ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ ರಾಜ್ಯ ಬಿಡದಿದ್ದರೆ ಪಕ್ಷ ತೊರೆಯುವುದಾಗಿ ಬೆದರಿಸಿದ್ದ ಸಿದ್ದರಾಮಯ್ಯ: HDK

Published 17 ಏಪ್ರಿಲ್ 2024, 7:31 IST
Last Updated 17 ಏಪ್ರಿಲ್ 2024, 7:31 IST
ಅಕ್ಷರ ಗಾತ್ರ

ಮೈಸೂರು: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಖಾಲಿ ಮಾಡದೇ ಇದ್ದರೆ ಬಿಜೆಪಿ ಸೇರುತ್ತೇನೆ ಎಂದು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್‌ನವರನ್ನು ಬೆದರಿಸಿದ್ದರು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಇಲ್ಲಿ ಪತ್ರಕರ್ತರ ಜತೆ ಬುಧವಾರ ಮಾತನಾಡಿ, ‘ಬೇರೆ ಸಮಾಜದ ನಾಯಕರ ಏಳಿಗೆಯನ್ನು ಸಿದ್ದರಾಮಯ್ಯ ಎಂದಿಗೂ ಸಹಿಸಿಲ್ಲ, ಸಹಿಸುವುದೂ ಇಲ್ಲ’ ಎಂದು ದೂರಿದರು.

‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ಬದಲಾವಣೆ ನೋಡಿದ ಮೇಲೆ ಡಿ.ಕೆ. ಶಿವಕುಮಾರ್ ಭಾಷೆಯಲ್ಲಿ ಬದಲಾವಣೆ ಆಗುತ್ತಿದೆ. ಕಾಂಗ್ರೆಸ್‌ಗೆ ಈಗ ಕುಮಾರಸ್ವಾಮಿಯೇ ಗುರಿ’ ಎಂದರು. 

‘ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲ ಎಂದು ಡಿಕೆಶಿ ಈಚೆಗೆ ಹೇಳಿದ್ದಾರೆ. ಒಕ್ಕಲಿಗರಿಗೆ ಸಿದ್ದರಾಮಯ್ಯ ಅವರಿಂದ ರಕ್ಷಣೆ ಸಿಕ್ಕಿಲ್ಲ; ಅವರಿಂದ ಅನ್ಯಾಯವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಸಮಾಜದವರಿಗೆ ಮುಖ್ಯಮಂತ್ರಿಯಿಂದಲೇ ಅನ್ಯಾಯ ಆಗಿದೆ ಎನ್ನುವುದು ಅವರ ಮಾತಿನ ಅರ್ಥ’ ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಆಗಲು ತಮಗೆ ಅಡ್ಡಿ ಆಗುತ್ತಾರೆಂದು ಜಿ. ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು?’ ಎಂದು ಕೇಳಿದರು. ‘ಈ ಚುನಾವಣೆಯಲ್ಲಿ ಶೇ 85ರಿಂದ ಶೇ 90ರಷ್ಟು ಒಕ್ಕಲಿಗರು ಮೈತ್ರಿ ಪರ ಇದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳ ಫೋನ್ ಕದ್ದಾಲಿಕೆಯನ್ನು ನಾನೇಕೆ ಮಾಡಲಿ? ಅವರ ಮೇಲೆ ಅನುಮಾನ ಇದ್ದಿದ್ದರೆ ಅವರೊಂದಿಗೇ ಏಕೆ ಅಮೆರಿಕಕ್ಕೆ ಹೋಗುತ್ತಿದ್ದೆ. ಸರ್ಕಾರ ‌ಬೀಳುತ್ತದೆ ಎಂದು ಯಾರೂ ನನಗೆ ಹೇಳಿರಲಿಲ್ಲ‌. ನೀವು ಅರಾಮವಾಗಿ ಹೋಗಿ ಬನ್ನಿ ಎಂದು ಹೇಳಿ ಕಳುಹಿಸಿದ್ದರು’ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

‘ನಾನು ಮುಖ್ಯಮಂತ್ರಿ ಆಗಿದ್ದಾಗ ಯಾರ ಫೋನ್ ಕೂಡ ಟ್ಯಾಪ್ ಮಾಡಿಸಿಲ್ಲ. ಮೈತ್ರಿ ಸರ್ಕಾರ ರಚನೆಯಾದ 15 ದಿನಗಳಲ್ಲೇ ರಮೇಶ ಜಾರಕಿಹೊಳಿ, ಡಿ.ಕೆ. ಶಿವಕುಮಾರ್ ನಡುವೆ ಯಾರಿಗೋಸ್ಕರ ಮತ್ತು ಯಾಕೆ ಕಲಹ ಆರಂಭವಾಯಿತು ಎಂಬುದನ್ನು ಹೇಳಲಿ’ ಎಂದು ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು. 

‘ಸುಳ್ಳು ಹೇಳಿಕೊಂಡೇ ರಾಜಕಾರಣ ಮಾಡುವುದು ಶಿವಕುಮಾರ್‌ ಅವರಿಗೆ ರಕ್ತಗತವಾಗಿ ಬಂದಿದೆ‌. ನಾನು ಒಳ್ಳೆಯ ಸ್ನೇಹಿತ ಎಂದು ಅವರು ಹೇಳಿದ್ದಾರೆ. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಸ್ವಲ್ಪ ದಿನಗಳಲ್ಲೇ ಇವೆಲ್ಲಾ ನಿಂತು ಹೋಗುತ್ತದೆ. ಚುನಾವಣೆ ಮುಗಿದ ಮೇಲೆ ಎಲ್ಲವೂ ತಣ್ಣಗಾಗುತ್ತದೆ’ ಎಂದೂ ಹೇಳಿದರು.

‘ರಾಹುಲ್ ಗಾಂಧಿ ಅವರ ಮುಕ್ಕಾಲು ಗಂಟೆ ಭಾಷಣದಿಂದ ಯಾವ ಪರಿವರ್ತನೆಯೂ ಆಗುವುದಿಲ್ಲ. ನನ್ನ ಸೋಲು ಅಥವಾ ಗೆಲುವು ಶಿವಕುಮಾರ್ ಕೈಯಲ್ಲಿದೆಯೇ? ನಾನು ಸೋಲುತ್ತೇನೆಂದು ಹಣದ ದುರಹಂಕಾರ ಮತ್ತು ದರ್ಪದಿಂದ ಹೇಳುತ್ತಿದ್ದಾರೆ. ಹಣದಿಂದ ಮಂಡ್ಯದ ಜನರನ್ನು ಅವರು ಖರೀದಿಸಲು ಆಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT