ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರ್ತಿ ಕೈತಪ್ಪಿದ ‘ಇ–ವಿಧಾನ’!

Last Updated 23 ಆಗಸ್ಟ್ 2018, 19:39 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಕಾರ್ಯದರ್ಶಿ ಎಸ್‌.ಮೂರ್ತಿ ಅವರ ಅಧಿಕಾರಕ್ಕೆ ವಿಧಾನಸಭಾ ಅಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಮತ್ತೆ ಕತ್ತರಿ ಪ್ರಯೋಗ ಮಾಡಿದ್ದಾರೆ. ‘ಇ–ವಿಧಾನ’ ಯೋಜನೆ ಅನುಷ್ಠಾನದ ಉಸ್ತುವಾರಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ವಹಿಸಿದ್ದಾರೆ.

ರಾಜ್ಯಗಳ ವಿಧಾನಮಂಡಲಗಳನ್ನು ಡಿಜಿಟಲೀಕರಣ ಮಾಡುವ ಈ ಯೋಜನೆಗೆ ಶೇ 100ರಷ್ಟು ಅನುದಾನ ನೀಡುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ ಪ್ರಕಟಿಸಿತ್ತು. ಎಂಟು ರಾಜ್ಯಗಳು ಪ್ರಸ್ತಾವ ಸಲ್ಲಿಸಿದ್ದವು. ವಿಧಾನಮಂಡಲದ ಉಭಯ ಸದನಗಳು ಹಾಗೂ ಬೆಳಗಾವಿಯ ಸುವರ್ಣ ಸೌಧವನ್ನು ಕಾಗದರಹಿತ ಮಾಡಲು ₹68ಕೋಟಿ ಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು. ಸಚಿವಾಲಯದ ಮೂಲಕವೇ ಯೋಜನೆ ಅನುಷ್ಠಾನ ಮಾಡಲು ಉದ್ದೇಶಿಸಲಾಗಿತ್ತು.

ರಮೇಶ್‌ ಕುಮಾರ್ ಅವರು ಸಭಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೂರ್ತಿ ಅವರ ಅಧಿಕಾರಗಳಿಗೆ ಕತ್ತರಿ ಹಾಕಲಾರಂಭಿಸಿದರು. ₹1 ಲಕ್ಷಕ್ಕಿಂತ ಹೆಚ್ಚಿನ ಕಾಮಗಾರಿಗೆ ಅನುಮೋದನೆ ನೀಡುವ ಅಧಿಕಾರ ಕಾರ್ಯದರ್ಶಿಗೆ ಇಲ್ಲ ಎಂದೂ ಆದೇಶ ಹೊರಡಿಸಿದ್ದರು. ಮೂರ್ತಿ ವಿರುದ್ಧ ಎಸಿಬಿಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು.

ಇ–ವಿಧಾನ ಯೋಜನೆ ಅನುಷ್ಠಾನ ಸಂಬಂಧ ವಿಜಯಭಾಸ್ಕರ್‌ ಅವರು ಇತ್ತೀಚೆಗೆ ಸಭೆ ನಡೆಸಿದ್ದರು. ಎರಡನೇ ಸಭೆ ಇದೇ 24ರಂದು ಸಂಜೆ 4.30ಕ್ಕೆ ವಿಧಾನಸೌಧದಲ್ಲಿ ನಡೆಯಲಿದೆ.

‘ಈ ಯೋಜನೆಗೆ ಶೇ 100ರಷ್ಟು ಅನುದಾನ ನೀಡುವುದಾಗಿ ಕೇಂದ್ರ ಸಚಿವಾಲಯ ಭರವಸೆ ನೀಡಿತ್ತು. ಶೇ 60ರಷ್ಟು ಅನುದಾನ ನೀಡುವುದಾಗಿ ಈಗ ಹೇಳುತ್ತಿದೆ. ಈ ವಿಷಯದಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ಕೇಂದ್ರ ಸರ್ಕಾರಕ್ಕೆ ಮತ್ತೆ ಬರೆಯಲಿದ್ದೇವೆ. ಸಚಿವಾಲಯವನ್ನು ಒಂದು ವರ್ಷದಲ್ಲಿ ಡಿಜಿಟಲೀಕರಣ ಮಾಡಲು ಉದ್ದೇಶಿಸಲಾಗಿದೆ. ಶಾಸಕರಿಗೆ ಐದಾರು ತಿಂಗಳೊಳಗೆ ತರಬೇತಿ ನೀಡುತ್ತೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

*ಈ ಯೋಜನೆ ಅನುಷ್ಠಾನದಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ಉಳಿತಾಯವಾಗುತ್ತದೆ. ಯೋಜನೆ ಅನುಷ್ಠಾನಕ್ಕೆ ಅಗತ್ಯ ಸಹಕಾರ ನೀಡುತ್ತೇನೆ
–ಎಸ್‌.ಮೂರ್ತಿ, ವಿಧಾನಸಭೆಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT