ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದ್ವಿತೀಯ ಪಿಯು ಪರೀಕ್ಷೆ–2 ಫಲಿತಾಂಶ ಪ್ರಕಟ: ಶೇ 35.25 ವಿದ್ಯಾರ್ಥಿಗಳು ಪಾಸ್

ದ್ವಿತೀಯ ಪಿಯು ಪರೀಕ್ಷೆ–2 ಬರೆದಿದ್ದ 1.48 ಲಕ್ಷ ವಿದ್ಯಾರ್ಥಿಗಳಲ್ಲಿ 52,505 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟಾರೆ ಶೇ 35.25 ಫಲಿತಾಂಶ ಲಭಿಸಿದೆ.
Published 21 ಮೇ 2024, 13:06 IST
Last Updated 21 ಮೇ 2024, 13:06 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ–2 ಬರೆದಿದ್ದ 1.48 ಲಕ್ಷ ವಿದ್ಯಾರ್ಥಿಗಳಲ್ಲಿ 52,505 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟಾರೆ ಶೇ 35.25 ಫಲಿತಾಂಶ ಲಭಿಸಿದೆ.

ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಹಾಗೂ ಕಡಿಮೆ ಫಲಿತಾಂಶದ ಕಾರಣಕ್ಕಾಗಿ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು 1.49 ಲಕ್ಷ ವಿದ್ಯಾರ್ಥಿಗಳು ಎರಡನೇ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಪರೀಕ್ಷೆ ಬರೆದವರಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ (ಶೇ 56.16) ತೇರ್ಗಡೆಯಾಗಿದ್ದಾರೆ. ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳು ಕ್ರಮವಾಗಿ ಶೇ 22.06 ಹಾಗೂ ಶೇ 22.24 ತೇರ್ಗಡೆಯಾಗಿದ್ದಾರೆ.

ಮೊದಲ ಪರೀಕ್ಷೆಯಲ್ಲಿ ಕನ್ನಡದಲ್ಲಿ 24 ಅಂಕ ಪಡೆದಿದ್ದ ಬೆಂಗಳೂರಿನ ವಿದ್ಯಾಶ್ರೀಗೆ ಈ ಬಾರಿ 75 ಅಂಕಗಳು ಬಂದಿವೆ. ಒಟ್ಟಾರೆ 51 ಹೆಚ್ಚುವರಿ ಅಂಕಗಳನ್ನು ಪಡೆದಿದ್ದಾರೆ. ಇಂಗ್ಲಿಷ್‌ ಭಾಷಾ ವಿಷಯದಲ್ಲಿ ಚಿಕ್ಕಬಳ್ಳಾಪುರದ ಎಂ.ಎಸ್‌. ಗೀತಾ 63 ಅಂಕ (ಹೆಚ್ಚುವರಿ 37), ಇತಿಹಾಸದಲ್ಲಿ ಕಲಬುರಗಿಯ ಸಚಿನ್‌ 78 ಅಂಕ (ಹೆಚ್ಚುವರಿ 46) ಪಡೆದಿದ್ದಾರೆ. ವಿಜ್ಞಾನ ವಿಷಯಗಳಲ್ಲಿ ಹಲವು ವಿದ್ಯಾರ್ಥಿಗಳು 35ರಿಂದ 45ರವರೆಗೆ ಹೆಚ್ಚುವರಿ ಅಂಕಗಳನ್ನು ಪಡೆದಿದ್ದಾರೆ.

ಮರು ಮೌಲ್ಯಮಾಪನ: ಮೇ 25 ಕೊನೆ ದಿನ

ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮೇ 25 ಕೊನೆಯ ದಿನ. ಉತ್ತರ ಪತ್ರಿಕೆಗಳ ಛಾಯಾಪ್ರತಿ ಪಡೆಯಲು ಮೇ 21ರಿಂದ ಮೇ 23ರವರೆಗೆ ಅವಕಾಶ ಕಲ್ಪಿಸಲಾಗಿದೆ. 22ರಿಂದ 24ರ ಒಳಗೆ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಜೂನ್‌ 24ರಿಂದ ಪಿಯು ಪರೀಕ್ಷೆ–3

ಜೂನ್‌ 24ರಿಂದ ಜುಲೈ 5ರವರೆಗೆ ದ್ವಿತೀಯ ಪಿಯು ಮೂರನೇ ಪರೀಕ್ಷೆ ನಡೆಯಲಿದೆ. ಮೊದಲ ಹಾಗೂ ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಹಾಗೂ ಎರಡೂ ಪರೀಕ್ಷೆಗಳಲ್ಲಿ ಕಡಿಮೆ ಫಲಿತಾಂಶ ಪಡೆದವರು ಫಲಿತಾಂಶ ಉತ್ತಮಪಡಿಸಿಕೊಳ್ಳಲು ಮೂರನೇ ಪರೀಕ್ಷೆ ಬರೆಯಬಹುದು. ಶುಲ್ಕ ಪಾವತಿಸಲು ಮೇ 28 ಕೊನೆಯ ದಿನ.

ದ್ವಿತೀಯ ಪಿಯು ಪರೀಕ್ಷೆ–3 ವೇಳಾಪಟ್ಟಿ:

ಜೂನ್‌ 24–ಕನ್ನಡ, ಅರೇಬಿಕ್‌, 25–ಇಂಗ್ಲಿಷ್‌, 26–ಸಮಾಜ ಶಾಸ್ತ್ರ, ಜೀವ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಭೂಗರ್ಭ ಶಾಸ್ತ್ರ, 27–ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, 28–ಅರ್ಥಶಾಸ್ತ್ರ, ರಸಾಯನವಿಜ್ಞಾನ, 29–ಇತಿಹಾಸ, ಭೌತಶಾಸ್ತ್ರ, ಜುಲೈ 1–ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನ, 2–ಗಣಿತ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಶಿಕ್ಷಣಶಾಸ್ತ್ರ, 3–ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ, 4–ಹಿಂದಿ, 5–ತೆಲುಗು, ತಮಿಳು, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌, ಮಲೆಯಾಳಂ ಹಾಗೂ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೊಮೊಬೈಲ್‌,  ಹೆಲ್ತ್‌ಕೇರ್, ಬ್ಯೂಟಿ ಆ್ಯಂಡ್‌ ವೆಲ್‌ನೆಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT