ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಗಳ ಸರಮಾಲೆ; 39ಕ್ಕೂ ಹೆಚ್ಚು ಸಂಘಟನೆಗಳಿಂದ ಅರ್ಜಿ

ರೈತರ ಪ್ರತಿಭಟನೆ ಪುನರಾರಂಭ, ಕಣ್ಣೀರಿಟ್ಟ ರೈತ ಮಹಿಳೆ
Last Updated 8 ಡಿಸೆಂಬರ್ 2018, 16:39 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ವೇಳೆ ಸರ್ಕಾರದ ಗಮನ ಸೆಳೆಯಲು 39ಕ್ಕೂ ಹೆಚ್ಚು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ.

ಪ್ರಮುಖವಾಗಿ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ರಾಜ್ಯ ರೈತ ಸಂಘಟನೆ– ಹಸಿರು ಸೇನೆ, ಅಂಗನವಾಡಿ ಕಾರ್ಯಕರ್ತೆಯರ ಸಂಘ, ಆದಿವಾಸಿಗಳ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಗೆ ಅನುಮತಿ ಕೋರಿ ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಪತ್ರ ಬರೆದಿವೆ.

‘ಪ್ರತಿಭಟನೆ ನಡೆಸಲು ಅನುಮತಿ ಕೋರಿ ಇದುವರೆಗೆ 39 ಸಂಘಟನೆಗಳು ಅರ್ಜಿ ನೀಡಿವೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಸುವರ್ಣ ವಿಧಾನಸೌಧದ ಬಳಿಯಿರುವ ಕೊಂಡಸಕೊಪ್ಪ ಹಾಗೂ ಸುವರ್ಣ ಗಾರ್ಡನ್‌ ಬಳಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಪೆಂಡಾಲ್‌ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ಪೂರೈಕೆ ಮಾಡಲಾಗಿದೆ. ಬಂದೋಬಸ್ತ್‌ಗಾಗಿ 4,874 ಪೊಲೀಸ್‌ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಪ್ರತಿಭಟನೆ ಪುನರಾರಂಭ

ಕಬ್ಬಿನ ಬಾಕಿ ಬಿಲ್‌ ಕೊಡಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಕಬ್ಬು ಬೆಳೆಗಾರರ ಸಂಘ ಹಾಗೂ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ನೇತೃತ್ವದಲ್ಲಿ ರೈತರು ಪುನಃ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಕಬ್ಬು ಪೂರೈಸಿದ ರೈತರಿಗೆ ಕೋಟ್ಯಾಂತರ ರೂಪಾಯಿ ಬಾಕಿ ಹಣವನ್ನು ಸಕ್ಕರೆ ಕಾರ್ಖಾನೆಗಳು ನೀಡಬೇಕಾಗಿವೆ. ಸರ್ಕಾರ ಮಧ್ಯಪ್ರವೇಶಿಸಿ, ತಕ್ಷಣ ಬಾಕಿ ಹಣವನ್ನು ಕೊಡುವಂತೆ ಕಾರ್ಖಾನೆಗಳಿಗೆ ಆದೇಶ ನೀಡಬೇಕು. ಎಫ್‌ಆರ್‌ಪಿ ದರ ಹೊರತುಪಡಿಸಿ ಕಬ್ಬು ಕಟಾವು ಹಾಗೂ ಸಾಗಾಟದ ವೆಚ್ಚವನ್ನು ಕಾರ್ಖಾನೆಗಳೇ ಭರಿಸಬೇಕು ಎಂದು ಸಂಘಟನೆಯ ಅಧ್ಯಕ್ಷ ಸಿದಗೌಡ ಮೋದಗಿ ಒತ್ತಾಯಿಸಿದರು.

ಕಣ್ಣೀರಿಟ್ಟ ರೈತ ಮಹಿಳೆ:ಪ್ರತಿಭಟನೆಯಲ್ಲಿ ತೊಡಗಿರುವ ರೈತ ಮಹಿಳೆ ಜಯಶ್ರೀ ಗುರನ್ನವರ ಅವರಿಗೆ ಅನಾಮಧೇಯ ಪತ್ರವೊಂದು ಬಂದಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ.

‘ಬಿಜೆಪಿ ಏಜೆಂಟ್‌ ಆಗಿದ್ದೀಯಾ, ಹಣಕ್ಕಾಗಿ ಹೋರಾಟ ಮಾಡುತ್ತಿದ್ದೀಯಾ ಎಂದು ನಿಂದಿಸಿದ್ದಾರೆ’ ಎಂದು ಪತ್ರ ಓದಿದ ಜಯಶ್ರೀ ಕಣ್ಣೀರಿಟ್ಟರು.

‘ಈ ಪತ್ರವನ್ನು ನೋಡಿದರೆ ಜೆಡಿಎಸ್‌ ಪಕ್ಷದವರೇ ಬರೆದಿರುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಬೆಂಬಲಿಗರಿಗೆ, ಕಾರ್ಯಕರ್ತರಿಗೆ ತಿಳಿಹೇಳಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT