ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಬಂದರೆ ಮಟ್ಟಹಾಕಿ: ಸಂತೋಷ ಹೆಗ್ಡೆ

Last Updated 16 ಅಕ್ಟೋಬರ್ 2022, 21:20 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡಕ್ಕಿರುವ ಗೌರವವನ್ನು ದುರ್ಬಳಕೆ ಮಾಡಿಕೊಂಡು ಕೆಲವರು ಲಾಭ ಪಡೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಬೇಸರ ವ್ಯಕ್ತಪಡಿಸಿದರು.

ಕನ್ನಡ ಜನಶಕ್ತಿ ಕೇಂದ್ರದಿಂದ ಭಾನುವಾರ ನಡೆದ ‘ಕನ್ನಡವೆಂದರೆ ಬರಿ ನುಡಿಯಲ್ಲ’ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಕನ್ನಡವನ್ನು ಸಂವಿಧಾನ ಗೌರವಿಸಿ ಮಾನ್ಯತೆ ನೀಡಿದೆ. ಕರ್ನಾಟಕ ಹಾಗೂ ಕನ್ನಡಕ್ಕೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಂಬ ಭೇದಭಾವ ಇಲ್ಲ. ಕನ್ನಡಿಗರಲ್ಲಿ ಹರಿಯುವ ರಕ್ತ ಒಂದೇ. ಆದರೆ, ಕೆಲವರು ಪ್ರಾದೇಶಿಕ ಭಿನ್ನತೆ ವ್ಯಕ್ತಪಡಿಸುತ್ತಿದ್ಧಾರೆ’ ಎಂದು ಹೇಳಿದರು.

‘ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಬಂದರೆ ಆರಂಭದಲ್ಲಿಯೇ ಮಟ್ಟಹಾಕಬೇಕು’ ಎಂದು ಸಲಹೆ ನೀಡಿದರು. ‘ಕನ್ನಡದ ಪಂಡಿತ ನಾನು ಅಲ್ಲ. ಆದರೆ, ನಾನು ಕನ್ನಡದ ಅಪ್ಪಟ ಅಭಿಮಾನಿ’ ಎಂದೂ ಸಂತೋಷ ಹೆಗ್ಡೆ ನುಡಿದರು.

‘1956ರಲ್ಲಿ ಭಾಷಾವಾರು ಪ್ರಾಂತ್ಯಗಳ ಆಧರಿಸಿ ರಾಜ್ಯಗಳ ವಿಂಗಡನೆ ಮಾಡಲಾಯಿತು. ಅದಕ್ಕೆ ಸಂವಿಧಾನದ ಸಮ್ಮತಿ ಸಿಕ್ಕಿತು. ಎರಡು ದಿನದ ಜನಶಕ್ತಿ ಕಾರ್ಯಕ್ರಮದಲ್ಲಿ ಕನ್ನಡದ ಬಗ್ಗೆ ಚರ್ಚಿಸಲಾಗಿದೆ. ಪಂಡಿತರು ಪರಿಹಾರ ಹುಡುಕಿದ್ದಾರೆ. ಅವುಗಳ ಅನುಷ್ಠಾನಕ್ಕೆ ತರಬೇಕು’ ಎಂದರು.

‘ಕನ್ನಡವನ್ನು ನಮ್ಮ ರಾಜ್ಯ ಭಾಷೆಯಾಗಿ ಬಳಸಿಕೊಳ್ಳೋಣ. ಕನ್ನಡಕ್ಕೆ ಕರ್ನಾಟಕದಲ್ಲಿ ಪ್ರಾಮುಖ್ಯತೆ ನೀಡಬೇಕು’ ಎಂದು ನುಡಿದರು.

ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಅಧ್ಯಕ್ಷ ಎ.ಎಚ್‌.ರಾಮರಾವ್‌, ಕಾರ್ಯದರ್ಶಿ ನಾಗರಾಜ ರೆಡ್ಡಿ, ವೇದಿಕೆ ಅಧ್ಯಕ್ಷ ಸಿ.ಕೆ.ರಾಮೇಗೌಡ, ಪಿ.ಮಲ್ಲಿಕಾರ್ಜುನಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT