ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಣ್ಣಿನ ಫಲವತ್ತತೆ ಕುಸಿತ, ಶೇ 40ರಷ್ಟೇ ಸಹಜ ಮಣ್ಣು: ಸಿಎಂ ಸಿದ್ದರಾಮಯ್ಯ ಕಳವಳ

Published 9 ಜುಲೈ 2024, 23:30 IST
Last Updated 9 ಜುಲೈ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಮಣ್ಣಿನ ಫಲವತ್ತತೆಗೆ ಸಂಬಂಧಿಸಿದಂತೆ ನಡೆದ ಮಾದರಿ ಸಮೀಕ್ಷೆಯ ಪ್ರಕಾರ ಶೇ 33.78ರಷ್ಟು ಮಣ್ಣು ಆಮ್ಲೀಯ, ಶೇ 26.7ರಷ್ಟು ಕ್ಷಾರೀಯ ಆಗಿದೆ. ಸಹಜ‌ ಮಣ್ಣಿನ ಪ್ರಮಾಣ ಸುಮಾರು ಶೇ 40ರಷ್ಟು ಮಾತ್ರ... ’ 

ಮಣ್ಣಿನ ಫಲವತ್ತತೆ ಕುಸಿತವಾಗುತ್ತಿರುವ ಬಗ್ಗೆ ಆತಂಕಕಾರಿ ಮಾಹಿತಿ ನೀಡಿದವರು ಮುಖ್ಯಮಂತ್ರಿ ಸಿದ್ದರಾಮಯ್ಯ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎರಡು ದಿನ ಸುದೀರ್ಘ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತಿರುವುದರಿಂದ ಭವಿಷ್ಯದ ಕರ್ನಾಟಕ ಕುರಿತು ಆತಂಕ ಉಂಟಾಗಿದೆ’ ಎಂದರು.

‘ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ ನೈಸರ್ಗಿಕ ಇಂಗಾಲದ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

‘ಜನರು ರಸಗೊಬ್ಬರ ಬಳಸುವ ಪ್ರಮಾಣ ಹೆಚ್ಚಾಗುತ್ತಿದೆ. 2014-15ರಲ್ಲಿ 37.4 ಲಕ್ಷ ಟನ್ ರಸಗೊಬ್ಬರ ಬಳಕೆಯಾಗಿದ್ದರೆ, 2023-24ರಲ್ಲಿ ಆ ಪ್ರಮಾಣ 40 ಲಕ್ಷ ಟನ್‌ಗೆ ಏರಿಕೆಯಾಗಿದೆ. 2017-18ರಲ್ಲಿ 16.66 ಲಕ್ಷ ಮಣ್ಣು ಮಾದರಿಗಳ ಪರೀಕ್ಷೆ ಮಾಡಲಾಗಿತ್ತು. ಆ ಪರೀಕ್ಷೆಯ ಪ್ರಕಾರ ಶೇ 50.41ರಷ್ಟು ಸಹಜ ಇಂಗಾಲದ ಕೊರತೆಯಿದೆ. ಸಾರಜನಕ ಶೇ 73.77, ಪೊಟ್ಯಾಶಿಯಂ ಶೇ 24.94 ರಷ್ಟು ಕೊರತೆಯಿದೆ’ ಎಂದರು.

‘ಕೊರತೆಯ ಪ್ರಮಾಣವನ್ನು ತುಂಬಲು ರೈತರು ರಸಗೊಬ್ಬರದ ಮೊರೆ ಹೋಗಿದ್ದಾರೆ. ಭವಿಷ್ಯದಲ್ಲಿ ಇದು ಬಹಳ ದೊಡ್ಡ ಸಮಸ್ಯೆಯನ್ನು ಹುಟ್ಟು ಹಾಕಲಿದೆ. ರೈತರ ಖರ್ಚು ಹೆಚ್ಚುತ್ತಿದೆ. ಅದಕ್ಕೆ ತಕ್ಕವಾಗಿ ಆದಾಯ ಸಿಗುತ್ತಿಲ್ಲ. ನಮ್ಮ ರೈತರ ಉತ್ಪನ್ನಗಳಲ್ಲಿ ರಾಸಾಯನಿಕ ಅಂಶಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT