ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ | ಹಲವು ಪ್ರಶ್ನೆ ಹುಟ್ಟುಹಾಕಿದ ಹಾಲಾಡಿ ನಡೆ

ಐದು ಬಾರಿ ಕುಂದಾಪುರ ಕ್ಷೇತ್ರದ ಶಾಸಕರಾಗಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಆಯ್ಕೆ: ಸ್ಪರ್ಧಿಸದಿರುವ ನಿರ್ಧಾರಕ್ಕೆ
Last Updated 4 ಏಪ್ರಿಲ್ 2023, 2:15 IST
ಅಕ್ಷರ ಗಾತ್ರ

ಉಡುಪಿ: ಕುಂದಾಪುರ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಏಕಾಏಕಿ ಚುನಾವಣಾ ಕಣದಿಂದ ಹಿಂದೆ ಸರಿದಿರುವುದು ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾಲಾಡಿ ಅವರದ್ದು ಸ್ವಯಂಪ್ರೇರಿತ ನಿರ್ಧಾರವೇ ಅಥವಾ ರಾಜಕೀಯ ಒತ್ತಡವೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಜ್ಜನ ರಾಜಕಾರಣಿ ಎಂದು ಗುರುತಿಸಿಕೊಂಡವರು. ಅಭಿಮಾನಿಗಳಿಂದ ‘ಕುಂದಾಪುರದ ವಾಜಪೇಯಿ’ ಎಂದೇ ಪ್ರೀತಿಯಿಂದ ಕರೆಸಿಕೊಂಡವರು. ರಾಜಕೀಯ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗು ಮಾಡಿ, ಆಡಳಿತ ವಿರೋಧಿ ಅಲೆಯನ್ನೂ ಮೀರಿ ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡು ಬಂದಿರುವ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.

ಒಮ್ಮೆಯೂ ಸೋಲು ಕಾಣದ, ಐದು ಬಾರಿ ಶಾಸಕರಾದರೂ ಸಚಿವ ಸ್ಥಾನಕ್ಕೆ ಹಪಹಪಿಸದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ದಿಢೀರ್ ನಿರ್ಧಾರ ಅಭಿಮಾನಿಗಳಲ್ಲಿ, ಕಾರ್ಯಕರ್ತರಲ್ಲಿ ತೀವ್ರ ನೋವು ಹಾಗೂ ಅಸಮಾಧಾನ ಉಂಟುಮಾಡಿದೆ. ಶಿಷ್ಯರೊಬ್ಬರಿಗೆ ಗಟ್ಟಿಯಾದ ರಾಜಕೀಯ ನೆಲೆ ಕಲ್ಪಿಸಲು ಕ್ಷೇತ್ರ ಬಿಟ್ಟುಕೊಟ್ಟಿದ್ದಾರಾ ಅಥವಾ ಒತ್ತಡಕ್ಕೆ ಮಣಿದು ನಿರ್ಧಾರ ತೆಗೆದುಕೊಂಡರಾ ಎಂಬ ಚರ್ಚೆಗಳು ಮುನ್ನಲೆಗೆ ಬಂದಿದೆ. ಹಾಲಾಡಿ ಚುನಾವಣೆಯಿಂದ ಸ್ಪರ್ಧಿಸದಿರಲು ಇದುವರೆಗೂ ಸ್ಪಷ್ಟವಾದ ಕಾರಣಗಳಂತೂ ಸಿಕ್ಕಿಲ್ಲ.

ರಾಜಕೀಯ ಹಾದಿ: ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳಲು ಪ್ರಮುಖ ಪಾತ್ರ ವಹಿಸಿದವರು ಹಾಲಾಡಿ. 1999ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಅವರನ್ನು 1,021 ಮತಗಳಿಂದ ಮಣಿಸಿದರು.

2004ರ ಚುನಾವಣೆಯಲ್ಲೂ ಬಿಜೆಪಿಯಿಂದ ಕಣಕ್ಕಿಳಿದು ಕಾಂಗ್ರೆಸ್‌ನ ಅಶೋಕ್ ಕುಮಾರ್ ಹೆಗ್ಡೆ ವಿರುದ್ದ 19,665 ಮತಗಳ ಅಂತರದ ಗೆಲುವು ಪಡೆದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು 25,083 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

ಸಚಿವ ಸ್ಥಾನ ನೀಡುವುದಾಗಿ ಬೆಂಗಳೂರಿಗೆ ಕರೆಸಿಕೊಂಡು ಸಚಿವ ಸ್ಥಾನ ಕೊಡದೆ ವಾಪಸ್ ಕಳಿಸಿದ ಬಿಜೆಪಿ ನಾಯಕರಿಗೆ ಸೆಡ್ಡುಹೊಡೆದು 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹಾಲಾಡಿ ಅವರು ಕಾಂಗ್ರೆಸ್‌ನ ಮಲ್ಯಾಡಿ ಶಿವರಾಮ ಶೆಟ್ಟಿ ಅವರಿಗೆ 40,611 ಮತಗಳಿಂದ ಸೋಲುಣಿಸಿದ್ದರು. ಈ ಮೂಲಕ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಯ ವರ್ಚಸ್ಸು ಹೆಚ್ಚು ಎಂಬುದನ್ನು ಸಾಬೀತುಪಡಿಸಿದ್ದರು.

ಬಳಿಕ ಮತ್ತೆ 2018ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ವಿರುದ್ಧ 56,405 ಮತಗಳ ಅಂತರದ ಗೆಲವು ಪಡೆದರು. ಹಾಲಾಡಿ ಅವರ ಗೆಲುವಿನ ಹಾದಿಯನ್ನು ಗಮನಿಸಿದರೆ ಪ್ರತಿ ಚುನಾವಣೆಯಲ್ಲೂ ಗೆಲುವಿನ ಅಂತರ ಹಿಗ್ಗುತ್ತಲೇ ಹೋಗಿತ್ತು.

ಕಣದಿಂದ ಹಿಂದೆ ಸರಿದ ಹಾಲಾಡಿ
ಕುಂದಾಪುರ (ಉಡುಪಿ ಜಿಲ್ಲೆ):
ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದಾರೆ.

ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಹಾಲಾಡಿ ‘ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ವಇಚ್ಛೆಯಿಂದ ಸ್ಪರ್ಧಿಸದಿರಲು ನಿಶ್ಚಯಿಸಿದ್ದೇನೆ. ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಗೆ ಮತದಾರರು ಸಹಕಾರ ನೀಡಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT