ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕಿರುಕುಳ: ಮುರುಘಾ ಶ್ರೀ ಬಂಧನ, ಸಾರ್ವಜನಿಕ ಒತ್ತಡಕ್ಕೆ ಮಣಿದ ಪೊಲೀಸರು

Last Updated 1 ಸೆಪ್ಟೆಂಬರ್ 2022, 18:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಗಂಭೀರ ಆರೋಪ ಎದುರಿಸುತ್ತಿದ್ದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಸಾರ್ವಜನಿಕ ಒತ್ತಡಕ್ಕೆ ಮಣಿದ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಮೈಸೂರಿನಲ್ಲಿ ಪೋಕ್ಸೊ ಕಾಯ್ದೆಯಡಿ ಮಾತ್ರ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ವೇಳೆ ಸಂತ್ರಸ್ತ ಬಾಲಕಿಯರಲ್ಲಿ ಒಬ್ಬರು ದಲಿತ ಸಮುದಾಯಕ್ಕೆ ಸೇರಿದ್ದು ಖಚಿತವಾಗಿತ್ತು. ಹೀಗಾಗಿ, ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಈ ಪ್ರಕರಣ ದಾಖಲಾಗುತ್ತಿದ್ದಂತೆ ದಲಿತ ಸಂಘಟನೆಗಳು ಬೀದಿಗೆ ಇಳಿದವು. ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿ ಶಿವಮೂರ್ತಿ ಮುರುಘಾ ಶರಣರ ಬಂಧನಕ್ಕೆ ಆಗ್ರಹಿಸಿದ್ದವು. ದಿನ ಕಳೆದಂತೆ ಪ್ರಕರಣ ಕಾವು ಪಡೆಯಲಾರಂಭಿಸಿತು. ಪೊಲೀಸರು ಹಾಗೂ ಸರ್ಕಾರದ ಮೇಲೆ ಒತ್ತಡ ಸೃಷ್ಟಿಯಾಗಿತ್ತು. ಸೆ.2ರಂದು ರಾಜ್ಯದ ಎಲ್ಲೆಡೆ ಪ್ರತಿಭಟನೆ ನಡೆಸಲು ದಲಿತ ಸಂಘಟನೆಗಳು ಕರೆ ನೀಡಿದ್ದವು.

ಅಜ್ಞಾತ ಸ್ಥಳಕ್ಕೆ ತೆರಳಲು ವಿಫಲ ಯತ್ನ: ಪ್ರಕರಣ ದಾಖಲಾಗುತ್ತಿದ್ದಂತೆ ವಿಚಲಿತರಾದ ಶಿವಮೂರ್ತಿ ಮುರುಘಾ ಶರಣರು ಆರಂಭದ ಎರಡು ದಿನ ಮಠದಲ್ಲಿಯೇ ಇದ್ದು ಸರಣಿ ಸಭೆ ನಡೆಸಿದ್ದರು. ಆ.29ರಂದು ಅಜ್ಞಾತ ಸ್ಥಳಕ್ಕೆ ತೆರಳಲು ವಿಫಲ ಯತ್ನ ನಡೆಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಮಠದ ಭದ್ರತೆಯನ್ನು ಹೆಚ್ಚಿಸಿದ್ದರು.

ಆ.30ರಂದು ಮಠದ ಸುತ್ತ ಪೊಲೀಸ್‌ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಮಠದ ಎಲ್ಲ ದ್ವಾರಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಮಠ ಪ್ರವೇಶಿಸುವ ಹಾಗೂ ಹೊರಬರುವ ವಾಹನಗಳ ಮೇಲೆ ನಿಗಾ ಇಡಲಾಗಿತ್ತು. ಹಬ್ಬದ ದಿನ ಪೊಲಿಸ್‌ ಸರ್ಪಗಾವಲು ಹಾಕಲಾಯಿತು.

ಮಠದಲ್ಲೇ ದಿಗ್ಬಂಧನ: ಶಿವಮೂರ್ತಿ ಮುರುಘಾ ಶರಣರು ಕಳೆದ ಮೂರು ದಿನಗಳಿಂದ ಮಠದಲ್ಲಿಯೇ ಪೊಲೀಸ್‌ ದಿಗ್ಬಂಧನಕ್ಕೆ ಒಳಗಾಗಿದ್ದರು. ಆ.29ರಂದು ಮಠಕ್ಕೆ ಮರಳಿದ ಅವರನ್ನು ಭಕ್ತರು ಅದ್ಧೂರಿಯಾಗಿ ಸ್ವಾಗತಿಸಿಕೊಂಡಿದ್ದರು. ಆದರೆ, ಆನಂತರ ಅವರು ಮಠದ ಹೊರಗೆ ಹೋಗದಂತೆ ಪೊಲೀಸರು ನಿರ್ಬಂಧ ವಿಧಿಸಿದ್ದರು.

ಗಣೇಶ ಹಬ್ಬದ ದಿನವಾದ ಬುಧವಾರ ರಾತ್ರಿ ಪೊಲೀಸ್‌ ಭದ್ರತೆ ಇನ್ನಷ್ಟು ಬಿಗಿಗೊಂಡಿತು. ಮಠದ ಎಲ್ಲ ಪ್ರವೇಶ ದ್ವಾರ ಪೊಲೀಸರ ಕಣ್ಗಾವಲಿನಲ್ಲಿದ್ದವು. ಹಬ್ಬರ ರಾತ್ರಿಯೇ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇತ್ತು. ಇದಕ್ಕೆ ಸಾಕಷ್ಟು ಸಿದ್ಧತೆಯನ್ನು ಪೊಲೀಸರು ಮಾಡಿಕೊಂಡಿದ್ದರು.

ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಶರಣರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಗುರುವಾರ ನಡೆಯಿತು. ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಧೀಶರು ತಕರಾರು ಸಲ್ಲಿಕೆಗೆ ಅವಕಾಶ ಕಲ್ಪಿಸಿ ಸೆ.2ರಕ್ಕೆ ವಿಚಾರಣೆ ಮುಂದೂಡಿದ್ದರು.

ಇನ್ನೂ ಮೂವರ ಬಂಧನ ಬಾಕಿ: ಬಾಲಕಿಯರಿಬ್ಬರು ದಾಖಲಿಸಿದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಹೆಸರಿಸಲಾಗಿದೆ. ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಲಾಗಿದ್ದು, ಎರಡನೇ ಆರೋಪಿ ಹಾಸ್ಟೆಲ್‌ ವಾರ್ಡನ್‌ ವಶಕ್ಕೆ ಪಡೆಯಲಾಗಿದೆ. ಆದರೆ, ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಮಠದ ಉತ್ತರಾಧಿಕಾರಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಪರಮಶಿವಯ್ಯ ಹಾಗೂ ಕಾನೂನು ಸಲಹೆಗಾರ ಗಂಗಾಧರಯ್ಯ ಬಂಧನ ಬಾಕಿ ಇದೆ.

ಬಿಗಿ ಪೊಲೀಸ್‌ ಭದ್ರತೆ: ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸುತ್ತಿದ್ದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. ಎಲ್ಲೆಡೆ ಬ್ಯಾರಿಕೇಡ್‌ಗಳನ್ನು ಹಾಕಿ ನಾಕಾಬಂದಿ ಸೃಷ್ಟಿಸಲಾಗಿದೆ.

ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಭಕ್ತರು ಡಿವೈಎಸ್‌ಪಿ ಕಚೇರಿ ಬಳಿಗೆ ಧಾವಿಸುತ್ತಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಆಯಕಟ್ಟಿನ ಸ್ಥಳದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರನ್ನು ನಿಯೋಜಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಅವರು ನಗರದಲ್ಲಿ ಸಂಚರಿಸಿ ಭದ್ರತೆ ಪರಿಶೀಲಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT