ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೌಜನ್ಯ ಕೊಲೆ ಪ್ರಕರಣ: ಮರುತನಿಖೆ ಕೋರಿಕೆ ವಜಾಗೊಳಿಸಿದ ಹೈಕೋರ್ಟ್‌

Published : 30 ಆಗಸ್ಟ್ 2024, 15:59 IST
Last Updated : 30 ಆಗಸ್ಟ್ 2024, 15:59 IST
ಫಾಲೋ ಮಾಡಿ
Comments

ಬೆಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು ಹಾಗೂ ಪ್ರಕರಣದಿಂದ ಆರೋಪಿ ಸಂತೋಷ್‌ ರಾವ್‌ ಅವರನ್ನು ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು’ ಎಂದು ಕೋರಲಾಗಿದ್ದ ಪ್ರತ್ಯೇಕ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಸಂಬಂಧದ ಅರ್ಜಿಗಳ ಮೇಲಿನ ವಿಚಾರಣೆ ಅಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿತು. ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ. ರಾಜ್ಯ ಪ್ರಾಸಿಕ್ಯೂಷನ್‌ ಪರ ವಿಜಯಕುಮಾರ್ ಮಜಗೆ ವಾದ ಮಂಡಿಸಿದ್ದರು.

ಪ್ರಕರಣವೇನು?:

‘ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಮೇಲೆ 2012ರಲ್ಲಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ’ ಎಂಬ ಆರೋಪದ ಈ ಪ್ರಕರಣವನ್ನು ಬೆಳ್ತಂಗಡಿ ಠಾಣಾ ಪೊಲೀಸರು ಪ್ರಾಥಮಿಕವಾಗಿ ತನಿಖೆ ನಡೆಸಿದ್ದರು. ಬಳಿಕ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. 2012ರ ನವೆಂಬರ್ 6ರಂದು ಸಿಐಡಿ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಸರ್ಕಾರ ಆದೇಶಿಸಿತ್ತು. ಸಿಬಿಐ, ಕಾರ್ಕಳದ ಸಂತೋಷ್ ರಾವ್ ಆರೋಪಿ ಎಂದು ಗುರುತಿಸಿತ್ತು. 2023ರ ಜುಲೈ 16ರಂದು ಸಿಬಿಐ ವಿಶೇಷ ನ್ಯಾಯಾಲಯ ಸಂತೋಷ್‌ ರಾವ್‌ ಖುಲಾಸೆಗೊಳಿಸಿತ್ತು.

‘ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು’ ಎಂದು ಕೋರಿ ಸೌಜನ್ಯಳ ತಂದೆ ಧರ್ಮಸ್ಥಳದ ನಿವಾಸಿ ಚಂದಪ್ಪ ಗೌಡರ ರಿಟ್‌ ಅರ್ಜಿ, ‘ಕಾರ್ಕಳ ತಾಲ್ಲೂಕಿನ ಕುಕುಂದೂರಿನ ಸಂತೋಷ್‌ ರಾವ್‌ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಸಿಬಿಐ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಮತ್ತು ‘ಪ್ರಕರಣದಲ್ಲಿ ನಿಜವಾದ ತಪ್ಪಿತಸ್ಥನನ್ನು ಪತ್ತೆ ಹಚ್ಚಲು ಸಿಬಿಐಗೆ ನಿರ್ದೇಶಿಸಬೇಕು’ ಎಂದು ಕೋರಿ ಸಂತೋಷ್‌ ರಾವ್‌ ಈ ಮೂರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

ಚಂದಪ್ಪ ಗೌಡ ಮನವಿ: ‘ಸೂಕ್ತ ಸಾಕ್ಷ್ಯಧಾರಗಳಿಲ್ಲ ಎಂದು ಆರೋಪಿ ಸಂತೋಷ್‌ ರಾವ್‌ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಕೃತ್ಯದಲ್ಲಿ ಆರೋಪಿಯ ಪಾತ್ರ ಇರುವುದನ್ನು ಮತ್ತು ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ. ಗೋಲ್ಡನ್‌ ಅವರ್‌ನಲ್ಲಿ ತನಿಖೆಯನ್ನು ಸಮರ್ಪಕವಾಗಿ ನಡೆಸಿಲ್ಲ ಎಂದು ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಇದರಿಂದ ಇಡೀ ತನಿಖೆ ನ್ಯಾಯೋಚಿತವಾಗಿ ನಡೆದಿಲ್ಲ ಎಂಬುದು ಸ್ಪಷ್ಟವಾಗಲಿದೆ. ಆದ್ದರಿಂದ ಮರು ತನಿಖೆ ನಡೆಸಲು ಆದೇಶಿಸಬೇಕು’ ಎಂದು ಚಂದಪ್ಪ ಗೌಡ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು. ಚಂದಪ್ಪ ಗೌಡ ಪರ ಹೈಕೋರ್ಟ್‌ ವಕೀಲ ಎಂ.ಆರ್‌.ಬಾಲಕೃಷ್ಣ ವಾದ ಮಂಡಿಸಿದ್ದರು.

ಸಿಬಿಐ ಕೋರಿಕೆ: ‘ಸೌಜನ್ಯಳ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದ ಎರಡನೇ ದಿನಕ್ಕೆ ಆರೋಪಿ ಸಂತೋಷ್‌ ರಾವ್‌ ಅವರನ್ನು ಬಂಧಿಸಲಾಗಿತ್ತು. ಸಂತೋಷ್ ರಾವ್‌ ಆ ಊರಿನವರಲ್ಲ. ಘಟನಾ ಸ್ಥಳದಲ್ಲಿ ಏಕೆ ಇದ್ದರು ಎಂಬುದಕ್ಕೆ ಅವರು ವಿವರಣೆ ನೀಡಿಲ್ಲ. ತನ್ನ ಬೆನ್ನು ಹಾಗೂ ಮಂಡಿಯಲ್ಲಿ ಗಾಯವಾಗಿರುವುದಕ್ಕೂ ಸೂಕ್ತ ವಿವರಣೆ ಕೊಟ್ಟಿಲ್ಲ. ಘಟನಾ ಸ್ಥಳದಲ್ಲಿ ಬಿಳಿ ಪಂಚೆಯೊಂದನ್ನು ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿ ಸಂತೋಷ್‌ ರಾವ್‌ ಕೂದಲು ಸಿಕ್ಕಿದೆ. ಈ ಕೂದಲು ಸಂತೋಷ್‌ ರಾವ್‌ದೇ ಎಂಬುದು ಡಿಎನ್‌ಎ ವರದಿಯಲ್ಲಿ ಸಾಬೀತಾಗಿದೆ. ಹೀಗಾಗಿ, ಸಂತೋಷ್‌ ರಾವ್‌ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾರೆ. ಆದ್ದರಿಂದ, ಅವರನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಬೇಕು’ ಎಂದು ಸಿಬಿಐ ಕೋರಿತ್ತು.

ಸಂತೋಷ್‌ ರಾವ್‌ ಅರ್ಜಿ: ‘ಯಾವುದೇ ತಪ್ಪು ಮಾಡದಿದ್ದರೂ ಪೊಲೀಸರು ನನ್ನನ್ನು ಬಂಧಿಸಿದ್ದರು. ವಿಶೇಷ ನ್ಯಾಯಾಲಯ ನನ್ನನ್ನು ಈಗಾಗಲೇ ದೋಷಮುಕ್ತಗೊಳಿಸಿದೆ. ಆದರೆ, ನಿಜವಾದ ಅಪರಾಧಿ ತಪ್ಪಿಸಿಕೊಂಡಿದ್ದಾನೆ. ಹಾಗಾಗಿ, ಪ್ರಕರಣದ ಮರು ತನಿಖೆಗೆ ನಡೆಸಿ, ನಿಜವಾದ ಅಪರಾಧಿಯನ್ನು ಬಂಧಿಸಬೇಕು. ತನಿಖಾಧಿಕಾರಿಗಳು ದುರುದ್ದೇಶಪೂರ್ವಕವಾಗಿ ನನ್ನನ್ನು ವಿಚಾರಣೆಗೆ ಒಳಪಡಿಸಿದ್ದ ಕಾರಣ ನನಗೆ ₹50 ಲಕ್ಷ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು’ ಎಂದು ಸಂತೋಷರಾವ್ ತಮ್ಮ ಅರ್ಜಿಯಲ್ಲಿ ಕೋರಿದ್ದರು. ಸಂತೋಷ್‌ ರಾವ್‌ ಪರ ಕೆ.ಮೋಹಿತ್‌ ಕುಮಾರ್ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT