ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಸಿದ್ದರಾಮಯ್ಯ

Published : 23 ಸೆಪ್ಟೆಂಬರ್ 2024, 15:49 IST
Last Updated : 23 ಸೆಪ್ಟೆಂಬರ್ 2024, 15:49 IST
ಫಾಲೋ ಮಾಡಿ
Comments

ಬೆಂಗಳೂರು: ‘ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯ ಕಾಮಗಾರಿಗಳನ್ನು ತಿಂಗಳ ಒಳಗೆ ಪೂರ್ಣಗೊಳಿಸಬೇಕು’ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಾಧಿಕಾರದ ನಾಲ್ಕನೇ ಸಭೆಯನ್ನು ಸೋಮವಾರ ನಡೆಸಿದ ಮುಖ್ಯಮಂತ್ರಿ, ‘ಈ ಶಾಲೆಯ ಕಾಮಗಾರಿಗೆ ಹೆಚ್ಚುವರಿಯಾಗಿ ವೆಚ್ಚ ಮಾಡಿರುವ ₹30 ಕೋಟಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಪರಿಶೀಲಿಸಿ ವರದಿ ಸಲ್ಲಿಸಬೇಕು’ ಎಂದೂ ತಿಳಿಸಿದರು.

ಸೈನಿಕ ಶಾಲೆಯ ಕಾಮಗಾರಿಗಳ ಅನುಷ್ಠಾನಕ್ಕೆ ₹ 179.30 ಕೋಟಿ ಮೊತ್ತದ ಟೆಂಡರ್‌ಗೆ ಸಚಿವ ಸಂಪುಟ ಸಭೆ ಈ ಹಿಂದೆಯೇ ಅನುಮೋದನೆ ನೀಡಿತ್ತು. ಪ್ರಾಧಿಕಾರದ 2024-25ನೇ ಸಾಲಿನ ₹15.48 ಕೋಟಿ ಮೊತ್ತದ ಕ್ರಿಯಾಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಈ ಶಾಲೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ 67 ಮತ್ತು ಹೊರರಾಜ್ಯದ ವಿದ್ಯಾರ್ಥಿಗಳಿಗೆ ಶೇ 33ರಷ್ಟು ಪ್ರವೇಶಾತಿ ನಿಗದಿಪಡಿಸುವ ಕುರಿತು ಕೇಂದ್ರ ರಕ್ಷಣಾ ಸಚಿವರಿಗೆ ಪ್ರಸ್ತಾವ ಸಲ್ಲಿಸಬೇಕು. ಕಾಯಂ ಶಿಕ್ಷಕರ ನೇಮಕಾತಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.

ಪ್ರಾಧಿಕಾರದಿಂದ ಸಂಗೊಳ್ಳಿ ರಾಯಣ್ಣ ಸ್ಮಾರಕಗಳ ಅಭಿವೃದ್ಧಿ ಮತ್ತು ಸೌಲಭ್ಯ ಕಲ್ಪಿಸಲು ನೀಲ ನಕ್ಷೆ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿಗೆ ಸೂಚನೆ ನೀಡಿದ ಮುಖ್ಯಮಂತ್ರಿ, ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಈ ಕುರಿತು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಖಾನಾಪುರ ತಾಲ್ಲೂಕಿನ ನಂದಗಢ ಗ್ರಾಮದಲ್ಲಿ ₹75.29 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಕಾಮಗಾರಿಯನ್ನು ನವೆಂಬರ್‌ ಎರಡನೇ ವಾರದ ಒಳಗೆ ಪೂರ್ಣಗೊಳಿಸಬೇಕು. ನಂದಗಢದಲ್ಲಿ ಕೆರೆ ಅಭಿವೃದ್ಧಿ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯ ಕಾಮಗಾರಿಗಳನ್ನೂ ಇದೇ ಗಡುವಿನ ಒಳಗೆ ಪೂರ್ಣಗೊಳಿಸಬೇಕು. ಮ್ಯೂಸಿಯಂಗೆ ಕಾಂಪೌಂಡ್‌ ನಿರ್ಮಾಣಕ್ಕೆ ಅಗತ್ಯವಾದ ಅಂದಾಜು ಪಟ್ಟಿ ಸಲ್ಲಿಸಬೇಕು. ಸಂಗೊಳ್ಳಿ ರಾಯಣ್ಣ ಶೌರ್ಯಭೂಮಿ ವೀಕ್ಷಿಸಲು ಬರುವ ಪ್ರವಾಸಿ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಸಲಹಾ ಸಮಿತಿ ರಚಿಸಲು ಕೂಡಾ ಪ್ರಸ್ತಾವ ಸಲ್ಲಿಸಬೇಕು ಎಂದೂ ಸೂಚನೆ ನೀಡಿದರು.

ಸಚಿವರಾದ ಶಿವರಾಜ ತಂಗಡಗಿ, ಬೈರತಿ ಸುರೇಶ್‌, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT