ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕಿರುಕುಳ ಪ್ರಕರಣ: ಪೊಲೀಸ್ ವಶಕ್ಕೆ ಹಾಸ್ಟೆಲ್‌ ವಾರ್ಡನ್‌

Last Updated 1 ಸೆಪ್ಟೆಂಬರ್ 2022, 19:54 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ಎರಡನೇ ಆರೋಪಿಯಾಗಿರುವ ಹಾಸ್ಟೆಲ್‌ ವಾರ್ಡನ್‌ ಅನ್ನು ತನಿಖಾ ತಂಡ ಗುರುವಾರ ವಶಕ್ಕೆ ಪಡೆದಿದೆ.

ಮುರುಘಾ ಮಠದ ಆಡಳಿತಾಧಿಕಾರಿ ಎಸ್‌.ಕೆ. ಬಸವರಾಜನ್‌ ವಿರುದ್ಧ ದಾಖಲಾಗಿರುವ ಪ್ರಕರಣದ ದೂರುದಾರರಾಗಿ ನ್ಯಾಯಾಲಯಕ್ಕೆ ಹಾಜರಾದ ಅವರು ಸಿಆರ್‌ಪಿಸಿ 164 ಸೆಕ್ಷನ್‌ ಅಡಿ ಹೇಳಿಕೆ ದಾಖಲಿಸಿದರು. ನ್ಯಾಯಾಲಯದ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತನಿಖಾ ತಂಡ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು.

‘ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ಡನ್‌ಅನ್ನು ತನಿಖಾಧಿಕಾರಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ಪೂರ್ಣಗೊಳ್ಳದ್ದರಿಂದ ಸಾಂತ್ವನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಅವರನ್ನು ಬಂಧಿಸುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಮ್‌ ತಿಳಿಸಿದ್ದಾರೆ.

ತಕರಾರು ಸಲ್ಲಿಕೆ ಇಂದು: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗೆ ತಕರಾರು ಸಲ್ಲಿಸಲು ಅವಕಾಶ ಕಲ್ಪಿಸಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿಚಾರಣೆಯನ್ನು ಸೆ.2ಕ್ಕೆ ಮುಂದೂಡಿತು.

ಮುರುಘಾಶ್ರೀ ಪರ ವಕೀಲರು ಆ.29ರಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶೆ ಬಿ.ಕೆ.ಕೋಮಲಾ ಗುರುವಾರ ಕೈಗೆತ್ತಿಕೊಂಡರು. ಕಲಾಪ ಆರಂಭ ಆಗುತ್ತಿದ್ದಂತೆಯೇ ಸಂತ್ರಸ್ತ ಬಾಲಕಿಯರನ್ನು ಕೋರ್ಟ್‌ಗೆ ಹಾಜರುಪಡಿಸಲಾಯಿತು. ಇತರ ಪ್ರಕರಣದಲ್ಲಿದ್ದ ವಕೀಲರನ್ನು ಹೊರ ಕಳುಹಿಸಿದ ನ್ಯಾಯಾಧೀಶರು, ಪ್ರಕರಣಕ್ಕೆ ಸಂಬಂಧಿಸಿದವರನ್ನು ಮಾತ್ರ ಉಳಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡರು.

ಸಂತ್ರಸ್ತೆಯರ ಪರವಾಗಿ ಹೈಕೋರ್ಟ್ ವಕೀಲ ಶ್ರೀನಿವಾಸ್ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವಕೀಲರು ಹಾಜರಾಗಿದ್ದರು. ಸಂತ್ರಸ್ತೆಯರು ಹಾಗೂ ಒಬ್ಬ ಪಾಲಕರ ಅಭಿಪ್ರಾಯ ಪರಿಗಣಿಸಿ ಶ್ರೀನಿವಾಸ್ ಅವರ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿತು. ಆಕ್ಷೇಪಣೆ ಸಲ್ಲಿಕೆಗೆ ಒಂದು ದಿನ ಕಾಲಾವಕಾಶ ನೀಡಿ ವಿಚಾರಣೆಯನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಬಸವರಾಜನ್‌ ದಂಪತಿಗೆ ಜಾಮೀನು
ಚಿತ್ರದುರ್ಗ:
ಇಲ್ಲಿನ ಮುರುಘಾ ಮಠದ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಹಾಗೂ ಪತ್ನಿ ಸೌಭಾಗ್ಯ ವಿರುದ್ಧ ದಾಖಲಾಗಿದ್ದ ಕಿರುಕುಳ, ಮಕ್ಕಳ ಅಪಹರಣ ಪ್ರಕರಣದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿತು.

ಮುರುಘಾ ಮಠದ ಹಾಸ್ಟೆಲ್‌ ವಾರ್ಡನ್‌ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಬಸವರಾಜನ್‌ ದಂಪತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶೆ ಅನಿತಾ ಕುಮಾರಿ ಅವರು ಗುರುವಾರ ಕೈಗೆತ್ತಿಕೊಂಡರು.

ವಾರ್ಡನ್‌ ಪರ ಹಾಜರಾದ ವಕೀಲರು ತಕರಾರು ಸಲ್ಲಿಸಿದರು. ನ್ಯಾಯಾಧೀಶರ ಸೂಚನೆಯ ಮೇರೆಗೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದರು.

ಆಡಳಿತಾಧಿಕಾರಿ ಹುದ್ದೆಯಿಂದ ವಜಾ
ಚಿತ್ರದುರ್ಗ:
ಷರತ್ತುಗಳನ್ನು ಉಲ್ಲಂಘಿಸಿ ಮಠ ಹಾಗೂ ಪೀಠಾಧಿಪತಿಯ ಘನತೆ, ಗೌರವಕ್ಕೆ ಧಕ್ಕೆ ತರಲು ಒಳಸಂಚು ರೂಪಿಸಿದ ಆರೋಪದ ಮೇರೆಗೆ ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ಅವರನ್ನು ಮುರುಘಾ ಮಠದ ಆಡಳಿತಾಧಿಕಾರಿ ಮತ್ತು ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ.

ಮಾರ್ಚ್‌ 7ರಂದು ಅವರು ಈ ಹುದ್ದೆಗೆ ನೇಮಕಗೊಂಡಿದ್ದರು. ಈ ವೇಳೆ ಬಸವರಾಜನ್‌ ಅವರಿಗೆ 8ಕ್ಕೂ ಹೆಚ್ಚು ಷರತ್ತುಗಳನ್ನು ವಿಧಿಸಲಾಗಿತ್ತು. 2007ರಲ್ಲಿಯೂ ಇವರನ್ನು ಇದೇ ಹುದ್ದೆಯಿಂದ ಕಿತ್ತುಹಾಕಲಾಗಿತ್ತು.

‘ಬಸವರಾಜನ್‌ ಅವರು ಆಡಳಿತಾತ್ಮಕವಾಗಿ ಸಹಕಾರ ನೀಡುತ್ತಿರಲಿಲ್ಲ. ಮಠದ ಪರವಾಗಿ ಖರೀದಿಸಿದ್ದ ಆಸ್ತಿಗಳನ್ನು ಹಿಂದಿರುಗಿಸದೇ ಸಮಸ್ಯೆ ಸೃಷ್ಟಿಸಿದರು. ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ವಿದೇಶ ಪ್ರವಾಸಲ್ಲಿದ್ದಾಗ ಮಠದ ವಿರೋಧಿ ಚಟುವಟಿಕೆಯಲ್ಲಿ ತೊಡಗಿದರು’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ನಿವೃತ್ತ ನ್ಯಾಯಾಧೀಶರೊಬ್ಬರನ್ನು ಎಸ್‌ಜೆಎಂ ವಿದ್ಯಾಪೀಠದ ನೂತನ ಕಾರ್ಯದರ್ಶಿಯಾಗಿ ನೇಮಕ ಮಾಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಬಗ್ಗೆ ಮಠ ಅಧಿಕೃತ ಮಾಹಿತಿ ನೀಡಿಲ್ಲ.

ಅಧಿಕಾರಿಗೆ ನೋಟಿಸ್‌
ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಇರುವ ರಾಷ್ಟ್ರೀಯ ಆಯೋಗ ನೋಟಿಸ್‌ ಜಾರಿ ಮಾಡಿದೆ.

‘ಎಫ್‌ಐಆರ್‌ ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ತನಿಖೆಯಲ್ಲಿ ಸಂತ್ರಸ್ತರ ಗುರುತು ಬಹಿರಂಗ
ವಾಗದಂತೆ ಎಚ್ಚರವಹಿಸಬೇಕು. ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಏಳು ದಿನಗಳ ಒಳಗಾಗಿ ಸಲ್ಲಿಸಿ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಆಯೋಗ ಸೂಚಿಸಿದೆ. ‘ಇಂಥ ಯಾವುದೇ ನೋಟಿಸ್‌ ಈವರೆಗೆ ನಮಗೆ ತಲುಪಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಾರಿಗೆ ಮುತ್ತಿಗೆ
ಚಿತ್ರದುರ್ಗ:
ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಬಂಧನಕ್ಕೆ ಆಗ್ರಹಿಸಿ ಗುರುವಾರ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು, ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಪ್ರಯಾಣಿಸುತ್ತಿದ್ದ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕಚೇರಿಯಿಂದ ಮಧ್ಯಾಹ್ನ ಊಟಕ್ಕೆ ತೆರಳುತ್ತಿದ್ದ ಜಿಲ್ಲಾಧಿಕಾರಿ, ಪ್ರತಿಭಟನಕಾರರ ಮನವಿ ಸ್ವೀಕರಿಸಲು ಮುಂದಾದರು. ಮಾಧ್ಯಮ ಪ್ರತಿನಿಧಿಗಳು ಪ್ರಕರಣದ ಬಗ್ಗೆ ಪ್ರಶ್ನಿಸುತ್ತಿದ್ದಂತೆಯೇ ಕಾರಲ್ಲಿ ಕುಳಿತು ಹೊರಡಲು ಅಣಿಯಾದರು. ಇದರಿಂದ ಕುಪಿತಗೊಂಡ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಾರು ತಡೆದು ಘೋಷಣೆ ಕೂಗಿದರು. ಪ್ರತಿಭಟನಕಾರರ ಆಕ್ರೋಶಕ್ಕೆ ಮಣಿದ ಜಿಲ್ಲಾಧಿಕಾರಿ ಮತ್ತೆ ಕಾರು ಇಳಿದು ಮನವಿ ಸ್ವೀಕರಿಸಿದರು.

‘ಸಂತ್ರಸ್ತ ಮಕ್ಕಳ ರಕ್ಷಣೆ ಮಾಡಲಾಗಿದ್ದು, ಜಿಲ್ಲಾಡಳಿತದಿಂದ ಯಾವುದೇ ವೈಫಲ್ಯವಾಗಿಲ್ಲ. ಪ್ರಕರಣದ ತನಿಖೆ ಕಾನೂನು ಚೌಕಟ್ಟಿನಲ್ಲಿ ಸಾಗುತ್ತಿದೆ. ಆರೋಪಿಗಳ ಬಂಧನದ ಬಗ್ಗೆ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿ’ ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT