ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಹೆದ್ದಾರಿಗಳಲ್ಲೂ ಟೋಲ್‌

ಪ್ರತಿವರ್ಷ ಶೇ 10 ದರ ಹೆಚ್ಚಳ
Last Updated 9 ಅಕ್ಟೋಬರ್ 2018, 20:17 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 17 ರಾಜ್ಯ ಹೆದ್ದಾರಿಗಳಲ್ಲಿ (1,530 ಕಿ.ಮೀ ಉದ್ದ) ಟೋಲ್‌ ಸಂಗ್ರಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಪೈಕಿ 5 ರ‌ಸ್ತೆಗಳಲ್ಲಿ ಈಗಾಗಲೇ ಶುಲ್ಕ ಸಂಗ್ರಹ ಆರಂಭಗೊಂಡಿದೆ.

‘2015ರಲ್ಲಿ ಟೋಲ್‌ ಸಂಗ್ರಹಕ್ಕೆ ನಿಯಮಾವಳಿ ರಚಿಸಲಾಗಿದೆ. 2017ರಲ್ಲಿ ಟೆಂಡರ್‌ ಕರೆಯಲಾಗಿತ್ತು. ಈಗ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಮೂರು ವರ್ಷಗಳ ಅವಧಿಗೆ ಟೆಂಡರ್‌ ನೀಡಲಾಗಿದೆ. ಪ್ರತಿವರ್ಷ ಶೇ 10ರಷ್ಟು ದರ ಹೆಚ್ಚಳ ಆಗಲಿದೆ. ಮೂರನೇ ವರ್ಷದ ವೇಳೆಗೆ ಶೇ 30ರಷ್ಟು ಹೆಚ್ಚಳ ಆಗಲಿದೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

‘ರಾಜ್ಯ ಹೆದ್ದಾರಿಗಳಿಗೆ ಶುಲ್ಕ ವಿಧಿಸಲು ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ 2010ರಲ್ಲಿ ನಿರ್ಧರಿಸಲಾಗಿತ್ತು. 17 ರಸ್ತೆಗಳಿಗೆ ಟೆಂಡರ್‌ ಕರೆಯಲಾಗಿತ್ತು. 5 ರಸ್ತೆಗಳಿಗೆ ಶುಲ್ಕ ವಸೂಲಿಗೆ ಅನುಮತಿ ನೀಡಲಾಗಿದೆ. ಪಡುಬಿದ್ರಿ–ಕಾರ್ಕಳ, ಹೊಸಕೋಟೆ–ಚಿಂತಾಮಣಿ, ತುಮಕೂರು–ಪಾವಗಡ, ಮದಗಲ್‌–ಗಂಗಾವತಿ ರಸ್ತೆಗಳಿಗೆ ಟೋಲ್‌ ನಿಗದಿ ಮಾಡಲಾಗಿದೆ’ ಎಂದರು.

ಇನ್ನೂ ಆರು ರಸ್ತೆಗಳಲ್ಲಿ ಶುಲ್ಕ ಸಂಗ್ರಹಕ್ಕೆ ಕರ್ನಾಟಕ ರಾಜ್ಯ ರಸ್ತೆ ಅಭಿ ವೃದ್ಧಿ ನಿಗಮವು ಅಕ್ಟೋಬರ್‌ 3ರಂದು ಟೆಂಡರ್‌ ಕರೆದಿದೆ. ಈ ರಸ್ತೆ ಗಳಿಂದ ವಾರ್ಷಿಕ ₹43.12 ಕೋಟಿ ಶುಲ್ಕ ಸಂಗ್ರಹಿಸುವುದು ಸಂಸ್ಥೆಯ ಗುರಿ. 17 ರಸ್ತೆಗಳಲ್ಲಿ ವಾರ್ಷಿಕ ₹200 ಕೋಟಿ ಟೋಲ್‌ ಸಂಗ್ರಹದ ಗುರಿ ಇರಿಸಿಕೊಳ್ಳಲಾಗಿದೆ. ಈವರೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾತ್ರ ಟೋಲ್‌ ಸಂಗ್ರಹಿಸಲಾಗುತ್ತಿತ್ತು. ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರಸ್ತೆ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲೆಯ ಬೆಳ್ಮಣ್‌ನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆ–ಶಿಪ್‌) ಹಾಗೂ ಕೆಆರ್‌ಡಿಸಿಎಲ್‌ ಸಂಸ್ಥೆಗಳು ವಿಶ್ವಬ್ಯಾಂಕ್‌ ಮತ್ತು ಎಡಿಬಿಯಿಂದ ಸಾಲ ಪಡೆದು ನಿರ್ಮಿಸಿದ 3,800 ಕಿ.ಮೀ ಉದ್ದದ 31 ರಸ್ತೆಗಳಿಗೆ ಶುಲ್ಕ ವಿಧಿಸಲು ಪ್ರಸ್ತಾವ ಸಲ್ಲಿಸಿದ್ದವು. 2017ರ ಮಾರ್ಚ್‌ 17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 19 ರಸ್ತೆಗಳಲ್ಲಿ ಶುಲ್ಕ ಸಂಗ್ರಹಕ್ಕೆ ಒಪ್ಪಿಗೆ ನೀಡಲಾಗಿತ್ತು. ಎರಡು ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಲೀನವಾಗಿವೆ. ಹೀಗಾಗಿ, 17 ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹ ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ರಸ್ತೆ ಶುಲ್ಕ ಎಲ್ಲಿ?

ರಾಜ್ಯ ಹೆದ್ದಾರಿ; ಕಿ.ಮೀ

ಮುದಗಲ್‌–ಗಂಗಾವತಿ; 74

ಪಡುಬಿದ್ರಿ–ಕಾರ್ಕಳ; 28

ಹಾವೇರಿ–ಹಾನಗಲ್‌; 33

ಧಾರವಾಡ–ಸವದತ್ತಿ; 36

ಹೊಸಕೋಟೆ–ಚಿಂತಾಮಣಿ; 52

ತಿಂತಿಣಿ–ಕಲ್ಮಲಾ; 74

ದಾಬಸ್‌ಪೇಟೆ–ಆಂಧ್ರ ಪ್ರದೇಶದ ಕಂಬೂರಿ; 91

ನವಲಗುಂದ–ಮುಂಡರಗಿ; 80

ಗುಬ್ಬಿ–ಯಡಿಯೂರು; 49

ಯಡಿಯೂರು–ಮಂಡ್ಯ; 60

ದಾವಣಗೆರೆ–ಬೀರೂರು; 149

ಸವದತ್ತಿ–ಪಟ್ಟದಕಲ್ಲು; 130

ಹಾನಗಲ್‌–ತಡಸ; 144

ಶಿಕಾರಿ‍ಪುರ–ಹಾನಗಲ್‌; 128

ಮಳವಳ್ಳಿ–ಕೊರಟಗೆರೆ; 150

ಮುಧೋಳ–ನಿಪ್ಪಾಣಿ; 108

ಸಿಂಧನೂರು–ಕುಷ್ಟಗಿ; 75

ಹುಬ್ಬಳ್ಳಿ–ಲಕ್ಷ್ಮೇಶ್ವರ; 43

ಬಳ್ಳಾರಿ–ಮೋಕಾ; 26

ಯಾವ ವಾಹನಕ್ಕೆ ಎಷ್ಟು ಶುಲ್ಕ?

ಕಾರು: ಪ್ರತಿ ಕಿ.ಮೀ.ಗೆ 60 ಪೈಸೆ.

ಲಘುವಾಹನ: ಪ್ರತಿ ಕಿ.ಮೀ.ಗೆ 99 ಪೈಸೆ

ಬಸ್‌/ವಾಣಿಜ್ಯ ವಾಹನ (ಎರಡು ಆಕ್ಸೆಲ್‌): ಪ್ರತಿ ಕಿ.ಮೀ.ಗೆ ₹2

ಮೂರು ಆಕ್ಸೆಲ್‌ ವಾಹನ: ಪ್ರತಿ ಕಿ.ಮೀ.ಗೆ ₹2.12

*ಮಲ್ಟಿ ಆಕ್ಸೆಲ್‌ ವಾಹನ: ಪ್ರತಿ ಕಿ.ಮೀ.ಗೆ ₹3.26

*ಏಳು ಅಥವಾ ಹೆಚ್ಚಿನ ಆಕ್ಸೆಲ್‌ ವಾಹನಗಳು: ಪ್ರತಿ ಕಿ.ಮೀ.ಗೆ ₹3.92

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT