ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಂಟೈನ್‌ ನೆಪದಲ್ಲಿ ಪ್ರಯಾಣಿಕರಿಂದ ವಸೂಲಿ

ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಆರೋಪ
Last Updated 28 ಮೇ 2020, 20:05 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಪ್ರಕರಣ ಹೆಚ್ಚಾಗಿರುವ ರಾಜ್ಯಗಳಿಂದ ಬಂದಿರುವ ಪ್ರಯಾಣಿಕರನ್ನು ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ನಿಗದಿತ ಅವಧಿ ಮೀರಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಡುವ ಮೂಲಕ ಅಧಿಕ ಹಣ ಪಾವತಿಸುವಂತೆ ಒತ್ತಾಯ ಮಾಡುತ್ತಿರುವ ಪ್ರಕರಣಗಳು ವರದಿಯಾಗಿವೆ.

ಮೂರು ದಿನದ ಹಿಂದೆ ಮುಂಬೈನಿಂದ ಉಡುಪಿಗೆ ಬಂದ ಸರಸ್ವತಿ (ಹೆಸರು ಬದಲಿಸಲಾಗಿದೆ) ಅವರನ್ನು ವಸತಿ ಗೃಹವೊಂದರಲ್ಲಿ ಇರಿಸಲಾಗಿದೆ. 14ದಿನಗಳ ಬಿಲ್‌ ಪಾವತಿಸುವಂತೆ ಅವರನ್ನು ಒತ್ತಾಯಿಸಲಾಗಿದೆ. ಅಷ್ಟೇ ಅಲ್ಲ, ನಗದು ಪಾವತಿಸಲು ತಾಕೀತು ಮಾಡಲಾಗಿದೆ. ಅವರ ಜತೆಯಲ್ಲೇ ಬಂದಿರುವ ಉಳಿದ ಕೆಲ ಪ್ರಯಾಣಿಕರಿಗೂ ಹೀಗೇ ಮಾಡಲಾಗಿದೆ ಎಂಬ ದೂರು ಆರೋಗ್ಯ ಇಲಾಖೆಗೆ ಸಲ್ಲಿಕೆಯಾಗಿದೆ. ಈ ಪ್ರಕರಣ ತಮ್ಮ ಗಮನಕ್ಕೆ ಬಂದಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅತ್ಯಧಿಕ ಸಂಖ್ಯೆಯಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಗುಜರಾತ್‌, ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದ ಬಂದ ಪ್ರಯಾಣಿಕರನ್ನು 7 ದಿನ ಸಾಂಸ್ಥಿಕ ಕ್ವಾರಂಟೈನ್‌ ಮಾಡಬೇಕು. 5ರಿಂದ 7 ದಿನಗಳೊಳಗೆ ಗಂಟಲು ದ್ರವ ತೆಗೆದು ಪರೀಕ್ಷಿಸಬೇಕು. ‘ನೆಗಟಿವ್’‌ ಬಂದರೆ ಮುಂದಿನ 7 ದಿನ ಮನೆಯಲ್ಲಿ ಕ್ವಾರಂಟೈನ್‌ನಲ್ಲಿಡಬೇಕು ಎಂದು ಸರ್ಕಾರದ ಮಾರ್ಗಸೂಚಿ ಹೇಳುತ್ತದೆ.

’ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ ಪ್ರಯಾಣಿಕರ ಗಂಟಲು ದ್ರವ ಪರೀಕ್ಷೆಯನ್ನು 12 ದಿನಗಳಿಗೆ ಮೊದಲು ಮಾಡುತ್ತಿಲ್ಲ. ಎರಡು ದಿನಗಳ ಬಳಿಕ ಇದರ ಫಲಿತಾಂಶ ಬರುತ್ತದೆ. ಒಟ್ಟಿನಲ್ಲಿ 14 ದಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ ’ ಎಂದೂ ಸರಸ್ವತಿ ಆಪಾದಿಸಿದ್ದಾರೆ.

‘ನಾವು ಅತ್ಯಂತ ತುರ್ತು ಕಾರಣಗಳಿಗಾಗಿ ಬಂದಿದ್ದೇವೆ. ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಸಹಕರಿಸುತ್ತಿದ್ದೇವೆ. ಆಮೇಲೂ ಏಳು ದಿನ ಇರಬೇಕೆಂದು ಹೇಳುವುದು ನಿಯಮ ಬಾಹಿರ ಕ್ರಮ’ ಎಂದು ಅವರ ಜತೆಯಲ್ಲೇ ಬಂದವರು ದೂರಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಸಿಗಲಿಲ್ಲ.

ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಬಲ್ಲಾ ಇದೇ 28ರಂದು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ‘ಪರಿಷ್ಕೃತ ಮಾರ್ಗಸೂಚಿಯಂತೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ. ಕೆಲ ವಸತಿ ಗೃಹಗಳು ಪ್ರಯಾಣಿಕರಿಂದ 14 ದಿನಗಳ ಬಿಲ್‌ ಪಡೆದಿವೆ. ಉಳಿದ 7 ದಿನಗಳ ಬಿಲ್‌ ಮರುಪಾವತಿ ಮಾಡಲು ನಿರಾಕರಿಸುತ್ತಿರುವ ಕುರಿತು ದೂರುಗಳು ಬಂದಿವೆ. 7ದಿನದ ಬಿಲ್‌ ಮರುಪಾವತಿ ಮಾಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ.

ಉಡುಪಿಯ ಒಂದು ಪ್ರಕರಣ ಗಮನಕ್ಕೆ ಬಂದಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದುಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT