ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಟಿಸಿಎಲ್‌ | ಹರಾಜಿಗೆ ಅವಕಾಶವಿಲ್ಲ: ಹೈಕೋರ್ಟ್‌

Published : 2 ಆಗಸ್ಟ್ 2024, 16:17 IST
Last Updated : 2 ಆಗಸ್ಟ್ 2024, 16:17 IST
ಫಾಲೋ ಮಾಡಿ
Comments

ಬೆಂಗಳೂರು: ‘ಜನರಲ್​ ಪವರ್​ ಆಫ್​ ಅಟಾರ್ನಿ (ಜಿಪಿಎ) ಮುಖಾಂತರ ಸ್ವಾಧೀನಕ್ಕೆ ಪಡೆದ; ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಜಮೀನು ಪರಭಾರೆ ನಿಷೇಧ) ಕಾಯ್ದೆಯಡಿ ಮಂಜೂರಾದ ಜಮೀನಿಗೆ ಸಂಬಂಧಿಸಿದಂತೆ ಪಡೆದ ಬ್ಯಾಂಕ್‌ ಸಾಲವನ್ನು ಮರು ಪಾವತಿಸದೇ ಹೋದಲ್ಲಿ, ಸಾಲ ವಸೂಲಾತಿ ನೆಪದಲ್ಲಿ ಅಂತಹ ಜಮೀನನ್ನು ವಶಪಡಿಸಿಕೊಂಡು ಹರಾಜು ಹಾಕಲು ಅವಕಾಶವಿಲ್ಲ’ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.

ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಜಪ್ತಿ ಮಾಡಲಾಗಿದ್ದ; ಪಿಟಿಸಿಎಲ್​ ಕಾಯ್ದೆಯಡಿ ಮಂಜೂರಾದ ಜಮೀನನ್ನು ಮೂಲ ಭೂ ಮಾಲೀಕರ ಹೆಸರಿಗೆ ಮರು ಸ್ಥಾಪಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೊವಿಂದರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಈ ಪ್ರಕರಣದಲ್ಲಿ ಕೆಲವರಿಗೆ ಪಿಟಿಸಿಎಲ್‌ ಕಾಯ್ದೆಯಡಿ ಮಂಜೂರಾದ ಜಮೀನುಗಳನ್ನು ಜವಾಹರ್ ಹೌಸ್ ಬಿಲ್ಡಿಂಗ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್, ಜಿಪಿಎ ಮೂಲಕ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಬಡಾವಣೆ ನಿರ್ಮಾಣಕ್ಕಾಗಿ ಭೂ ಅಭಿವೃದ್ಧಿಪಡಿಸಲು ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪಡೆದ ₹2 ಕೋಟಿ ಸಾಲವನ್ನು ಸೊಸೈಟಿ ಮರು ಪಾವತಿಸಿಲ್ಲ. ಇದರಿಂದ ಜಮೀನನ್ನು ವಶಪಡಿಸಿಕೊಂಡ ಬ್ಯಾಂಕ್‌ ಅದನ್ನು ಹರಾಜಿನಲ್ಲಿ ಮಾರಾಟ ಮಾಡಲು ಮುಂದಾಗಿದೆ. ಆದರೆ, ಇದು ಸರಿಯಾದ ಕ್ರಮವಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ಸಾಲ ಮರು ಪಾವತಿ ಮಾಡದ ಕಾರಣ ಸೊಸೈಟಿಯ ಸ್ವಾಧೀನದಲ್ಲಿದ್ದ ಬೆಂಗಳೂರು ಉತ್ತರ ತಾಲ್ಲೂಕಿನ ಮಾಚೋಹಳ್ಳಿಯಲ್ಲಿ 1 ಎಕರೆ 25 ಗುಂಟೆ ಜಮೀನನ್ನು ವಶಪಡಿಸಿಕೊಂಡಿದ್ದ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌, ಅದನ್ನು ಹರಾಜು ಹಾಕಲು ಮುಂದಾದಿತ್ತು. ಈ ಕ್ರಮವನ್ನು ಪ್ರಶ್ನಿಸಿ ಜಮೀನಿನ ಮೂಲ ಮಾಲೀಕರಲ್ಲಿ ಒಬ್ಬರಾದ ಮುನಿಯಮ್ಮ, ಉಪ ವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿ, ಜಮೀನನ್ನು ಮುನಿಯಮ್ಮ ಅವರ ಹೆಸರಿಗೆ ಪುನರ್ ​ಸ್ಥಾಪಿಸಿ ಆದೇಶಿಸಿದ್ದರು. ಈ ಆದೇಶವನ್ನು ಜಿಲ್ಲಾಧಿಕಾರಿ ಎತ್ತಿ ಹಿಡಿದಿದ್ದರು. ಇದನ್ನು ಪ್ರಶ್ನಿಸಿ ಬ್ಯಾಕ್‌ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT