ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮದ ಹಗರಣ: ಸಚಿವರ ಮೇಲೆ ಎಫ್‌ಐಆರ್ ಏಕೆ ಮಾಡಿಲ್ಲ?

ಸರ್ಕಾರಕ್ಕೆ ಕಾರಜೋಳ ಹಲವು ಪ್ರಶ್ನೆ
Published 29 ಮೇ 2024, 23:29 IST
Last Updated 29 ಮೇ 2024, 23:29 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೇಳಿರುವ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಅವುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಉತ್ತರ ಇದೆಯೇ ಎಂದು ಕೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಯಾಂಕ್‌ನ ಜಂಟಿ ಖಾತೆಯಿಂದ ಮಾರ್ಚ್‌ನಲ್ಲಿ ಹಣ ವರ್ಗಾವಣೆ ಆಗಿದೆ. ಮಾರ್ಚ್‌ 4ರಂದು ₹25 ಕೋಟಿ, ಮಾರ್ಚ್‌ 6ರಂದು ₹25 ಕೋಟಿ, ಮಾರ್ಚ್‌ 21ರಂದು ₹44 ಕೋಟಿ ವರ್ಗಾವಣೆ ಆಗಿದೆ. ರಾಜ್ಯ ಹುಜೂರ್‌ ಖಜಾನೆಯಿಂದ ₹43.33 ಕೋಟಿ ವರ್ಗಾವಣೆ ಆಗಿದೆ. ಮೇ 21 ರಂದು ₹50 ಕೋಟಿ ವರ್ಗಾವಣೆ ಆಗಿದೆ. ಈ ಹಣ ಯಾವ ಖಾತೆಗಳಿಗೆ ವರ್ಗಾವಣೆ ಆಗಿದೆ ಮಾಹಿತಿ ಕೊಡಿ ಎಂದು ಆಗ್ರಹಿಸಿದರು.

ಬ್ಯಾಂಕಿನ ಪ್ರತಿ ತಿಂಗಳ ವಿವರ ಹುಜೂರ್‌ ಖಜಾನೆಯ ವಿವರವನ್ನು ಪುನರ್‌ ಪರಿಶೀಲಿಸಲಿಲ್ಲವೇಕೆ? ಮಾರ್ಚ್‌ 31ರಂದು ಹಣಕಾಸು ವರ್ಷ ಮುಕ್ತಾಯ ಆದ ಬಳಿಕ ವ್ಯವಸ್ಥಾಪಕ ನಿರ್ದೇಶಕ ಮತ್ತು ಇಲಾಖೆಯ ಸರ್ಕಾರದ ಮಟ್ಟದ ಅಧಿಕಾರಿಗಳು ಪರಿಶೀಲನಾ ಸಭೆ ಮಾಡಲಿಲ್ಲವೇಕೆ ಎಂದು ಕೇಳಿದರು.

ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್ ಅವರು ಮಂತ್ರಿಗಳ ಮೌಖಿಕ ಆದೇಶದನ್ವಯ ಹಣ ವರ್ಗಾವಣೆ ಮಾಡಿದ್ದಾಗಿ ಬರೆದಿದ್ದಾರೆ. ಹಾಗಿದ್ದರೆ ಎಫ್‌ಐಆರ್‌ನಲ್ಲಿ ಸಚಿವರ ಹೆಸರು ಏಕೆ ಸೇರಿಸಿಲ್ಲ ಎಂದು ಪ್ರಶ್ನಿಸಿದರು.

‘ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಬಳಿ ಇದ್ದ ಪೆನ್‌ಡ್ರೈವ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿದ್ದ ಮಾಹಿತಿಯನ್ನು ಸಾರ್ವಜನಿಕರ ಮುಂದಿಡಬೇಕು. ಸತ್ಯವಂತರು ಎಂದು ಹೇಳಿಕೊಳ್ಳುವ ಇವರು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಮುಂದಾಗಬೇಕು. ರಾಜ್ಯ ತನಿಖಾ ಸಂಸ್ಥೆಗಳಿಂದ ನಿಷ್ಪಕ್ಷ ತನಿಖೆ ನಡೆಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಭಾಗವಹಿಸಿದ್ದರು.

ಸಿದ್ದರಾಮಯ್ಯನವರೇ ನಿರಪರಾಧಿ ಕೆ.ಎಸ್.ಈಶ್ವರಪ್ಪನವರನ್ನು ಬಲಿ ಪಡೆದಿರಿ; ಆವತ್ತು ನೀವು ಪ್ರತಿಪಕ್ಷದಲ್ಲಿ ಇದ್ದಾಗ ಯಾವ ರೀತಿ ಮಾತಾಡಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ
ಗೋವಿಂದ ಕಾರಜೋಳ ಮಾಜಿ ಉಪಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT