ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ, ಸಜ್ಜನಿಕೆಯ ಮೂರ್ತಿವೆತ್ತ ಮಲ್ಲಪ್ಪ ಮನಗೂಳಿ

ಗುತ್ತಿ‌ಬಸವಣ್ಣ ಏತನೀರಾವರಿ ಯೋಜನೆ ಹರಿಕಾರ ಇನ್ನಿಲ್ಲ
Last Updated 28 ಜನವರಿ 2021, 10:46 IST
ಅಕ್ಷರ ಗಾತ್ರ

ವಿಜಯಪುರ: ಸರಳ, ಸಜ್ಜನಿಕೆಯ ಮೂರ್ತಿವೆತ್ತ ಮಲ್ಲಪ್ಪ ಚನ್ನಪ್ಪ ಮನಗೂಳಿ(ಎಂ.ಸಿ.ಮನಗೂಳಿ)ಅಜಾತಶತ್ರುವಾಗಿ ಜಿಲ್ಲೆ ಹಾಗೂ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದರು.

ಸದಾಕಾಲ ಗಾಂಧಿ ಟೊಪ್ಪಿ, ಶ್ವೇತ ವಸ್ತ್ರಧಾರಿಯಾಗಿರುತ್ತಿದ್ದ ಮನಗೂಳಿ ಅವರು, ಜಿಲ್ಲೆಯ ಜನರ ಬಾಯಲ್ಲಿ ಮಾಮಾ, ಮುತ್ಯಾ, ಕಾಕಾ ಎಂದು ಕರೆಯಿಸಿಕೊಳ್ಳುತ್ತಿದ್ದರು. ಯಾವುದೇ ಹಮ್ಮುಬಿಮ್ಮು ಇಲ್ಲದೇ ಜನಸಾಮಾನ್ಯರೊಂದಿಗೆ ಬೆರೆತು ರಾಜಕಾರಣ ಮಾಡುತ್ತಿದ್ದರು.

ರಾಜಕೀಯ ಹಿನ್ನೆಲೆ:ಏಳು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಮನಗೂಳಿ ಅವರು ಎರಡು ಬಾರಿ ಜಯಗಳಿಸಿ, ಎರಡು ಅವಧಿಗೂಸಚಿವರಾಗಿದ್ದರು.

1975ರಲ್ಲಿ ಸಿಂದಗಿ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು, ನಂತರ 1978ರಲ್ಲಿ ಪುರಸಭೆ ಸದಸ್ಯರಾಗಿಯೂ ಕೆಲಸ ಮಾಡಿದರು.

1989ರಲ್ಲಿ ಸಮಾಜವಾದಿ ಜನತಾ ಪಕ್ಷದಿಂದ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು.

1994ರಲ್ಲಿ ಜನತಾದಳದಿಂದ ಶಾಸಕರಾಗಿ ಆಯ್ಕೆಯಾದ ಇವರು, ಇದೇ ಅವಧಿಯಲ್ಲಿ ಜೆ.ಎಚ್‌.ಪಟೇಲ್‌ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

1999, 2004, 2008, 2013ರ ಚುನಾವಣೆಗಳಲ್ಲಿ ಸೋಲು ಅನುಭವಿಸಿ, 2018ರಲ್ಲಿ ಜೆಡಿಎಸ್ ಶಾಸಕರಾಗಿ ಆಯ್ಕೆಯಾದ ಇವರು ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಚನೆಯಾದ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

‘ಇದು ನನ್ನ ಕೊನೆಯ ಚುನಾವಣೆ, ಕೊನೆಯ ಚುನಾವಣೆಯಲ್ಲಿ ಬಿದ್ದು ಸತ್ತ ಅನಿಸಬೇಡಿ, ಗೆದ್ದು ಸತ್ತ ಅಂತಾ ಎಂದೆನಿಸಿ’ ಎಂದು 2018ರಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಹಳ್ಳಿ, ಹಳ್ಳಿಗಳಲ್ಲಿ ಮತಯಾಚಿಸಿದ್ದರು. ಇದೀಗ ಅವರ ಮಾತು ನಿಜವಾಯಿತು.

ದೇವೇಗೌಡರಿಗೆ ನಿಷ್ಠೆ:ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಮನಗೂಳಿ ಅವರು ಆತ್ಮೀಯರಾಗಿದ್ದರು. 'ಜೀವ ಇರೋವರೆಗೂ ಜೆಡಿಎಸ್ ಬಿಡುವುದಿಲ್ಲ' ಎನ್ನುತ್ತಿದ್ದ ಅವರು ಪಕ್ಷದೊಳಗೆ ಎಷ್ಟೇ ಏರುಪೇರುಗಳಾದರೂ ತಮ್ಮ ಪಕ್ಷ ನಿಷ್ಠೆಯನ್ನು ಕೊನೆವರೆಗೂ ಉಳಿಸಿಕೊಂಡಿದ್ದರು.ಜೆಡಿಎಸ್‌ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಪಕ್ಷ ಸಂಘಟನೆಯಲ್ಲಿ ಶ್ರಮಿಸಿದ್ದರು.

ಗುತ್ತಿ‌ಬಸವಣ್ಣ ಏತನೀರಾವರಿ ಯೋಜನೆ ಹರಿಕಾರ:ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಾಗಿ ಎಂ.ಸಿ.‌ಮನಗೂಳಿ ಸಾಕಷ್ಟು ಶ್ರಮ ವಹಿಸಿದ್ದರು. ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಸುಮಾರು ಒಂದೂವರೆ ವರ್ಷ ಬರಿಗಾಲಲ್ಲಿ ಸಂಚರಿಸಿ, ಗಮನ ಸೆಳೆದಿದ್ದರು. ಇವರ ಹೋರಾಟದ ಫಲವಾಗಿ ಯೋಜನೆ ಜಾರಿಯಾಗಿತ್ತು. ಈ ಯೋಜನೆಯಿಂದಸಿಂದಗಿ ಕ್ಷೇತ್ರ ನೀರಾವರಿಯಾದ ಹಿನ್ನೆಲೆಯಲ್ಲಿ ರೈತರು ತಾವೇ ಹಣ ಸಂಗ್ರಹಿಸಿ ತಾಲ್ಲೂಕಿನಗೋಲಗೇರಿಯಲ್ಲಿ ಅವರ ಮತ್ತು ಎಚ್‌.ಡಿ.ದೇವೇಗೌಡರ ಆಳೆತ್ತರದ ಜೋಡಿ ಕಂಚಿನ ಪ್ರತಿಮೆಗಳನ್ನು ನಿಲ್ಲಿಸಿರುವುದು ಇತಿಹಾಸ.

ಸಿಂದಗಿ ಪಟ್ಟಣಕ್ಕೆ ಬಳಗನೂರ ಕೆರೆಯಿಂದ ಶಾಶ್ವತ ಕುಡಿಯುವ ನೀರು ಯೋಜನೆ ಹಾಗೂ ಪಟ್ಟಣದಲ್ಲಿ ಸಮಗ್ರ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸುವಲ್ಲಿಯೂ ಇವರು ಮುಖ್ಯ ಪಾತ್ರ ವಹಿಸಿದ್ದರು.

ಶಾಸಕ ಎಂ.ಸಿ.ಮನಗೂಳಿ ನಿಧನ
ವಿಜಯಪುರ:
ಸಿಂದಗಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಸಿ.ಮನಗೂಳಿ (85) ಅನಾರೋಗ್ಯದಿಂದ ಬುಧವಾರ ತಡ ರಾತ್ರಿ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ ಪತ್ನಿ ಸಿದ್ದಮ್ಮ, ಪುತ್ರರಾದ ಡಾ. ಅರವಿಂದ ಮನಗೂಳಿ, ಅಶೋಕ ಮನಗೂಳಿ, ಡಾ.ಶಾಂತವೀರ ಮನಗೂಳಿ (ಸಿಂದಗಿ ಪುರಸಭೆ ಅಧ್ಯಕ್ಷ), ಡಾ.ಚನ್ನವೀರ ಮನಗೂಳಿ ಹಾಗೂ ಪುತ್ರಿ ಅನ್ನಪೂರ್ಣ ನಿಡೋಣಿ ಇದ್ದಾರೆ.

ಅವರ ಅಂತ್ಯಕ್ರಿಯೆ ಜ.29ರಂದು ಬೆಳಿಗ್ಗೆ 11ಕ್ಕೆ ಸಿಂದಗಿ ಪಟ್ಟಣದಲ್ಲಿ ಇರುವ ‘ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿ’ (ಎಚ್.ಜಿ.ಕಾಲೇಜ್)ಆವರಣದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ತೀವ್ರ ಉಸಿರಾಟದ ತೊಂದರೆಯಿಂದ‌ ಬಳಲುತ್ತಿದ್ದ ಅವರನ್ನು ಜನವರಿ 9 ರಂದು ಕಲಬುರ್ಗಿಯಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿತ್ತು.

ಬೆಂಗಳೂರಿನಿಂದ ರಸ್ತೆ ಮೂಲಕ ಮನಗೂಳಿ ಅವರ ಪಾರ್ಥಿವ ಶರೀರವನ್ನು ಗುರುವಾರ ಸಂಜೆ ಸಿಂದಗಿಯಲ್ಲಿರುವ ನಿವಾಸಕ್ಕೆ ತರಲಾಯಿತು. ಕುಟುಂಬದವರು ಮತ್ತು ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ಶುಕ್ರವಾರ ಬೆಳಿಗ್ಗೆ ಅವರ ಮನೆಯಿಂದ ‘ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿ’(ಎಚ್.ಜಿ.ಕಾಲೇಜ್) ಆವರಣದ ವರೆಗೆ ಪಾರ್ಥಿವ ಶರೀರದ ಅಂತಿಮ ಯಾತ್ರೆಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ದರ್ಶನದ ಬಳಿಕ ಅಂತಿಮ ಸಂಸ್ಕಾರ ನೆರವೇರಲಿದೆ.

ಸಕಲ ಸರ್ಕಾರಿ ಗೌರವಗಳೊಂದಿಗೆ, ಕನಿಷ್ಠ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕೋವಿಡ್-19 ಮಾರ್ಗಸೂಚಿಗಳ ಅನ್ವಯ ಮನಗೂಳಿ ಅವರ ಅಂತಿಮ ಸಂಸ್ಕಾರ ನೆರವೇರಿಸುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT