ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಧೀಶರ ಮುಂದೆ ಸಂತ್ರಸ್ತರ ಹೇಳಿಕೆ: ಮುರುಘಾ ಶರಣರ ಬೆನ್ನಿಗೆ ನಿಂತ ಮಠಾಧೀಶರು

Last Updated 30 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿರುವ ಸಂತ್ರಸ್ತ ಬಾಲಕಿಯರು ಅಪರಾಧ ಪ್ರಕ್ರಿಯೆ ಸಂಹಿತೆಯ (ಸಿಆರ್‌ಪಿಸಿ) ಕಲಂ 164ರ ಅಡಿ ಮಂಗಳವಾರ ಮಧ್ಯಾಹ್ನ ನ್ಯಾಯಾಧೀಶರ ಎದುರು ಹೇಳಿಕೆ ನೀಡಿದರು.

ತನಿಖಾ ತಂಡ ಮಧ್ಯಾಹ್ನ 2.10ಕ್ಕೆ ಬಾಲಕಿಯರ ಸರ್ಕಾರಿ ಬಾಲಭವನದಿಂದ ನ್ಯಾಯಾಲಯಕ್ಕೆ ಮಕ್ಕಳನ್ನು ಕರೆತಂದಿತು. 1ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಅನಿತಾ ಕುಮಾರಿ ಸಮ್ಮುಖದಲ್ಲಿ ಇಬ್ಬರು ಬಾಲಕಿಯರು ಪ್ರತ್ಯೇಕವಾಗಿ ಹೇಳಿಕೆ ನೀಡಿದರು.

ಇದನ್ನು ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಗಿದ್ದು, ಹೇಳಿಕೆಯನ್ನು ನ್ಯಾಯಾಧೀಶರು ಮುಚ್ಚಿದ ಲಕೋಟೆಯಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.ಇಬ್ಬರು ಬಾಲಕಿಯರ ಹೇಳಿಕೆ ದಾಖಲು ಪ್ರಕ್ರಿಯೆ ಸುಮಾರು ಐದು ಗಂಟೆ ನಡೆಯಿತು.

ಶರಣರಿಗೆ ಸ್ವಾಮೀಜಿಗಳ ಬೆಂಬಲ: ಮುರುಘಾ ಶರಣರಿಂದ ದೀಕ್ಷೆ ಪಡೆದ ದಲಿತ ಮತ್ತು ಹಿಂದುಳಿದ ಸಮುದಾಯದ ಮಠಾಧೀಶರು ಹಾಗೂ ಮುರುಘಾ ಪರಂಪರೆಯ ಶಾಖಾ ಮಠದ ಸ್ವಾಮೀಜಿಗಳು ಮಠದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಬೆಂಬಲದ ನಿರ್ಧಾರ ಪ್ರಕಟಿಸಿದರು. ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಸಾರ್ವಜನಿಕರು ಮಠಾಧೀಶರ ನಿಲುವನ್ನು ವಿರೋಧಿಸಿದರು.

ಮಠಾಧೀಶರ ಪ್ರತಿನಿಧಿಯಾಗಿ ಮಾತನಾಡಿದಕನಕಪುರ ಮರಳೆಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ,‘ಮುರುಘಾಶ್ರೀ ಆರೋಪ ಮುಕ್ತರಾಗಿ ಹೊರಬರಲಿದ್ದಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ಗಾಣಿಗ ಮಠದ ಬಸವಕುಮಾರ ಸ್ವಾಮೀಜಿ, ದಾವಣಗೆರೆ ಶಾಖಾ ಮಠದ ಬಸವಪ್ರಭು ಸ್ವಾಮೀಜಿ, ಉಳವಿ ಶಾಖಾಮಠದ ಶಿವಬಸವ ಸ್ವಾಮೀಜಿ, ಹೆಬ್ಬಾಳ ಮಠದ ಮಹಂತರುದ್ರ ಸ್ವಾಮೀಜಿ ಸೇರಿದಂತೆ 25ಕ್ಕೂ ಹೆಚ್ಚು ಮಠಾಧೀಶರು ಇದ್ದರು.

ಮೌನಕ್ಕೆ ಶರಣಾದ ಮಠಾಧೀಶರು: ‘ಸಂತ್ರಸ್ತ ಮಕ್ಕಳ ವಿಚಾರದಲ್ಲಿ ಮಠಾಧೀಶರ ನಿಲುವೇನು’ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದಕನಕಪುರ ಮರಳೆಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ‘ಮಕ್ಕಳು ದೇವರ ಸಮಾನ. ಅವರ ಬಗ್ಗೆ ನಮಗೆ ಕಾಳಜಿ ಇದೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಂಶ ಹೊರಬರಲಿದೆ’ ಎಂದು ಪತ್ರಿಕಾಗೋಷ್ಠಿ ಮುಕ್ತಾಯಗೊಳಿಸಲು ಮುಂದಾದರು.

‘ಅತ್ಯಾಚಾರದ ಆರೋಪ ಮಾಡಿದವರಲ್ಲಿ ದಲಿತ ಸಮುದಾಯದ ಮಕ್ಕಳಿದ್ದಾರೆ’ ಎಂಬ ಮತ್ತೊಂದು ಪ್ರಶ್ನೆಗೆ ಮಠಾಧೀಶರು ಮೌನಕ್ಕೆ ಶರಣರಾದರು.

ಸ್ಥಳದಲ್ಲಿದ್ದ ಸಾರ್ವಜನಿಕರು ಮಠಾಧೀಶರ ವಿರುದ್ಧ ಕಿಡಿಕಾರಿದರಲ್ಲದೆ, ಸ್ಪಷ್ಟ ಉತ್ತರ ನೀಡುವಂತೆ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕರ ಮಧ್ಯಪ್ರವೇಶಕ್ಕೆ ಪೊಲೀಸರು, ಪತ್ರಕರ್ತರು ಅವಕಾಶ ಮಾಡಿಕೊಡಲಿಲ್ಲ.

ಲಾಠಿ ಬೀಸಿದ ಪೊಲೀಸರು: ಸಂತ್ರಸ್ತ ಬಾಲಕಿಯರನ್ನು ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ಕರೆತರುತ್ತಿದ್ದಂತೆಯೇ ಸಾರ್ವಜನಿಕರು ಜಮಾಯಿಸಿದರು. ಆರೋಪಿ ಸ್ಥಾನದಲ್ಲಿರುವ ಮಠಾಧೀಶರನ್ನು ಬಂಧಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸುವ ಪ್ರಯತ್ನ ಮಾಡಿದರು. ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಭಕ್ತರ ಭೇಟಿ ಮಾಡಿದ ಶರಣರು: ಇಡೀ ದಿನ ಮಠದಲ್ಲೇ ಇದ್ದ ಮುರುಘಾ ಶರಣರು ಭಕ್ತರನ್ನು ಭೇಟಿ ಮಾಡಿದರು. ಬೆಳಿಗ್ಗೆ ವಾಯುವಿಹಾರ ಮುಗಿಸಿ, ದೈನಂದಿನ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT