ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಲೆಸ್ಟೀನ್‌ ನಾಗರಿಕರ ಪರ ಸಭೆ: ಅನುಮತಿ ನಿರಾಕರಣೆ; ಪೊಲೀಸರ ನಡೆಗೆ ಆಕ್ರೋಶ

ಡಿ.2ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ಯಾಲೆಸ್ಟೀನ್‌ ನಾಗರಿಕರ ಪರ ಸಭೆ
Published 30 ನವೆಂಬರ್ 2023, 15:37 IST
Last Updated 30 ನವೆಂಬರ್ 2023, 15:37 IST
ಅಕ್ಷರ ಗಾತ್ರ

ಬೆಂಗಳೂರು: ಪ್ಯಾಲೆಸ್ಟೀನ್‌ ನಾಗರಿಕರ ಪರವಾಗಿ ರಾಜ್ಯದಲ್ಲಿ ನಡೆಸುವ ಸಭೆಗಳಿಗೆ ಅನುಮತಿ ನೀಡಲು ಪೊಲೀಸರು ನಿರಾಕರಿಸುತ್ತಿರುವುದಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ‘ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತಿದೆ’ ಎಂದು ಕಿಡಿಕಾರಿದ್ದಾರೆ.

ಗಾಯಕಿ ಎಂ.ಡಿ.ಪಲ್ಲವಿ ಸೇರಿದಂತೆ ಹಲವರ ನೇತೃತ್ವದಲ್ಲಿ ಬುಧವಾರ ರಂಗಶಂಕರದಲ್ಲಿ ಆಯೋಜಿಸಿದ್ದ ಪ್ಯಾಲೆಸ್ಟೀನ್‌ ಪರ ಕವಿತೆ ವಾಚನ, ಕಿರುನಾಟಕ ಪ್ರದರ್ಶನಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಈ ಘಟನೆಯ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹೆಚ್ಚಾಗಿದೆ.

‘ಹೈಕೋರ್ಟ್‌ ಸೂಚನೆಯಂತೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿದೆ. ಆದರೆ, ಪ್ಯಾಲೆಸ್ಟೀನ್‌ ನಾಗರಿಕರ ಪರ ಪ್ರತಿಭಟನೆ ನಡೆಸುತ್ತೇವೆ ಎಂದರೆ ಅಲ್ಲೂ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ. ನಾವು ಯಾವ ಸಮಾಜದಲ್ಲಿ ಇದ್ದೇವೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಅಲ್ಲವೇ’ ಎಂದು ಹೋರಾಟಗಾರರು ಪ್ರಶ್ನಿಸಿದ್ದಾರೆ.

‘ಅನುಮತಿ ನಿರಾಕರಣೆ ತಪ್ಪು, ಮುಂದೆ ಈ ರೀತಿ ಆಗಬಾರದು’ ಎಂದು ಸಾಹಿತಿ ಪುರುಷೋತ್ತಮ ಬಿಳಿಮಲೆ ಪ್ರತಿಕ್ರಿಯಿಸಿದ್ದಾರೆ.

ಪೊಲೀಸರ ನಡೆ ಖಂಡಿಸಿ, ಡಿ.2ರಂದು ಸಂಜೆ 4.30ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ. ಸಾಹಿತಿ ದೇವನೂರ ಮಹಾದೇವ, ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರಾಜ್ಯ ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ, ಸಾಹಿತಿ ರಮಮತ್‌ ತರೀಕೆರೆ, ರಂಗಕರ್ಮಿ ಬಿ.ಸುರೇಶ್‌, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಚಿತ್ರನಟ ಪ್ರಕಾಶ್ ರೈ ಸೇರಿದಂತೆ 100ಕ್ಕೂ ಹೆಚ್ಚು ಹೋರಾಟಗಾರರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

‘ಪ್ಯಾಲೆಸ್ಟೀನ್‌ ನಾಗರಿಕರಿಗೆ ನ್ಯಾಯ ಸಿಕ್ಕಲಿ. ಇಸ್ರೇಲ್‌ ನಡೆಸುತ್ತಿರುವ ನರಮೇಧ ನಿಲ್ಲಲಿ. ಮನುಷ್ಯತ್ವದ ಪರವಾಗಿ ನಿಲ್ಲಬೇಕಾದ ಜರೂರಿರುವ ಈ ಹೊತ್ತಿನಲ್ಲಿ ಸಭೆ ಮುಂದೂಡುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದಾರೆ.

‘ಗಾಂಧಿಭವನ, ಅಂಬೇಡ್ಕರ್ ಭವನದ ಮುಖ್ಯಸ್ಥರನ್ನೇ ಪೊಲೀಸರು ಬೆದರಿಸುತ್ತಿದ್ದಾರೆ. ಅಲ್ಲಿ ಅಹಿತಕರ ಘಟನೆಗಳು ನಡೆದರೆ ಭವನಕ್ಕೆ ಸಂಬಂಧಪಟ್ಟವರ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಭವನಗಳಲ್ಲಿ ಪುಟ್ಟ ಸಭೆ ನಡೆಸುವುದಕ್ಕೂ ಪೊಲೀಸರ ಅನುಮತಿ ಬೇಕಾಗಿದೆ. ಅನುಮತಿ ಪಡೆಯಲು ತೆರಳಿದರೆ ದಿನಗಟ್ಟಲೇ ಕಾಯಿಸುತ್ತಿದ್ದಾರೆ. ಅಲ್ಲದೇ ಅನುಮಾನಿಸುತ್ತಿದ್ದಾರೆ’ ಎಂದು ಬರಹಗಾರ ರಾಜಶೇಖರ್ ಅಕ್ಕಿ ಎಂಬುವರು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ನೀಡಿರುವ ನೋಟಿಸ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ.5ರಂದು ನಗರದ ಸೇಂಟ್ ಮಾರ್ಕ್ಸ್‌ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದವರ ವಿರುದ್ಧ ಕಬ್ಬನ್‌ಪಾರ್ಕ್ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಬೈಶಾಲಿ ಡೇ, ಶಶಾಂಕ್, ಮೊಹಮ್ಮದ್ ಖಲೀಫ್ ಸೇರಿದಂತೆ 25 ಮಂದಿ ವಿರುದ್ಧ ಸಾರ್ವಜನಿಕ ಸಂಚಾರಕ್ಕೆ ಅಡಚಣೆ, ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಆರೋಪದ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅವರಿಗೆ ನೋಟಿಸ್‌ ನೀಡಿ ವಿಚಾರಣೆ ಸಹ ನಡೆಸಿದ್ದರು. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರನ್ನು ಪ್ರತಿಕ್ರಿಯೆಗಾಗಿ‌ ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಲಭ್ಯವಾಗಲಿಲ್ಲ.

ಮುಖ್ಯಮಂತ್ರಿಗೆ ಸಾಹಿತಿಗಳ ಬಹಿರಂಗ ಪತ್ರ

ಬೆಂಗಳೂರಿನ ರಂಗಶಂಕರದಲ್ಲಿ ಸಾಂಸ್ಕೃತಿಕ ಅಭಿವ್ಯಕ್ತಿಗೆ ಅವಕಾಶ ನೀಡದ ಪೊಲೀಸರ ನಡೆ ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಹಿತಿಗಳು ಹಾಗೂ ಹೋರಾಟಗಾರರು ಬಹಿರಂಗ ಪತ್ರ ಬರೆದಿದ್ದಾರೆ.

‘ಪ್ಯಾಲೆಸ್ಟೀನ್‌ ನಾಗರಿಕರ ಪರವಾಗಿ ಸಾಮಾಜಿಕ ಕಾರ್ಯಕರ್ತರ ಶಾಂತಿಯುತ ಅಭಿವ್ಯಕ್ತಿಯನ್ನು ಕರ್ನಾಟಕದ ಪೊಲೀಸರು ಬಲವಂತವಾಗಿ ಹತ್ತಿಕ್ಕುತ್ತಿರುವ ರೀತಿಯು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸುತ್ತಿದೆ’ ಎಂದು ಸಾಹಿತಿಗಳಾದ ಕೆ.ಮರುಳಸಿದ್ದಪ್ಪ, ಜಿ.ರಾಮಕೃಷ್ಣ, ವಿಜಯಾ, ಎಸ್.ಜಿ.ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

‘ಪ್ಯಾಲೆಸ್ಟೀನ್‌ ಜನರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಎಲ್ಲಾ ದೇಶಗಳ ನಾಗರಿಕರು ತಮ್ಮ ಸಹಾನುಭೂತಿ ಹಾಗೂ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿ ಮಕ್ಕಳು ಮತ್ತು ಮಹಿಳೆಯರನ್ನು ಭೀಕರವಾಗಿ ಹತ್ಯೆ ಮಾಡುತ್ತಿರುವ ಕೃತ್ಯ ಯಾರೂ ಒಪ್ಪಲು ಸಾಧ್ಯವಿಲ್ಲ. ಆಕ್ರಮಣ ನಿಲ್ಲಿಸುವಂತೆ ಹಲವು ದೇಶಗಳಿಂದ ಒಕ್ಕೊರಲಿನ ಮನವಿ ಬರುತ್ತಿವೆ. ಕೇಂದ್ರ ಸರ್ಕಾರ ಸಹ ಪ್ಯಾಲೆಸ್ಟೀನ್‌ ಜನರ ಪರವಾಗಿ ತನ್ನ ಬೆಂಬಲ ಪುನರುಚ್ಚರಿಸುತ್ತಿದೆ. ನಿಜಸ್ಥಿತಿ ಹೀಗಿರುವಾಗ ಕರ್ನಾಟಕದ ಪೋಲಿಸರ ವರ್ತನೆ ಮಾತ್ರ ದಿಗ್ಭ್ರಮೆ ಹುಟ್ಟಿಸುತ್ತಿದೆ’ ಎಂದು ಹೇಳಿದ್ದಾರೆ.

ಬೆಂಗಳೂರು, ಸಾಗರ, ತುಮಕೂರು ಪಟ್ಟಣಗಳಲ್ಲಿ ಹಲವಾರು ಸಂಘ–ಸಂಸ್ಥೆಗಳು ನಡೆಸಿದ ಶಾಂತಿಯುತ ಮತಪ್ರದರ್ಶನಗಳನ್ನು ಪೋಲಿಸರು ತಡೆದಿದ್ದಾರೆ ಹಾಗೂ ಬಂಧಿಸಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಅದರದ್ದೇ ಆದ ವಿದೇಶಾಂಗ ನೀತಿ ಇದೆಯೇ ಎಂಬ ಅನುಮಾನ ಬರುತ್ತಿದೆ ಎಂದು ಪ್ರೊ.ರಾಜೇಂದ್ರ ಚೆನ್ನಿ, ಕೆ.ಎಸ್.ವಿಮಲಾ, ಬಿ.ಶ್ರೀಪಾದ ಭಟ್, ಟಿ.ಸುರೇಂದ್ರ ರಾವ್, ಬಂಜಗೆರೆ ಜಯಪ್ರಕಾಶ್, ಮೀನಾಕ್ಷಿ ಬಾಳಿ, ಎನ್.ಗಾಯತ್ರಿ, ವಸುಂಧರಾ ಭೂಪತಿ, ಕೆ.ಷರೀಫಾ, ಸಿ.ಕೆ.ಗುಂಡಣ್ಣ ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ.

ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬೆಂಗಳೂರು ಮಾತ್ರವಲ್ಲ. ರಾಜ್ಯದ ಬೇರೆ ಎಲ್ಲೂ ಅನುಮತಿ ನೀಡುತ್ತಿಲ್ಲ.
ಬಿ.ದಯಾನಂದ್‌, ನಗರ ಪೊಲೀಸ್‌ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT