ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಬ್ಲ್ಯುಡಿ ಇಲಾಖೆ: ಬಡ್ತಿಗಾಗಿ 418 ಬ್ಯಾಕ್‌ಲಾಗ್‌ ಸಹಾಯಕ ಎಂಜಿನಿಯರ್‌ಗಳ ಅಳಲು

ಪದೋನ್ನತಿ, ಹುದ್ದೆ ನೀಡದೆ ಪಿಡಬ್ಲ್ಯುಡಿಯಿಂದ ಇತರ ಇಲಾಖೆಗೆ ವರ್ಗಾವಣೆಗೆ ವಿರೋಧ
Last Updated 14 ಜುಲೈ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೀಸಲಾತಿ (ಎಸ್‌ಸಿ ಶೇ 15, ಎಸ್‌ಟಿ ಶೇ 3) ಪ್ರಮಾಣ ಕಾಪಾಡಬೇಕೆಂಬ ಕಾರಣ ನೀಡಿ ಜಲಸಂಪನ್ಮೂಲ ಇಲಾಖೆಗೆ 368 ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ (ಆರ್‌ಡಿಪಿಆರ್‌) ಇಲಾಖೆಗೆ 50 ಸೇರಿ ಒಟ್ಟು418 ಬ್ಯಾಕ್‌ಲಾಗ್‌ ಸಹಾಯಕ ಎಂಜಿನಿಯರ್‌ಗಳನ್ನು (ಎಇ) ಶಾಶ್ವತವಾಗಿ ವರ್ಗಾವಣೆ ಮಾಡಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ.

ಇಲಾಖೆಯ ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಈ ಎಂಜಿನಿಯರ್‌ಗಳು, ‘ಎಇ ಹುದ್ದೆಯಿಂದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಹುದ್ದೆಗೆ ಬಡ್ತಿ ನೀಡುವುದರಿಂದ ತಪ್ಪಿಸಲು ಈ ಷಡ್ಯಂತ್ರ ಹೆಣೆಯಲಾಗಿದೆ’ ಎಂದು ಆರೋಪಿಸಿದ್ದಾರೆ. 18 ವರ್ಷಗಳಿಂದ ಎಇ ಹುದ್ದೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಎಇಇ ಹುದ್ದೆಗೆ ಪದೋನ್ನತಿ ಮತ್ತು ಹುದ್ದೆ ನೀಡಿದ ಬಳಿಕ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಮೂಲಕ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಮತ್ತು ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಈ ಎಂಜಿನಿಯರ್‌ಗಳು, ಸಾಮಾಜಿಕ ನ್ಯಾಯ ಒದಗಿಸುವಂತೆ ಕೋರಿದ್ದಾರೆ.

ಬ್ಯಾಕ್‌ಲಾಗ್‌ ಎಂಜಿನಿಯರ್‌ಗಳನ್ನುಜಲಸಂಪನ್ಮೂಲ ಮತ್ತು ಆರ್‌ಡಿಪಿಆರ್‌ ಇಲಾಖೆಗೆ ಹಂಚಿಕೆ ಮಾಡುವ ಕುರಿತು ಚರ್ಚಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್ ಅಧ್ಯಕ್ಷತೆಯಲ್ಲಿ ಶನಿವಾರ (ಜುಲೈ 16) ಸಭೆ ನಿಗದಿಯಾಗಿದೆ.

ಏನಿದು ಗೊಂದಲ: ಗುತ್ತಿಗೆ ಆಧಾರದಲ್ಲಿ 2003–04ರಲ್ಲಿ 846 ಬ್ಯಾಕ್‌ಲಾಗ್‌ ಸಹಾಯಕ ಎಂಜಿನಿಯರ್‌ (ಲೋಕೋಪಯೋಗಿ ಇಲಾಖೆಗೆ 261, ಜಲಸಂಪನ್ಮೂಲ ಇಲಾಖೆಗೆ 499, ‌ಆರ್‌ಡಿಪಿಆರ್‌ ಇಲಾಖೆಗೆ 86) ಹುದ್ದೆಗಳನ್ನು ಗುರುತಿಸಿ ಲೋಕೋಪಯೋಗಿ ಇಲಾಖೆಯ ಮೂಲಕ ಭರ್ತಿ ಮಾಡಿಕೊಳ್ಳಲಾಗಿತ್ತು. ಅವರನ್ನು 2005ರ ಮೇ 24ರಂದು ಕಾಯಂಗೊಳಿಸಲಾಗಿದೆ. ಆದರೆ,ಈ ನೇಮಕಾತಿ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ 2015ರ ನ. 4 ತೀರ್ಪಿನಂತೆ ಕಾಯಂಗೊಂಡಿದ್ದು, ಕೆಪಿಎಸ್‌ಸಿ ಮೂಲಕ 2003–04ರಿಂದ ಪೂರ್ವನ್ವಯ ಸೇವಾ ಸೌಲಭ್ಯ ನೀಡಿ ಎಲ್ಲ ಎಂಜಿನಿಯರ್‌ಗಳನ್ನು ಮರು ನೇಮಕಾತಿ ಮಾಡಲಾಗಿತ್ತು.‌ 2019 ಆಗಸ್ಟ್‌ 19ರಂದು ಜ್ಯೇಷ್ಠತೆಯನ್ನೂ ನಿಗದಿಪಡಿಸಲಾಗಿತ್ತು.

‘ಇತ್ತೀಚೆಗೆ ಈ ಮೂರೂ ಇಲಾಖೆಗಳ ವಿಭಜನೆ ಪ್ರಕ್ರಿಯೆ ನಡೆಯುತ್ತಿದ್ದು, ಅಭಿಮತ ನೀಡಿದವರನ್ನು ಅವರು ಬಯಸಿದ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಅಭಿಮತ ನೀಡಿದ ಬಳಿಕ ಜಲಸಂಪನ್ಮೂಲ ಇಲಾಖೆಗೆ 131 ಹಾಗೂ ಆರ್‌ಡಿಪಿಆರ್‌ ಇಲಾಖೆಗೆ 36 ಎಂಜಿನಿಯರ್‌ಗಳನ್ನು ಹಂಚಿಕೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಗೆಂದೇ ಗುರುತಿಸಿದ 261 ಬ್ಯಾಕ್‌ಲಾಗ್‌ ಎಂಜಿನಿಯರ್‌ಗಳಲ್ಲದೆ ಹೆಚ್ಚುವರಿಯಾಗಿ ಜಲಸಂಪನ್ಮೂಲ ಇಲಾಖೆಯ 368 ಹಾಗೂ ಆರ್‌ಡಿಪಿಆರ್‌ ಇಲಾಖೆಯ 50 (ಒಟ್ಟು 418) ಎಂಜಿನಿಯರ್‌ಗಳು ಲೋಕೋಪಯೋಗಿ ಇಲಾಖೆಯಲ್ಲೇ ಉಳಿದಿದ್ದಾರೆ. ಅವರ ವರ್ಗಾವಣೆ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ’ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ನಾಲ್ಕು ಬಾರಿ ಡಿಪಿಸಿ ಮುಂದೂಡಿಕೆ

‘ಸಹಾಯಕ ಎಂಜಿನಿಯರ್‌ ವಿಭಾಗ– 1ರಿಂದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿಭಾಗ–1ಕ್ಕೆ ಬಡ್ತಿ ನೀಡಲು ಇದೇ ವರ್ಷ ಜೂನ್‌ 6, 13, 22, ಜುಲೈ7 ಹೀಗೆ ನಾಲ್ಕು ಬಾರಿ ಇಲಾಖಾ ಪದೋನ್ನತಿ ಸಮಿತಿ ಸಭೆ (ಡಿಪಿಸಿ) ನಿಗದಿಪಡಿಸಿ, ಮುಂದೂಡಲಾಗಿದೆ. ಅರ್ಹ ಸಹಾಯಕ ಎಂಜಿನಿಯರ್‌ಗಳಿಗೆ ಬಡ್ತಿ ನೀಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ‌ಅದನ್ನು ಪರಿಗಣಿಸದೆ ಜ್ಯೇಷ್ಠತೆಯಲ್ಲಿ ಕಿರಿಯರಾದ, 2009ರಲ್ಲಿ ಜಲಸಂಪನ್ಮೂಲ ಇಲಾಖೆಗೆ ಹಾಗೂ 2016ರಲ್ಲಿ ಆರ್‌ಡಿಪಿಆರ್‌ ಇಲಾಖೆಗೆ ನೇಮಕಗೊಂಡವರಿಗೆ ಪದೋನ್ನತಿ ನೀಡಿ ಹುದ್ದೆ ನೀಡಲಾಗಿದೆ. ಈ ಸಭೆಯ ಕಾರ್ಯಸೂಚಿಯಂತೆ ಕ್ರಮ ತೆಗೆದುಕೊಂಡರೆ 2009 ಮತ್ತು 2016ರಲ್ಲಿ ನೇಮಕಗೊಂಡು ಬಡ್ತಿ ಹೊಂದಿರುವ ಎಂಜಿನಿಯರ್‌ಗಳ ಕೆಳಗೆ ಕೆಲಸ ಮಾಡಬೇಕಾಗುತ್ತದೆ’ ಎಂದು ಬ್ಯಾಕ್‌ಲಾಗ್‌ ಸಹಾಯಕ ಎಂಜಿನಿಯರ್‌ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

---

ಬ್ಯಾಕ್‌ಲಾಗ್‌ ಸಹಾಯಕ ಎಂಜಿನಿಯರ್‌ಗಳಿಗೆ ಎಇಇ ಹುದ್ದೆಗೆ ನ್ಯಾಯಯುತವಾಗಿ ಸಿಗಬೇಕಾದ ಪದೋನ್ನತಿ ಮತ್ತು ಹುದ್ದೆ ತಪ್ಪಿಸುವ, ವಿಳಂಬ ಮಾಡುವ ಈ ನಡೆ ಅಮಾನವೀಯ

- ಡಿ. ಚಂದ್ರಶೇಖರಯ್ಯ, ಅಧ್ಯಕ್ಷರು, ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ

***

ಇಲಾಖೆಗಳ ವಿಭಜನೆ ಕಾರಣಕ್ಕೆ ಎಇಗಳನ್ನು ಮರು ಹಂಚಿಕೆ ಮಾಡುವುದರಿಂದ ಅವರ ಜ್ಯೇಷ್ಠತೆಗೆ ಯಾವುದೇ ಕುತ್ತು ಬರುವುದಿಲ್ಲ. ಅರ್ಹರಿಗೆ ಪದೋನ್ನತಿಯ ಜೊತೆಗೆ ಹುದ್ದೆಯೂ ಸಿಗಲಿದೆ

- ಬಿ.ಎಚ್.ಅನಿಲ್‌ಕುಮಾರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT