನ್ನು ಪರಿಗಣಿಸದೆ, ಮೊದಲು ಅನ್ಯ ವೃಂದದ ಹುದ್ದೆಗಳನ್ನು ತುಂಬಬೇಕು. ನಂತರ ಕಲ್ಯಾಣ ಕರ್ನಾಟಕ ಮೀಸಲಾತಿ ಅಡಿ ಮೀಸಲಿಟ್ಟ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು’ ಎಂದಿದೆ. ಇದನ್ನು ಕೆಎಟಿ ರದ್ದುಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT