ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್ಥಿಕ ಮುಗ್ಗಟ್ಟು | ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಅಸಾಧ್ಯ?

Published 4 ಜುಲೈ 2024, 20:05 IST
Last Updated 4 ಜುಲೈ 2024, 20:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕಾರಣ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಅಸಾಧ್ಯ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಸಚಿವ ಸಂಪುಟದ ಸದಸ್ಯರಿಗೆ ಗುರುವಾರ ಅಂಕಿ–ಅಂಶಗಳು ಮೂಲಕ ಮನವರಿಕೆ ಮಾಡಿದ್ದಾರೆ.

ಜಿಎಸ್‌ಟಿ ಸೇರಿ, ವಿವಿಧ ಮೂಲಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗುತ್ತಿಲ್ಲ ಮತ್ತು ‘ಗ್ಯಾರಂಟಿ’ ಯೋಜನೆಗಳಿಗೆ ಹೆಚ್ಚಿನ ಹಣ ಹರಿದು ಹೋಗುತ್ತಿದೆ. ಹೀಗಾಗಿ ವೇತನ ಪರಿಷ್ಕರಣೆ ಸದ್ಯದ ಮಟ್ಟಿಗೆ ಸಾಧ್ಯವಾಗದು ಎಂಬುದಾಗಿ ಅಧಿಕಾರಿಗಳು ಸಭೆಗೆ ಪಿಪಿಟಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ವೇತನ ಪರಿಷ್ಕರಣೆ ಮಾತ್ರವಲ್ಲದೇ, ಹೊಸ ಪಿಂಚಣಿ ಯೋಜನೆಯಲ್ಲಿ ಇರುವವರನ್ನು ಹಳೇ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತರಬೇಕು ಎನ್ನುವ ಬೇಡಿಕೆಯನ್ನು ಸಹ ಈಡೇರಿಸಲು ಸಾಧ್ಯವಾಗದು. ಇವೆಲ್ಲ ಬೇಡಿಕೆ ಈಡೇರಿಸಿದರೆ ಪ್ರತಿ ತಿಂಗಳು ವಿವಿಧ ಬಾಬ್ತುಗಳಿಗೆ ಹಣವನ್ನು ಹೊಂದಿಸಲು ಕ‌ಷ್ಟ ಆಗಬಹುದು. ಅಂತಿಮವಾಗಿ ಈ ಬಗ್ಗೆ ನೀವೇ ತೀರ್ಮಾನಿಸಬೇಕು’ ಎಂದು ಅಧಿಕಾರಿಗಳ ತಂಡ ಸಂಪುಟ ಸದಸ್ಯರಿಗೆ ವಿವರಿಸಿದೆ.

ಆಗ ಆರ್ಥಿಕ ಇಲಾಖೆ ಮುಖ್ಯಸ್ಥರು ಮಧ್ಯಪ್ರವೇಶಿಸಿ, ‘ಹಣದ ಕೊರತೆ ಇದೆ ಎಂದಮಾತ್ರಕ್ಕೆ ವೇತನ ಪರಿಷ್ಕರಣೆ ಮಾಡದೇ ಇರಲು ಸಾಧ್ಯವಿಲ್ಲ. ತಕ್ಷಣಕ್ಕೆ ಆಗದೇ ಇದ್ದರೂ ಮುಂದೆ ಮಾಡಲೇಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ವೇತನ ಪರಿಷ್ಕರಣೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರದ ಮೇಲೆ ಒತ್ತಡ ಹೇರಿದ್ದು, ಜಾರಿ ಮಾಡದೇ ಇದ್ದರೆ, ಪ್ರತಿಭಟನೆ ಹಾದಿ ಹಿಡಿಯವುದಾಗಿ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ವೇತನ ಪರಿಷ್ಕರಣೆಯ ಸಾಧಕ– ಬಾಧಕಗಳ ಬಗ್ಗೆ ಮಾಹಿತಿ ಪಡೆಯಲು ಹಣಕಾಸು ಇಲಾಖೆ ಅಧಿಕಾರಿಗಳನ್ನು ಕರೆಸಿಕೊಂಡಿದ್ದರು ಎಂದು ಮೂಲಗಳು ಹೇಳಿವೆ.

ಈ ಸಂದರ್ಭದಲ್ಲಿ ಯಾವುದೇ ಸಚಿವರು ವೇತನ ಪರಿಷ್ಕರಣೆ ಮಾಡಲೇಬೇಕು ಎಂದು ಪಟ್ಟು ಹಿಡಿಯಲಿಲ್ಲ. ಈ ಕುರಿತು ಮುಖ್ಯಮಂತ್ರಿಯವರೇ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿ ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.

ಶೇ 27.50ರಷ್ಟು ಫಿಟ್‌ಮೆಂಟ್‌ಗೆ ಶಿಫಾರಸು

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿದ್ದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ. ಸುಧಾಕರ್‌ ರಾವ್ ನೇತೃತ್ವದ ಆಯೋಗ 244 ಪುಟಗಳ ವರದಿಯನ್ನು ಮಾರ್ಚ್‌ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು.

ಏಳನೇ ವೇತನ ಆಯೋಗವು ಶೇ 31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಜತೆಗೆ, ಶೇ 27.50ರಷ್ಟು ಫಿಟ್‌ಮೆಂಟ್ ನೀಡುವಂತೆ ಶಿಫಾರಸು ಮಾಡಿತ್ತು. ಶಿಫಾರಸು ಮಾಡಿದ ದಿನದಿಂದಲೇ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಆರಂಭವಾದ ಕಾರಣ ಶಿಫಾರಸು ಜಾರಿ ಸಾಧ್ಯವಾಗಿರಲಿಲ್ಲ. ಈಗ ನೀತಿ ಸಂಹಿತೆ ಮುಗಿದು ತಿಂಗಳು ಕಳೆದರೂ ಕ್ರಮ ಕೈಗೊಂಡಿಲ್ಲ ಎನ್ನುವುದು ನೌಕರರ ಆರೋಪ.

ವೇತನ ಆಯೋಗದ ಶಿಫಾರಸುಗಳ ಜಾರಿಯ ಜೊತೆಗೆ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಹೊಸ ಪಿಂಚಣಿ ಯೋಜನೆ ರದ್ದು ಮಾಡಬೇಕು. ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು. ನೌಕರರಿಗೆ ನಗದುರಹಿತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಸಂಜೀವಿನಿ ಯೋಜನೆ ತಕ್ಷಣ ಜಾರಿಗೊಳಿಸಬೇಕು. ಕರ್ನಾಟಕ ಆಡಳಿತ ಸೇವೆ ಸೇರಿದಂತೆ ಎಲ್ಲ ವೃಂದದ ಅಧಿಕಾರಿಗಳು, ನೌಕರರ ವರ್ಗಾವಣೆಗಳನ್ನು ಕೌನ್ಸೆಲಿಂಗ್‌ ಮೂಲಕ ಮಾಡಬೇಕು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.58 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ಬೇಡಿಕೆ ಇಟ್ಟುಕೊಂಡು ಮುಷ್ಕರ ಆರಂಭಿಸಲಾಗುತ್ತಿದೆ.

ಸರ್ಕಾರ 7ನೇ ವೇತನ ಆಯೋಗ ರಚಿಸಿದ್ದರೂ, ವೇತನ ಪರಿಷ್ಕರಣೆಗೆ ಅಗತ್ಯವಾದ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿಲ್ಲ ಎಂದು 2023ರ ಮಾರ್ಚ್‌ 1ರಂದು ನೌಕರರು ಅಂದಿನ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಮುಷ್ಕರ ಆರಂಭಿಸಿದ್ದರು. ಸರ್ಕಾರ ಶೇ 17ರಷ್ಟು ಮಧ್ಯಂತರ ಪರಿಹಾರ ಘೋಷಿಸಿತ್ತು. ಹಾಗಾಗಿ, ಒಂದೇ ದಿನದಲ್ಲಿ ಮುಷ್ಕರ ಅಂತ್ಯಗೊಂಡಿತ್ತು.

29ರಿಂದ ಸರ್ಕಾರಿ ನೌಕರರ ಮುಷ್ಕರ?

ವೇತನ ಪರಿಷ್ಕರಣೆಗೆ ರಚಿಸಲಾಗಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡದ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರು ಇದೇ ಜುಲೈ 29ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ನಿರ್ಧರಿಸಿದ್ದಾರೆ.

ಆಯೋಗ ವರದಿ ನೀಡಿ ನಾಲ್ಕು ತಿಂಗಳಾಗುತ್ತಾ ಬಂದರೂ ಆಯೋಗದ ಶಿಫಾರಸುಗಳ ಜಾರಿಗೆ ಸರ್ಕಾರ ಮೀನಮೇಷ ಎಣಿಸುತ್ತಾ ಬಂದಿದೆ. ರಾಜ್ಯದ ಎಲ್ಲ ವೃಂದದ, ಎಲ್ಲ ಇಲಾಖೆಗಳ ನೌಕರರು ಬೇಸರ ವ್ಯಕ್ತಪಡಿಸಿದ್ದು, ಹೋರಾಟ ಆರಂಭಿಸುವಂತೆ ಒಕ್ಕೊರಲಿನ ಒತ್ತಡ ಹಾಕುತ್ತಿದ್ದಾರೆ. ಜುಲೈ 7ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಣಿಯಲ್ಲಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಮುಷ್ಕರದ ದಿನಾಂಕ ಘೋಷಣೆ ಮಾಡಲಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT