ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಭೂಮಿ ರಕ್ಷಣೆಗಾಗಿ ಹುತಾತ್ಮನಾಗಲೂ ಸಿದ್ಧ–ಡಿಸಿಎಫ್‌‌ ಏಡುಕೊಂಡಲು

Published 11 ಸೆಪ್ಟೆಂಬರ್ 2023, 16:32 IST
Last Updated 11 ಸೆಪ್ಟೆಂಬರ್ 2023, 16:32 IST
ಅಕ್ಷರ ಗಾತ್ರ

ಕೋಲಾರ: ‘ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ ಜಮೀನು ಒತ್ತುವರಿ ಮಾಡಿಕೊಂಡವರು ರೈತರಲ್ಲ; ಬದಲಾಗಿ ಭೂಮಾಫಿಯಾದವರು. ಅಮಾಯಕ ರೈತರ ಸೋಗಿನಲ್ಲಿ ಭೂಗಳ್ಳತನ ಮಾಡಿಕೊಂಡು ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ’ ಎಂದು ಕೋಲಾರ ಜಿಲ್ಲೆಯ ಉಪ ಅರಣ್ಯ ಸಂರಕ್ಷಾಧಿಕಾರಿ (ಡಿಸಿಎಫ್‌) ವಿ.ಏಡುಕೊಂಡಲು ತಿಳಿಸಿದರು.

ನಗರದ ಹೊರವಲಯದ ಅರಣ್ಯ ಇಲಾಖೆ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಾನೂನು ಬದ್ಧವಾಗಿ ಕೆಲಸ ಮಾಡಲು ಯಾವುದೇ ಒತ್ತಡ, ಬೆದರಿಕೆಗೆ ಬಗ್ಗಲ್ಲ. ಒಂದು ಇಂಚು ಅರಣ್ಯ ಜಮೀನಿನ ಒತ್ತುವರಿ ಆಗಿದ್ದರೂ ಸಹಿಸಲ್ಲ. ಅರಣ್ಯ ಭೂಮಿ ರಕ್ಷಣೆಗಾಗಿ ಹುತಾತ್ಮನಾಗಲೂ ಸಿದ್ಧ. ಮುಂದೆ ಅರಣ್ಯ ಹುತಾತ್ಮರ ದಿನದಂದು ನನ್ನ ಭಾವಚಿತ್ರವನ್ನೂ ಇಟ್ಟು ಜನ ಪೂಜೆ ಮಾಡುತ್ತಾರೆ. ಅದು ಕೂಡ ಹೆಮ್ಮೆಯ ವಿಚಾರ’ ಎಂದರು.

‘ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಲ್ಲಂಪಲ್ಲಿ, ದಳಸನೂರು ಹಾಗೂ ಶ್ರೀನಿವಾಸಪುರಕ್ಕೆ ಸೇರಿದ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಲಾಗಿದ್ದ ಜಾಗವನ್ನು ಕಾನೂನು ವ್ಯಾಪ್ತಿಯಲ್ಲಿ, ಅರಣ್ಯ ಇಲಾಖೆ ಕಾಯ್ದೆ ಪ್ರಕಾರ, ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪಿನ ಅನುಸಾರವೇ ಶೇ 100ರಷ್ಟು ತೆರವುಗೊಳಿಸಲಾಗುತ್ತಿದೆ. ಒತ್ತುವರಿದಾರರಿಗೆ ಸಮಯಾವಕಾಶ ನೀಡಿ, ಒತ್ತುವರಿ ಆಗಿದೆ ಎಂಬುದು ಖಚಿತವಾದ ಮೇಲೆಯೇ ಪೊಲೀಸ್ ಇಲಾಖೆ, ಕಂದಾಯ ಇಲಾಖೆಯ ಸಹಕಾರದೊಂದಿಗೆ ತೆರವು ಮಾಡಿಸಿ ಸಾರ್ವಜನಿಕರ ಸಂಪತ್ತುನ್ನು ಭೂ ಮಾಫಿಯಾದಿಂದ ಸ್ವಾಧೀನಪಡಿಸಿಕೊಳ್ಳುತ್ತಿದ್ದೇವೆ' ಎಂದು ಸ್ಪಷ್ಟಪಡಿಸಿದರು.

'ಒತ್ತುವರಿದಾರರು ಯಾರು, ಭೂಗಳ್ಳರು ಯಾರು, ಯಾವ ರೀತಿ ಕಡತ ಸೃಷ್ಟಿ ಮಾಡಿಕೊಂಡಿದ್ದಾರೆ, ಇವರ ಕಾರ್ಯಾಚರಣೆಗಳು ಏನೇನು ಎಂಬುದು ಎಲ್ಲರಿಗೂ ಗೊತ್ತಿದೆ. ರೈತರ ಹೆಸರಿನಲ್ಲಿ ಭೂಮಾಫಿಯಾದ ದಂಧೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಬಹುದಿನದ ಅರಣ್ಯ ಇಲಾಖೆಯ ಕನಸಾಗಿತ್ತು' ಎಂದರು.

‘ಮೀಸಲು ಅರಣ್ಯ ಎಂದಾದ ಮೇಲೆ ಯಾವುದೇ ಕಂದಾಯ ದಾಖಲೆ ಸೃಷ್ಟಿಸಿದರೂ ಪ್ರಯೋಜನವಿಲ್ಲ. ಒತ್ತುವರಿ ಮಾಡಿಕೊಂಡರೂ ಅದು ನಿಲ್ಲಲ್ಲ. ಈ ಸಂಬಂಧ‌ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ’ ಎಂದು ಹೇಳಿದರು.

‘ಶ್ರೀನಿವಾಸಪುರ ತಾಲ್ಲೂಕಿನಲ್ಲಿ 15 ದಿನಗಳಿಂದ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಗೆ ಸೇರಿದ 1,035 ಎಕರೆ ಭೂಮಿಯನ್ನು ಒತ್ತುವರಿ ತೆರವು ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT