ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿವಾರು ಸಮೀಕ್ಷೆ ವರದಿ ವಿರೋಧಿಸಿಲ್ಲ: ಚರ್ಚೆಗೆ ಬರಲು ಸಿದ್ದರಾಮಯ್ಯ ಸವಾಲು

Last Updated 12 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಕಲಬುರಗಿ: ‘ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ವರದಿಯನ್ನು ನಾನು ವಿರೋಧಿಸಿದ್ದೇನೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.ಎಲ್ಲೋ ಕುಳಿತು ಹೇಳಿಕೆ ನೀಡುವ ಬದಲು ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ. ಆಗ ಯಾರು ವರದಿಯ ಪರವಾಗಿದ್ದಾರೆ, ವಿರೋಧವಾಗಿದ್ದಾರೆ ಎಂಬುದು ಅರ್ಥವಾಗುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

ಎಚ್‌.ಕಾಂತರಾಜು ನೇತೃತ್ವದಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ವರದಿಯನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಲು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‍ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಯೋಗವನ್ನು ರಚನೆ ಮಾಡಿದ್ದೆ. ಜೊತೆಗೆ ಆಯೋಗಕ್ಕೆ ₹170 ಕೋಟಿ ಬಿಡುಗಡೆ ಮಾಡಿದ್ದೆ. ಎರಡು ವರ್ಷಗಳವರೆಗೆ ನಡೆದ ಈ ಸಮೀಕ್ಷೆಯಲ್ಲಿ 1.60 ಲಕ್ಷ ಶಿಕ್ಷಕರು ಭಾಗವಹಿಸಿದ್ದರು. ಅಲ್ಲದೇ, ವರದಿ ಸಲ್ಲಿಸುವಂತೆ ಆಯೋಗವನ್ನು ರಚಿಸಿದ್ದು ನಾನೇ. ಅದನ್ನು ವಿರೋಧಿಸಲು ಹೇಗೆ ಸಾಧ್ಯ? ನನ್ನ ಅವಧಿ ಮುಗಿಯುವುದರೊಳಗಾಗಿ ವರದಿ ಇನ್ನೂ ಸಿದ್ಧವಾಗಿರಲಿಲ್ಲ. ಹೀಗಾಗಿ ವರದಿ ಅಂಗೀಕರಿಸುವ, ತಿರಸ್ಕರಿಸುವ ಪ್ರಶ್ನೆಯೇ ಎದುರಾಗುವುದಿಲ್ಲ’ ಎಂದರು.‌

‘ವರದಿಯನ್ನು ನಾನು ಹೇಳಿ ಬರೆಸಿದ್ದೇನೆ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳುತ್ತಾರೆ. ಅವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದ 1.60 ಲಕ್ಷ ಶಿಕ್ಷಕರಿಗೆ ಹೀಗೇ ಬರೆಯಿರಿ ಎಂದು ಹೇಳಲು ಸಾಧ್ಯವಿದೆಯೇ. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ’ ಎಂದು ಪ್ರಶ್ನಿಸಿದರು.

‘ಈಶ್ವರಪ್ಪ ಒಬ್ಬ ಪೆದ್ದ’: ‘ವರದಿಯಲ್ಲಿ ಕಾರ್ಯದರ್ಶಿಯ ಸಹಿ ಇಲ್ಲ. ಉದ್ದೇಶಪೂರ್ವಕವಾಗಿ ನಾನು ವರದಿ ಅಂಗೀಕರಿಸಲಿಲ್ಲ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳುತ್ತಾರೆ. ಅವರ ನಾಲಿಗೆಗೂ, ಮಿದುಳಿಗೂ ಸಂಬಂಧವೇ ಇಲ್ಲದಂತೆ ಮಾತನಾಡುತ್ತಾರೆ. ಅದಕ್ಕೇ ನಾನು ಅವರನ್ನು ಪೆದ್ದ ಈಶ್ವರಪ್ಪ ಎಂದು ಕರೆಯುತ್ತೇನೆ’ ಎಂದು ವ್ಯಂಗ್ಯವಾಡಿದರು.

‘ವರದಿಯಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಅಲ್ಲದೇ, ಈ ವರದಿ ಯಾರ ವಿರುದ್ಧವೂ ಅಲ್ಲ, ಯಾರ ಪರವೂ ಅಲ್ಲ. ಜಾತಿವಾರು ಸಮೀಕ್ಷೆಯಿಂದ ಯಾರು ಎಷ್ಟು ಜನ ಇದ್ದಾರೆ ಎಂಬುದು ಗೊತ್ತಾಗುತ್ತದೆ. ಹಿಂದುಳಿದ ವರ್ಗದವರಿದ್ದರೆ ಅವರನ್ನು ಮುಖ್ಯ ವಾಹಿನಿಗೆ ತರಲು ಕಾರ್ಯಕ್ರಮ ರೂಪಿಸಬೇಕಾಗುತ್ತದೆ. ಅದಕ್ಕಾಗಿ ಈ ವರದಿ ತಯಾರಿಸಲು ಆಯೋಗವನ್ನು ರಚಿಸಿದ್ದೆ’ ಎಂದರು.

‘ಸದನದಲ್ಲಿ ಈ ಬಗ್ಗೆ ಪ್ರಶ್ನೆಯೇ ಎತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಸದನ ಸರಿಯಾಗಿ ನಡೆದರಲ್ಲವೇ ಪ್ರಶ್ನೆ ಮಾಡುವುದು? ಮುಂಬರುವ ಡಿಸೆಂಬರ್‌ನಲ್ಲಿ ನಡೆಯುವಅಧಿವೇಶನದಲ್ಲಿ ನನ್ನ ಮೊದಲ ಪ್ರಶ್ನೆ ಇದೇ ಆಗಿರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT