ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ಬಸವರಾಜನ್‌ ದಂಪತಿಯ ಕೊಳಕು ರಾಜಕೀಯ'

ಶಿವಮೂರ್ತಿ ಶರಣರ ಜಾಮೀನು ಅರ್ಜಿ ವಿಚಾರಣೆ ಮುಂದುವರಿಕೆ
Published 26 ಅಕ್ಟೋಬರ್ 2023, 14:29 IST
Last Updated 26 ಅಕ್ಟೋಬರ್ 2023, 14:29 IST
ಅಕ್ಷರ ಗಾತ್ರ

ಬೆಂಗಳೂರು: ‘ಮಿಸ್ಟರ್‌ ಅಂಡ್‌ ಮಿಸೆಸ್‌ ಬಸವರಾಜನ್‌ ಅವರ ಕ್ರಿಮಿನಲ್‌ ಪಿತೂರಿಯ ಭಾಗವಾಗಿ ಶಿವಮೂರ್ತಿ ಶರಣರು ಪೋಕ್ಸೊ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಹೀನಾಯ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುವಂತಾಗಿದೆ. ಮಾಜಿ ಶಾಸಕ ಮತ್ತು ಮಠದ ಮಾಜಿ ಆಡಳಿತಾಧಿಕಾರಿಯೂ ಆದ ಎಸ್‌.ಕೆ.ಬಸವರಾಜನ್‌ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯೂ ಆದ ಅವರ ಪತ್ನಿ ಸೌಭಾಗ್ಯ ಬಸವರಾಜನ್‌ ಅವರ ಕೊಳಕು ರಾಜಕೀಯದ ಪರಿಣಾಮ ಶರಣರು ಮಲಿನ ವ್ಯಾಜ್ಯಗಳಲ್ಲಿ ಸಿಲುಕಿ ಒದ್ದಾಡುವಂತಾಗಿದೆ‘ ಎಂದು ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.

ಜಾಮೀನು ಕೋರಿ ಶಿವಮೂರ್ತಿ ಶರಣರು ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು ಸುದೀರ್ಘ ವಾದ ಮಂಡಿಸಿ, ‘ಇಬ್ಬರು ಸಂತ್ರಸ್ತ ಬಾಲಕಿಯರು ಶರಣರ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವ ಮುನ್ನ ಸರಿಸುಮಾರು ಒಂದು ತಿಂಗಳ ಕಾಲ ಎಸ್‌.ಕೆ.ಬಸವರಾಜನ್‌ ಮತ್ತು ಸೌಭಾಗ್ಯ ಬಸವರಾಜನ್‌ ವಶದಲ್ಲಿ ಅವರ ಮನೆಯಲ್ಲೇ ತಂಗಿದ್ದರು. ತದನಂತರ ಚಿತ್ರದುರ್ಗದಿಂದ ದೂರದ ಮೈಸೂರಿಗೆ ತೆರಳಿ ಒಡನಾಡಿ ಎಂಬ ಸಂಸ್ಥೆಯ ಆಶ್ರಯ ಪಡೆದು ದೂರು ದಾಖಲಿಸಿದರು. ಇದರ ಹಿಂದೆ ಸಾಕಷ್ಟು ಪೂರ್ವನಿಯೋಜಿತ ಪಿತೂರಿ ಅಡಗಿದೆ‘ ಎಂದರು.

‘ಸಂತ್ರಸ್ತ ಬಾಲಕಿಯರು ಮಠದ ಆವರಣದಲ್ಲಿನ ಹಾಸ್ಟೆಲ್‌ನಲ್ಲೇ ಇದ್ದರಾದರೂ ಅದಕ್ಕೆ ಸೂಕ್ತ ಮಹಿಳಾ ವಾರ್ಡನ್‌ ಇದ್ದರು. ಸ್ವಾಮೀಜಿ ಹದಿನೈದು ದಿನಕ್ಕೋ ಅಥವಾ ತಿಂಗಳಿಗೆ ಒಮ್ಮೆಯೋ ಬಾಲಕಿಯರಿಗೆ ಇಂಗ್ಲಿಷ್‌ ಮತ್ತು ಸಂಸ್ಕೃತದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಆಗಾಗ್ಗೆ ಮಕ್ಕಳಿಗೆ ಚಾಕೊಲೆಟ್‌, ಮೂಸಂಬಿ ಮತ್ತು ದ್ರಾಕ್ಷಿಹಣ್ಣು ಕೊಟ್ಟು ತಮ್ಮ ಪ್ರೇಮ ಮೆರೆಯುತ್ತಿದ್ದರು. ಎಲ್ಲ ಮಕ್ಕಳೂ ಅವರನ್ನು ಅಪ್ಪಾಜಿ ಎಂದೇ ಸಂಬೋಧಿಸುತ್ತಿದ್ದವು. ಅವರೊಬ್ಬ ಬುದ್ಧಿವಂತ, ಯೋಗ್ಯ ಸ್ವಾಮೀಜಿಯಾಗಿ ನಡೆದುಕೊಳ್ಳುತ್ತಿದ್ದರು‘ ಎಂದು ಪ್ರತಿಪಾದಿಸಿದರು.

‘ಇಬ್ಬರೂ ಬಾಲಕಿಯರು ಚಿತ್ರದುರ್ಗದಿಂದ 2022ರ ಜುಲೈ 24ರಂದು ಕೆಎಸ್‌ಆರ್‌ಟಿಸಿ ಬಸ್‌ ಹತ್ತಿ ಬೆಂಗಳೂರಿಗೆ ಬಂದು ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪೊಲೀಸರೆದುರು ನಮಗೆ ಅನ್ಯಾಯವಾಗಿದೆ ಎಂದು ವ್ಯಥೆ ತೋಡಿಕೊಂಡರು. ಮರುದಿವಸವೇ ಮಿಸ್ಟರ್ ಅಂಡ್‌ ಮಿಸೆಸ್‌ ಬಸವರಾಜನ್‌ ಬೆಂಗಳೂರಿಗೆ ಬಂದು ಮಕ್ಕಳನ್ನು ತಮ್ಮೊಟ್ಟಿಗೆ ಕರೆದೊಯ್ದರು. ಕರೆದೊಯ್ಯುವಾಗ ಇವರಿಗೆ ಅನ್ಯಾಯವಾಗಿದೆ. ನ್ಯಾಯ ಸಿಗುವತನಕ ವಿರಮಿಸುವುದಿಲ್ಲ ಎಂದು ಗುಡುಗಿದರು. ಆದರೆ, ಆಗಿದ್ದ ಅನ್ಯಾಯವೇನು ಎಂಬುದನ್ನೇ ಹೇಳಲಿಲ್ಲ‘ ಎಂದು ನಾಗೇಶ್‌ ವಿವರಿಸಿದರು.

‘ಒಂದು ತಿಂಗಳು ಪೂರೈಸಿದ ನಂತರ ಮೈಸೂರಿಗೆ ತೆರಳಿ ಒಡನಾಡಿ ಎಂಬ ಸಂಸ್ಥೆಯ ಆಶ್ರಯದಲ್ಲಿ ಮಕ್ಕಳಿಂದ ದೂರು ದಾಖಲಿಸಿದರು. ಆದರೆ, ವೈದ್ಯಕೀಯ ಪರೀಕ್ಷೆಯಲ್ಲಿ ಮಕ್ಕಳ ಮೇಲೆ ಉದ್ರೇಕಿತ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂಬುದು ಸಾಬೀತಾಗಿದೆ. ಈ ಮಕ್ಕಳೇನೂ ಅಶಿಕ್ಷಿತ ಅಥವಾ ಗಾಂವಟಿ ಅಲ್ಲ. ಮುರುಘಾಮಠದ ಬೃಹತ್‌ ವಿದ್ಯಾಸಂಸ್ಥೆಗೆ ಮಸಿ ಬಳಿಯಲೆಂದೇ ಇಂತಹ ಸುಳ್ಳು ಪ್ರಕರಣವನ್ನು ಸ್ವಾಮೀಜಿ ವಿರುದ್ಧ ಹೆಣೆಯಲಾಗಿದೆ. ಪೋಕ್ಸೊ, ಎಸ್ಸಿ–ಎಸ್ಟಿ ದೌ‌ರ್ಜನ್ಯ ತಡೆ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ, ಬಾಲನ್ಯಾಯ ಅಪರಾಧಗಳಡಿ ಗುರುತರ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಲಾಗಿದೆ‘ ಎಂದು ನಾಗೇಶ್‌ ಸಾದ್ಯಂತವಾಗಿ ನ್ಯಾಯಪೀಠಕ್ಕೆ ವಿವರಿಸಿದರು.

‘ಬಸವರಾಜನ್‌ ದಂಪತಿ ವಿರುದ್ಧ ಪಿತೂರಿಯ ಭಾಗವಾಗಿ ಪ್ರತಿದೂರು ದಾಖಲಾಗಿರುವುದನ್ನು ನ್ಯಾಯಪೀಠ ಗಮನಿಸಬೇಕು‘ ಎಂದೂ ಕೋರಿದರು. ಕೋರ್ಟ್‌ ಕಲಾಪದ ಅವಧಿ ಮುಕ್ತಾಯಗೊಂಡ ಕಾರಣ ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು?: ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ ಕಾಯ್ದೆ–2012, ಭಾರತೀಯ ದಂಡ ಸಂಹಿತೆ–1860, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989 ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯ್ದೆ–2015ರ ವಿವಿಧ ಕಲಂಗಳ ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದ್ದು ಚಿತ್ರದುರ್ಗ ಸೆಷನ್ಸ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 

‘ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ 2022ರ ಆಗಸ್ಟ್‌ 26ರಂದು ದೂರು ದಾಖಲಿಸಿದ ನಂತರ ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಚಿತ್ರದುರ್ಗದ ಬೃಹನ್ಮಠದಲ್ಲಿ ಬಂಧಿಸಿದರು. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT