ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದೀರ್ಘ ಬರಹ: ಬಗೆದಷ್ಟೂ ಇದೆ ಮರಳಿನ ಕಥೆ, ಭೂತಾಯಿಯ ವ್ಯಥೆ

ಇಲಾಖೆಗಳ ನಡುವೆ ಸಮನ್ವಯ ಕೊರತೆ, ಪೊಲೀಸರ ನಿರಾಸಕ್ತಿ
Last Updated 20 ಸೆಪ್ಟೆಂಬರ್ 2018, 5:21 IST
ಅಕ್ಷರ ಗಾತ್ರ

ಈಗ್ಗೆ ಸುಮಾರು ನಾಲ್ಕು ತಿಂಗಳ ಹಿಂದೆ, ಮೇ 31, 2018ರಂದು ಮರಳನ್ನು ಅಕ್ರಮವಾಗಿ ಸಂಗ್ರಹಿಸಿ, ಸಾಗಣೆ ಮಾಡುತ್ತಿರುವುದರ ಬಗ್ಗೆ ಸಿಕ್ಕ ಮಾಹಿತಿ ಅಧರಿಸಿ ಹನುಮಂತ ಭಂಗಿ ಅವರು ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಕೋಳೂರು ಗ್ರಾಮದ ಕೃಷ್ಣಾನದಿ ದಂಡೆಗೆ ಓಡಿದ್ದರು. ಮರಳೆತ್ತುವುದನ್ನು ವಿಡಿಯೊ ಮಾಡಿಕೊಳ್ಳುತ್ತಿದ್ದಾಗ ಸಿಟ್ಟಿಗೆದ್ದ ದಂಧೆಕೋರರು ಅವರನ್ನು ಚೆನ್ನಾಗಿ ಥಳಿಸಿ, ನದಿಯಲ್ಲಿ ಮುಳುಗಿಸಿ ಕೊಲ್ಲಲು ಯತ್ನಿಸಿದ್ದರು.

ಅಂದಹಾಗೆ ಹನುಮಂತ ಭಂಗಿ ಸಾಮಾಜಿಕ ಕಾರ್ಯಕರ್ತರಾಗಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಚಿರಪರಿಚಿತರು. ಸಹಜವಾಗಿಯೇ ಅವರ ಮೇಲೆ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದ ದಂಧೆಕೋರರ ಕಣ್ಣಿತ್ತು. ಇದರ ಪರಿಣಾಮ ಎನ್ನುವಂತೆ ಭಂಗಿ ಅವರಿಗೆ ಮರಳು ಮಾಫಿಯಾದ ರಕ್ತಸಿಕ್ತ ಮುಖದ ದರ್ಶನವಾಯಿತು.

ಹನುಮಂತ ಭಂಗಿ
ಹನುಮಂತ ಭಂಗಿ

‘ದಾಳಿಯಿಂದ ನಾನು ಹೇಗೋ ತಪ್ಪಿಸಿಕೊಂಡೆ. ಆ ಗುಂಪಿನಲ್ಲಿದ್ದ ಕೆಲವರಿಗೆ ನಾನು ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ವಿವಿಧ ಇಲಾಖೆಗಳಿಗೆ ದೂರು ನೀಡಿರುವುದು ತಿಳಿದಿತ್ತು. ಹಾಗಾಗಿ ನನ್ನನ್ನು ‘ಸುಮ್ಮನೆ ಬಿಡುವುದಿಲ್ಲ, ಅನುಭವಿಸುತ್ತೀಯಾ’ ಎಂದೆಲ್ಲಾ ಬೆದರಿಸಿದರು. ನನ್ನ ಮೇಲೆ ನಡೆದ ಹಲ್ಲೆಯ ಬಗ್ಗೆ ಪೊಲೀಸರಿಗೆ ದೂರು ನೀಡಲು ಕಂಬದಿಂದ ಕಂಬಕ್ಕೆ ಅಲೆದಾಡಿದೆ. ಕಾನ್‌ಸ್ಟೆಬಲ್‌ನಿಂದ ಉನ್ನತ ಅಧಿಕಾರಿಗಳವರೆಗೆ ಎಲ್ಲರೂ ಮರಳುದಂಧೆಯ ಫಲಾನುಭವಿಗಳು. ಹೀಗಾಗಿ ನನ್ನ ವಿರುದ್ಧವೇ ಒಂದಿಷ್ಟು ಸುಳ್ಳು ಪ್ರಕರಣಗಳನ್ನು ದಾಖಲಿಸಿ ‘ರೌಡಿ ಶೀಟರ್‌’ ಪಟ್ಟಿಗೆ ನನ್ನ ಹೆಸರನ್ನು ಸೇರಿಸಿಬಿಟ್ಟರು.

‘ನನ್ನ ಮೇಲೆ ದಾಳಿ ನಡೆದ ದಿನವೇ ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದೆ. ಆದರೆ ಠಾಣಾ ವ್ಯಾಪ್ತಿಯನ್ನೇ ಮುಂದುಮಾಡಿಕೊಂಡು ಪೊಲೀಸರು ಯಾವುದೇ ಕ್ರಮ ಜರುಗಿಸಲಿಲ್ಲ. ಅಪರಾಧ ನಡೆದ ಸ್ಥಳವು ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಕಂಡುಕೊಳ್ಳಲು ಪೊಲೀಸರಿಗೆ ಎರಡು ತಿಂಗಳು ಬೇಕಾಯಿತು. ಈವರೆಗೆ ಕೇವಲ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಉಳಿದವರನ್ನು ಪತ್ತೆಹಚ್ಚಲು ಯತ್ನಿಸುತ್ತಲೇ ಇದ್ದಾರೆ’ ಎಂದ ಹನುಮಂತಪ್ಪ ಭಂಗಿ ಅವರ ಮಾತಿನಲ್ಲಿ ವಿಷಾದ ತುಳುಕುತ್ತಿತ್ತು.

ಹನುಮಂತ ಭಂಗಿ ಅವರು ಹೀಗೆ ದುಷ್ಟರ ಕೆಂಗಣ್ಣಿಗೆ ಗುರಿಯಾಗಲು ಹಲವಾರು ಕಾರಣಗಳಿವೆ. ಮರಳುದಂಧೆ ಕುರಿತು ಇವರು ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌, ಅಕ್ರಮ ಮರಳು ಗಣಿಗಾರಿಕೆ ಕುರಿತು ಸಮಗ್ರ ವರದಿ ನೀಡುವಂತೆಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಮರಳುದಂಧೆಯ ವಿರುದ್ಧ ಹೋರಾಡಿದ ಒಂದೇ ಕಾರಣಕ್ಕೆ ಹನುಮಂತ ಅವರಿಗೆ ಪೊಲೀಸರು ‘ರೌಡಿ ಶೀಟರ್‌’ ಬಿರುದು ದಯಪಾಲಿಸಿದರು.

ಇದು ಕೇವಲ ಹನುಮಂತ ಅವರೊಬ್ಬರ ಅನುಭವ ಎಂದು ಅಂದುಕೊಳ್ಳಬೇಡಿ. ಕಂದಾಯ ಇಲಾಖೆ ಅಧಿಕಾರಿಗಳು, ತಹಶೀಲ್ದಾರರು, ಸಹಾಯಕ ಆಯುಕ್ತರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಐಎಎಸ್‌ ಅಧಿಕಾರಿಗಳ ಮೇಲೆ ಹಲವು ಬಾರಿ ಮರಳು ಮಾಫಿಯಾದವರಿಂದ ದಾಳಿಗಳು ನಡೆದಿವೆ.

2017ರ ಏಪ್ರಿಲ್‌ನಲ್ಲಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮತ್ತು ಉಪವಿಭಾಗಾಧಿಕಾರಿ ಶಿಲ್ಪಾ ನಾಗ್‌ ಅವರು ಹಲ್ನಾಡಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿ, ಆರು ಮಂದಿಯನ್ನು ಬಂಧಿಸಿದ್ದರು. ಉಡುಪಿ ಜಿಲ್ಲೆಯ ಕಂಡ್ಲೂರು ಗ್ರಾಮದಲ್ಲಿ ಮರಳು ಎತ್ತುತ್ತಿದ್ದ ಸ್ಥಳದ ಮೇಲೆಯೂ ಅವರು ದಾಳಿ ನಡೆಸಿದ್ದರು. ಆಗ ಮರಳು ಎತ್ತುತ್ತಿದ್ದವರು ಅಧಿಕಾರಗಳ ಮೇಲೆ ಮುಗಿಬಿದ್ದಿದ್ದರು. ಅಧಿಕಾರಿಗಳ ಮೇಲೆ ದಾಳಿ ನಡೆಸಿದ 14 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ನಮ್ಮ ದೇಶದಲ್ಲಿ ಮರಳುದಂಧೆಯ ಕೆಟ್ಟ ಪರಿಣಾಮಗಳನ್ನು ಅನುಭವಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಈ ವಿಚಾರದಲ್ಲಿ ನಮ್ಮ ರಾಜ್ಯವು ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳ ನಂತರದ ಸ್ಥಾನದಲ್ಲಿವೆ. 2015–2018ರ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಮರಳುದಂಧೆ ಸಂಬಂಧ 20,779 ಪ್ರಕರಣಗಳು ಮತ್ತು 9,599 ಎಫ್‌ಐಆರ್ ದಾಖಲಾಗಿತ್ತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಮರಳು ಮಾಫಿಯಾ ವಿರುದ್ಧ ಕ್ರಮ ಜರುಗಿಸಲು ಸತತ ಪ್ರಯತ್ನ ನಡೆಸುತ್ತಲೇ ಇದೆ. ಆದರೂ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ಮುಂದುವರೆದಿರುವುದೇಕೆ?

ಈ ಪ್ರಶ್ನೆಯನ್ನು ಸಾಮಾಜಿಕ ಕಾರ್ಯಕರ್ತರು ಮುಂದಿಟ್ಟಾಗ, ‘ಲೆಕ್ಕವಿಲ್ಲದಷ್ಟು ಹಣ ಹರಿದಾಡುತ್ತಿರುವುದೇ ಸಮಸ್ಯೆಗಳಿಗೆ ಮೂಲಕಾರಣ’ ಎಂಬ ಉತ್ತರ ದೊರೆಯಿತು. ಮರಳಿನ ಬೆಲೆಯ ಮೇಲೆ ಸರ್ಕಾರಕ್ಕೆ ಯಾವುದೇ ಹಿಡಿತವಿಲ್ಲ. ಲಾಭದ ಪ್ರಮಾಣ ಊಹೆಗೂ ನಿಲುಕದಷ್ಟು ದೊಡ್ಡದು. ಹೀಗಾಗಿಯೇ ಮರಳುದಂಧೆಯಲ್ಲಿ ರಾಜಕಾರಣಿಗಳು ಮತ್ತು ಅವರ ಆಪ್ತವಲಯಕ್ಕೆ ಸೇರಿದವರು ದೊಡ್ಡ ಸಂಖ್ಯೆಯಲ್ಲಿಯೇ ಸಕ್ರಿಯರಾಗಿದ್ದಾರೆ. ಇವರನ್ನು ಎದುರು ಹಾಕಿಕೊಳ್ಳಲು ಸಾಕಷ್ಟು ಧೈರ್ಯ ಬೇಕಾಗುತ್ತದೆ.

‘ದೊಡ್ಡಮಟ್ಟದ ಮೂಲಸೌಕರ್ಯ ಯೋಜನೆಗಳು ಮತ್ತು ನೀರಾವರಿ ಯೋಜನೆಗಳೊಂದಿಗೆ ಮರಳುದಂಧೆಗೆ ನೇರ ಸಂಬಂಧವಿದೆ. ಮರಳಿನ ಅಕ್ರಮ ವಹಿವಾಟಿನಿಂದಲೇ ಕಟ್ಟಡ ನಿರ್ಮಾಣ ಉದ್ಯಮವು ದೊಡ್ಡದಾಗಿ ಬೆಳೆದಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಕ್ರಮಕ್ಕೆ ಕಡಿವಾಣ ಹಾಕುವವರು ಯಾರು?

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹೊರಡಿಸಿರುವ ಅರಣ್ಯ ಮತ್ತು ಹವಾಮಾನ ಬದಲಾವಣೆ ಮಾರ್ಗಸೂಚಿಯ ಪ್ರಕಾರ ಮರಳು ಅಪ್ರಧಾನ ಖನಿಜ (ಮೈನರ್ ಮಿನರಲ್) ಎನಿಸಿಕೊಳ್ಳುತ್ತದೆ. ಮರಳು ಗಣಿಗಾರಿಕೆಯನ್ನು ನಿಯಂತ್ರಿಸುವ ಮತ್ತು ಅನುಮತಿ ನೀಡುವ ಜವಾಬ್ದಾರಿ ರಾಜ್ಯ ಸರ್ಕಾರಕ್ಕೆ ಸೇರುತ್ತದೆ. ಹೀಗಾಗಿಯೇ ಮೂಲಸೌಕರ್ಯ ಹಾಗೂ ನೀರಾವರಿ ಯೋಜನೆಗಳು ವ್ಯಾಪಕವಾಗಿ ಅನುಷ್ಠಾನಗೊಳ್ಳುತ್ತಿರುವ ರಾಜ್ಯಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಪ್ರಮಾಣ ವಿಪರೀತ ಎನಿಸುವಷ್ಟು ಹೆಚ್ಚು.

ಕಾವೇರಿ, ಹೇಮಾವತಿ, ತುಂಗಭದ್ರಾ, ಕೃಷ್ಣಾ, ಘಟಪ್ರಭಾ, ಭೀಮಾ, ವೇದಾವತಿ ಮತ್ತು ನೇತ್ರಾವತಿ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಪ್ರಮುಖ ನದಿಗಳು ಅಕ್ರಮ ಮರಳು ಗಣಿಗಾರಿಕೆಯ ಹೊಡೆತಕ್ಕೆ ತತ್ತರಿಸಿವೆ. ಹಲವು ಹೊಳೆಗಳು ಮತ್ತು ಕೆರೆಗಳು ಕುರೂಪಗೊಂಡಿವೆ. ರಾಜ್ಯದಲ್ಲಿ ಪ್ರತ್ಯೇಕ ಮರಳು ಗಣಿಗಾರಿಕೆ ನೀತಿಯೇನೋ ಇದೆ. ಆದರೂ ರಾಜ್ಯದಲ್ಲಿ ಮರಳು ಮಾಫಿಯಾ ಬಲಿಷ್ಠವಾಗಿ ಬೆಳೆಯುತ್ತಲೇ ಇದೆ.

‘ರಾಜ್ಯದಲ್ಲಿ 2016ರಿಂದಲೇ ಮರಳು ಗಣಿಗಾರಿಕೆ ನೀತಿ ಜಾರಿಯಾಯಿತು. ಈ ನೀತಿಯೇನೋ ಚೆನ್ನಾಗಿದೆ. ಆದರೆ ಅನುಷ್ಠಾನ ಮಾತ್ರ ಸರಿಯಾಗಿ ಆಗುತ್ತಿಲ್ಲ. ಈ ನಿಯಮಾವಳಿಗಳ ಪ್ರಕಾರ ತಾಲ್ಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಸಮಿತಿಗಳನ್ನು ರಚಿಸುವುದು ಕಡ್ಡಾಯ. ತಾಲ್ಲೂಕು ಮಟ್ಟದ ಸಮಿತಿಗಳು ಮರಳು ಎತ್ತಬಹುದಾದ ಬ್ಲಾಕ್‌ಗಳನ್ನು (ಸ್ಥಳಗಳನ್ನು) ಗುರುತಿಸಬೇಕು. ಜಿಲ್ಲಾ ಸಮಿತಿಗಳು ಹರಾಜು ಅಥವಾ ಟೆಂಡರ್ ಮೂಲಕ ಪರ್ಮಿಟ್ ನೀಡಬೇಕು. ಹೀಗೆ ಗುರುತಿಸಿದ ಎಲ್ಲಾ ಬ್ಲಾಕ್‌ಗಳು ಪರಿಸರ ಸಮಿತಿಯ ಅನುಮೋದನೆ ಪಡೆದುಕೊಂಡಿರಬೇಕು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪರ್ಮಿಟ್‌ನಲ್ಲಿ ಉಲ್ಲೇಖಿಸಿರುವ ನಿಯಮಗಳನ್ನು ಉಲ್ಲಂಘಿಸಿದರೆ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂ‌ತ್ರಣ)ಕಾಯ್ದೆಯ ಅನ್ವಯ ಕ್ರಮ ಜರುಗಿಸಲು ಸಾಧ್ಯವಿದೆ. ಆದರೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಪೊಲೀಸರು ಮರಳು ಗಣಿಗಾರಿಕೆಯನ್ನು ಗಂಭೀರ ಅಪರಾಧ ಎಂದು ಪರಿಗಣಿಸುವುದಿಲ್ಲ.

ರಾಯಚೂರು ಜಿಲ್ಲೆಯ ಮಾನ್ವಿ, ದೇವದುರ್ಗ ಮತ್ತು ಯಾದಗಿರಿ ಜಿಲ್ಲೆಯ ಶಹಪುರ ಮತ್ತು ಶೋರಾಪುರ ತಾಲ್ಲೂಕುಗಳ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳ ಸುಮಾರು 60 ಕಿ.ಮೀ. ವ್ಯಾಪ್ತಿಯ ದಂಡೆಯುದ್ದಕ್ಕೂ ಮರಳುದಂಧೆ ಅವ್ಯಾಹತವಾಗಿ ನಡೆಯುತ್ತಿದೆ. 2016ರಲ್ಲಿ ಮೂರು ಅಡಿ ಆಳ ಅಗೆಯಲು ಅನುಮತಿಸಿ, 20 ಬ್ಲಾಕ್‌ಗಳಿಗೆ ಪರ್ಮಿಟ್ ನೀಡಲಾಗಿತ್ತು. ಆದರೆ ಗುತ್ತಿಗೆದಾರರು 10ರಿಂದ 15 ಅಡಿ ಆಳದವರೆಗೂ ಅಗೆದಿದ್ದಾರೆ.ಪರಿಸ್ಥಿತಿ ಹೀಗಿರುವಾಗ ಕ್ರಮ ಜರುಗಿಸುವವರು ಯಾರು ಎಂಬುದೇ ಯಕ್ಷಪ್ರಶ್ನೆಯಾಗಿದೆ.

ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಈ ಗುತ್ತಿಗೆದಾರರೊಂದಿಗೆ ಕೈ ಜೋಡಿಸಿದ್ದಾರೆ ಎಂಬುದು ನಿರ್ವಿವಾದ. ಇತ್ತೀಚಿಗೆ ರಾಜ್ಯದ ವಿವಿಧೆಡೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 47,000 ಕ್ಯುಬಿಕ್‌ ಮೀಟರ್‌ನಷ್ಟು ಮರಳನ್ನು ಜಪ್ತಿ ಮಾಡಿ, ಕೋರ್ಟ್‌ ಆದೇಶದ ಮೇರೆಗೆ ಅದನ್ನು ₹3.80 ಕೋಟಿಗೆ ಮಾರಾಟ ಮಾಡಲಾಯಿತು. ಇಷ್ಟು ಅಗಾಧ ಪ್ರಮಾಣದ ಮರಳು ಸಂಗ್ರಹವಾಗುವವರೆಗೆ ನಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದರು?

’ದೂರು ಕೊಡುವುದನ್ನೇ ಬಿಟ್ಟುಬಿಟ್ಟಿದ್ದೇವೆ’

ಮರಳುದಂಧೆಯನ್ನು ಅಧಿಕಾರಿಗಳು ನಿರ್ವಹಿಸುತ್ತಿರುವ ರೀತಿಯ ಬಗ್ಗೆಯೂ ಸಾಮಾಜಿಕ ಹೋರಾಟಗಾರರಲ್ಲಿ ಆಕ್ಷೇಪಗಳಿವೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಭಟ್ಟರಹಳ್ಳಿ ‘ನಾವು ಈಗ ಅಕ್ರಮ ಮರಳು ಸಾಗಣೆ ಬಗ್ಗೆ ಅಧಿಕಾರಿಗಳಿಗೆ ದೂರು ನೀಡುವುದನ್ನೇ ನಿಲ್ಲಿಸಿದ್ದೇವೆ’ ಎಂದು ಬೇಸರದಿಂದ ನುಡಿಯುತ್ತಾರೆ.

ಮಲ್ಲಿಕಾರ್ಜುನ
ಮಲ್ಲಿಕಾರ್ಜುನ

‘ಮರಳುದಂಧೆಯ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದೆವು.ಆದರೆ ಈಗ ದೂರು ಕೊಡುವುದನ್ನು ನಿಲ್ಲಿಸಿದ್ದೇವೆ. ನಾವು ನಿಡುತ್ತಿದ್ದ ಮಾಹಿತಿಯು ಅಧಿಕಾರಿಗಳಿಗೆ ಹಣ ಮಾಡಿಕೊಳ್ಳಲು ಒಳ್ಳೇ ದಾರಿ ಎನಿಸಿಕೊಂಡಿತ್ತು. ಕಳೆದ ವಾರವಷ್ಟೇ ಎಲೆಕ್ಟ್ರಾನಿಕ್ ಸಾಕ್ಷಿ (ವಿಡಿಯೊ) ಸಮೇತ ಪೊಲೀಸರಿಗೆ ದೂರು ಕೊಟ್ಟಿದ್ದೆವು. ಆದರೂ ಪೊಲೀಸರು ಗಂಭೀರ ಸ್ವರೂಪದ ಅಪರಾಧ ಅಲ್ಲ (ನಾನ್ ಕಾಗ್ನಿಸಬಲ್ ಅಫೆನ್ಸ್) ಎಂದು ಪ್ರಕರಣ ದಾಖಲಿಸಿಕೊಂಡು ನಮ್ಮನ್ನು ವಾಪಾಸ್ ಕಳಿಸಿದರು. ನೈಸರ್ಗಿಕ ಸಂಪನ್ಮೂಲಗಳ ಕಳ್ಳತನವು ಗಂಭೀರ ಸ್ವರೂಪದ ಅಪರಾಧವಲ್ಲವೇ’ ಎನ್ನುವುದು ಮಲ್ಲಿಕಾರ್ಜುನ ಅವರ ಪ್ರಶ್ನೆ.

‘ಜನರ ಕಣ್ಣೊರೆಸಲು ಮಾತ್ರ ಮರಳು ಉಸ್ತುವಾರಿ ಸಮಿತಿಗಳನ್ನು ರಚಿಸಲಾಗುತ್ತದೆ. ಇವುಗಳು ಕೇವಲ ಕಾಗದದ ಮೇಲಷ್ಟೇ ಅಸ್ತಿತ್ವ ಹೊಂದಿವೆ.ಬಹುತೇಕ ಜನಪ್ರತಿನಿಧಿಗಳು ಮರಳುದಂಧೆಯಲ್ಲಿ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಶಾಮೀಲಾಗಿದ್ದಾರೆ. ತಮ್ಮ ಹಿಂಬಾಲಕರ ಪಡೆಗಳ ಮೂಲಕ ದಂಧೆಯನ್ನು ನಿಯಂತ್ರಿಸುತ್ತಾರೆ. ಹಣದ ಹರಿವು ನಿರಂತರವಾಗಿರಲು ಮರಳದಂಧೆಯೂ ಒಂದು ಮಾರ್ಗ ಎನಿಸಿಕೊಂಡಿದೆ. ಅಕ್ರಮವಾಗಿ ಮರಳು ಎತ್ತುವ ಮೂಲಕ ದೊಡ್ಡನದಿಗಳನ್ನು ಮತ್ತೆಂದೂ ಸರಿಪಡಿಸಲಾಗದಷ್ಟು ಹಾಳುಗೆಡವಿದ ದಂಧೆಕೋರರು ಇದೀಗ ಸಣ್ಣನದಿಗಳು, ತೊರೆಗಳು ಮತ್ತು ಕೆರೆಗಳತ್ತ ಕಣ್ಣು ಹಾಕಿದ್ದಾರೆ. ಮಧುಗಿರಿ ಜಿಲ್ಲೆಯಲ್ಲಿ ಜಯಮಂಗಲಿ ನದಿ, ಶಿರಾ ತಾಲ್ಲೂಕು ಹುಂಜಿನಾಳುಗ್ರಾಮದ ಸಮೀಪದ ಹಳ್ಳ, ಸುವರ್ಣಮುಖಿ ನದಿಗೆ ಸೇರುವ ಅಂಕಸಂದ್ರ ತೊರೆ ಈಗ ಮರಳುದಂಧೆಯ ಹೊಡೆತದಿಂದ ಸರಿಪಡಿಸಲಾಗದಷ್ಟು ಹಾಳಾಗಿವೆ’ ಎಂದು ಅವರು ವಿವರಿಸುತ್ತಾರೆ.

‘ಮರಳು ದಂಧೆಯಿಂದ ಶಿರಾ, ಚಿಕ್ಕನಾಯಕನಹಳ್ಳಿ ಮತ್ತು ಮಧುಗಿರಿ ತಾಲ್ಲೂಕುಗಳ ಸಾವಿರಾರು ಎಕರೆ ತೆಂಗು ಬೆಳೆಯುವ ಪ್ರದೇಶ ಹಾಗೂ ಹಲವು ನೀರಿನ ಮೂಲಗಳು ಹಾಳಾಗಿವೆ. ಒಂದಾನೊಂದು ಕಾಲದಲ್ಲಿ ಸ್ವಾವಲಂಬಿಗಳಾಗಿದ್ದ ರೈತರು ಇದೀಗ ಬೇಸಾಯ ತ್ಯಜಿಸಿ ಬೆಂಗಳೂರಿನಲ್ಲಿ ಕೆಲಸಗಳನ್ನು ಹುಡುಕುತ್ತಿದ್ದಾರೆ’ ಎಂದು ಮಲ್ಲಿಕಾರ್ಜುನ್ ವಿಷಾದಿಸುತ್ತಾರೆ.

ಪರಿಸರಸೂಕ್ಷ್ಮ ಪ್ರದೇಶಗಳಲ್ಲೂ ಮರಳುದಂಧೆ

ಪಶ್ಚಿಮಘಟ್ಟಗಳಲ್ಲಿ ಹರಿಯುವ ಶರಾವತಿ ನದಿಯು ಮರಳುದಂಧೆಗೆ ನಲುಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕುಗಳಲ್ಲಿ ಮರಳುದಂಧೆಗೆ ಹಲವು ಆಯಕಟ್ಟಿನ ಸ್ಥಳಗಳಿವೆ.

ಗಿರೀಶ್ ಆಚಾರ್
ಗಿರೀಶ್ ಆಚಾರ್

‘ಮರಳುದಂಧೆಯಲ್ಲಿ ತೊಡಗಿಸಿಕೊಳ್ಳಲು ನಿಮಗೆ ಒಂದು ಪರ್ಮಿಟ್ ಇದ್ದರೆ ಸಾಕು. ನೀವು ಏನು ಮಾಡಿದರೂ ಲೆಕ್ಕಕ್ಕೆ ಬರುವುದಿಲ್ಲ. ವೇಬ್ರಿಜ್ ಚೀಟಿಗಳ ಪರಿಶೀಲನೆ, ಸಿಸಿಟಿವಿ ಕಣ್ಗಾವಲು ಯಾವುದನ್ನೂ ಇಲ್ಲಿ ಕೇಳಬೇಡಿ. ಮರಳು ತುಂಬಿಕೊಂಡ ಲಾರಿಗಳು ಪೊಲೀಸ್ ಠಾಣೆಗಳ ಎದುರೇ ಸಂಚರಿಸುತ್ತವೆ. ಧೈರ್ಯವಾಗಿ ಚೆಕ್‌ಪೋಸ್ಟ್‌ಗಳನ್ನು ಹಾದು ಹೋಗುತ್ತವೆ. ಇದು ಪರಿಸರಸೂಕ್ಷ್ಮ ಪ್ರದೇಶ. ಇಲ್ಲಿ ಜೆಸಿಬಿ ಮತ್ತು ಹಿಟಾಚಿಯಂಥ ದೊಡ್ಡ ಯಂತ್ರಗಳನ್ನು ಬಳಸುವಂತಿಲ್ಲ. ಆದರೆ ನದಿದಂಡೆಗಳಿಂದ ಮರಳು ಎತ್ತಿ ಟ್ರಕ್‌ಗಳಿಗೆ ತುಂಬಲು ಯಂತ್ರಗಳ ಬಳಕೆ ಅವ್ಯಾಹತವಾಗಿ ಸಾಗಿದೆ’ ಎನ್ನುತ್ತಾರೆ ಶಿವಮೊಗ್ಗ ಜಿಲ್ಲೆ ಹೊಸನಗರದ ಹೋರಾಟಗಾರ ಗಿರೀಶ್ ಆಚಾರ್.

ಕಡಿವಾಣ ಹೇಗೆ?

ಮಾಜಿ ಉಪಲೋಕಾಯುಕ್ತರೂ ಆದ ನ್ಯಾಯಮೂರ್ತಿ ಸುಭಾಷ್‌ ಬಿ.ಆದಿ ಅವರು ಅಕ್ರಮ ಮರಳು ದಂಧೆ ನಡೆಯುತ್ತಿದ್ದ ಸ್ಥಳಗಳ ಮೇಲೆ ಹಲವು ಬಾರಿ ದಾಳಿಗಳನ್ನು ನಡೆಸಿದ್ದರು. ಮರಳುದಂಧೆ ನಿಯಂತ್ರಿಸುವಲ್ಲಿ ಸರ್ಕಾರದ ನ್ಯೂನತೆಗಳನ್ನು ಎತ್ತಿ ತೋರಿಸಿದ್ದರು.

ಸುಭಾಷ್ ಬಿ.ಆದಿ
ಸುಭಾಷ್ ಬಿ.ಆದಿ

‘ಮರಳು ಮಾರಾಟ ಲಾಭದಾಯಕ ವ್ಯಾಪಾರ. ಚಿಕ್ಕಮಗಳೂರು, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಫಿಲ್ಟರ್ ಮರಳು ಹಾವಳಿ 2015ರವರೆಗೆ ವಿಪರೀತ ಇತ್ತು. ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಗಳಿಗೆ ಹಲವು ಬಾರಿ ಹಠಾತ್ ದಾಳಿ ಮಾಡಿದೆವು. ಕಂದಾಯ, ಖನಿಜ ಮತ್ತು ಭೂವಿಜ್ಞಾನ ಹಾಗೂ ಪೊಲೀಸ್ ಇಲಾಖೆಗಳ ನಡುವೆ ಪರಸ್ಪರ ಸಮನ್ವಯ ಇಲ್ಲದಿರುವುದು ಹಲವು ಬಾರಿ ಅನುಭವಕ್ಕೆ ಬಂತು’ ಎಂದು ಸುಭಾಷ್ ಬಿ.ಆದಿ ನೆನಪಿಸಿಕೊಳ್ಳುತ್ತಾರೆ.

‘ರಾಜ್ಯದಲ್ಲಿ ಮರಳದಂಧೆಗೆ ಕಡಿವಾಣ ಹಾಕಲು ಖನಿಜ ಮತ್ತು ಭೂವಿಜ್ಞಾನ ಇಲಾಖೆಗೆ ಹೆಚ್ಚುವರಿ ಸಿಬ್ಬಂದಿ ಮತ್ತು ಅಧಿಕಾರ ಕೊಡಬೇಕು. ಭೂಮಿಯಿಂದ ಹೊರತೆಗೆದ ಮರಳನ್ನು ರಾಜ್ಯ ಸರ್ಕಾರವೇ ಡಿಪೊಗಳಲ್ಲಿ ಸಂಗ್ರಹಿಸಿ ಮಾರಾಟ ಮಾಡಬೇಕು. ಗುತ್ತಿಗೆದಾರರು ಅಥವಾ ಸಾಗಣೆದಾರರಿಗೆ ಮರಳು ಮಾರುವ ಅಧಿಕಾರ ಇರಬಾರದು’ ಎಂದು ಅವರ ಸಲಹೆ ಮಾಡುತ್ತಾರೆ.

ಅಕ್ರಮ ಮರಳುಗಣಿಗಾರಿಕೆ ನಿಯಂತ್ರಣ ಕುರಿತು ರಚಿಸಲಾಗಿದ್ದ ಹಲವು ಸಮಿತಿ ಮತ್ತು ಆಯೋಗಗಳಲ್ಲಿ ಕಾರ್ಯನಿರ್ವಹಿಸಿದ್ದವರು ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ.ಯು.ವಿ. ಸಿಂಗ್. ‘ಪರ್ಮಿಟ್ ಮತ್ತು ನಿಯಮಾವಳಿಗಳಲ್ಲಿ ಕೆಲ ಮಾರ್ಪಾಡುಗಳನ್ನು ಮಾಡುವ ಮೂಲಕ ಮರಳುದಂಧೆಗೆ ಕಡಿವಾಣ ಹಾಕಬಹುದು’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಯು.ವಿ.ಸಿಂಗ್
ಯು.ವಿ.ಸಿಂಗ್

‘ನಮ್ಮ ರಾಜ್ಯದಲ್ಲಿ ಐದು ವರ್ಷಗಳ ಅವಧಿಗೆ ಮರಳು ಗಣಿಗಾರಿಕೆ ಪರ್ಮಿಟ್ ನೀಡಲಾಗುತ್ತದೆ. ಮರಳು ಎತ್ತಲು ಗುತ್ತಿಗೆ ಪಡೆದವರು ಸಾಮಾನ್ಯವಾಗಿ ಮುಂಗಾರು ಆರಂಭವಾಗುವ ಮೊದಲು ನದಿದಂಡೆಗಳು ಅಥವಾ ನೀರು ಹರಿಯುವ ಸ್ಥಳಗಳ ಬದಿಗೆ ಆಳ ಕಾಲುವೆ ತೋಡುತ್ತಾರೆ. ಕಾಲುವೆಯಲ್ಲಿ ಸಂಗ್ರಹವಾದ ಮರಳನ್ನು ನಂತರದ ದಿನಗಳಲ್ಲಿ ಸಾಗಿಸಿ ಮಾರುತ್ತಾರೆ. ಈ ಪರ್ಮಿಟ್‌ನ ಅವಧಿಯನ್ನು ಐದು ವರ್ಷಗಳ ಬದಲಿಗೆ, ಏಳು ತಿಂಗಳಿಗೆ ಸೀಮಿತಗೊಳಿಸಬೇಕು ಎಂದು ನಾವು ಸಲಹೆ ಮಾಡಿದ್ದೆವು. ಹೀಗೆ ಮಾಡಿದರೆ ಮರಳುದಂಧೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಪ್ರತಿಬಾರಿ ಪರ್ಮಿಟ್ ಪಡೆದುಕೊಳ್ಳುವಾಗಲೂ ಪರಿಸರ ಇಲಾಖೆಯ ಅನುಮೋದನೆಯನ್ನು ಪಡೆದುಕೊಳ್ಳುವುದು ಕಡ್ಡಾಯಗೊಳಿಸಬೇಕು. ಆಗಮಾತ್ರ ಪರಿಸರವನ್ನು ಹಾಳುಮಾಡುವ ಮರಳು ಬ್ಲಾಕ್‌ಗಳ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಅವರು.

ರಾಮನಗರ ಜಿಲ್ಲೆಯಲ್ಲಿರುವ ಫಿಲ್ಟರ್ ಮರಳು ಘಟಕ
ರಾಮನಗರ ಜಿಲ್ಲೆಯಲ್ಲಿರುವ ಫಿಲ್ಟರ್ ಮರಳು ಘಟಕ

ನಿಯಮಗಳು ಮತ್ತು ಉಲ್ಲಂಘನೆಗಳು

ಮರಳು ಸಾಗಣೆ ನಿಯಂತ್ರಣಕ್ಕೆ ರಾಜ್ಯದಲ್ಲಿ ನಿಯಮಗಳೇನೋ ಸಾಕಷ್ಟಿವೆ. ಆದರೆ ಅನುಷ್ಠಾನ ಮಾತ್ರ ಸರಿಯಾಗಿ ಆಗುತ್ತಿಲ್ಲ. ಮರಳು ಸಾಗಣೆ ನಿಯಂತ್ರಣಕ್ಕೆ ಚಾಲ್ತಿಯಲ್ಲಿರುವ ನಿಯಮಗಳು ಹೀಗಿವೆ...

1. ಮರಳು ಸಾಗಣೆ ಮಾಡುಲು ಪರವಾನಗಿ ನೀಡುವ ಸಮಿತಿಯು ಮರಳು ಇರುವುದನ್ನು ಗುರುತಿಸಬೇಕುಹಾಗೂ ಪ್ರಾಕೃತಿಕವಾಗಿ ಮರಳು ಪುನಃ ಆ ಸ್ಥಳದಲ್ಲಿ ಸಂಗ್ರಹವಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು.

2. ಲೋಕೋಪಯೋಗಿ ಇಲಾಖೆಯು ಮರಳು ಗಣಿಗಾರಿಕೆ, ಸಾಗಾಣೆ ಮತ್ತು ಶೇಖರಣೆಯನ್ನು ತಡೆಗಟ್ಟಲು ಆಡಳಿತ ಕಚೇರಿಯನ್ನು ಸ್ಥಾಪಿಸಬೇಕು. ಅದರಲ್ಲಿ ಕಂಪ್ಯೂಟರ್‌ ಸೌಲಭ್ಯಇರಬೇಕು.

3. ಲೋಕೋಪಯೋಗಿ ಇಲಾಖೆಯು ಅಕ್ರಮ ಮರಳು ಸಾಗಾಣೆತಡೆಗಟ್ಟಲು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಬೇಕು.

4. ಮರಳು ಸಾಗಣೆ ಬಗ್ಗೆ ತಿಳಿದುಕೊಳ್ಳಲು, ಮರಳು ಸಾಗಿಸುವ ಎಲ್ಲಾ ವಾಹನಗಳಿಗೂ ಜಿಪಿಎಸ್‌/ಆರ್‌ಎಫ್‌ಐಡಿ ಅಳವಡಿಸಬೇಕು.

5. ಕರಾವಳಿಯಲ್ಲಿ ಮರಳು ತೆಗೆಯಲುಜೆಸಿಬಿ / ಅಗೆಯುವ ಯಂತ್ರಗಳು ಮತ್ತು ಯಾತ್ರೀಕೃತದೋಣಿಗಳನ್ನು ಬಳಸುವಂತಿಲ್ಲ.

ವಾಸ್ತವ ಹೀಗಿದೆ

1. ಪರವಾನಗಿ ಪಡೆದವರು ಸ್ವೇಚ್ಛೆಯಿಂದ ವರ್ತಿಸುತ್ತಾರೆ.ಪರವಾನಗಿ ಅವಧಿ ಮುಗಿದ ನಂತರವೂ ಮರಳು ದಂಧೆ ಅವ್ಯಾಹತವಾಗಿ ಮುಂದುವರಿಯುತ್ತದೆ. ಅಲಾಟ್ ಆಗಿರುವ ಬ್ಲಾಕ್‌ಗಳನ್ನು ಲೆಕ್ಕಿಸದೆ ಎಲ್ಲೆಂದರಲ್ಲಿಮರಳು ಎತ್ತುತ್ತಾರೆ.

2. ಮರಳು ದಂಧೆಯ ಬಗ್ಗೆ ಗಮನವಿಡುವ, ಸೌಲಭ್ಯವಿರುವ ಕಚೇರಿಗಳು ಇಲ್ಲ. ಮರಳು ಸಾಗಣೆ ಲೆಕ್ಕಹಾಕಲು ಕಂಪ್ಯೂಟರೀಕರಣಗೊಂಡ ವೇ–ಬ್ರಿಜ್‌ ವ್ಯವಸ್ಥೆಯು ಇಲ್ಲ.

3. ಹಾಲಿ ಚಾಲ್ತಿಯಲ್ಲಿರುವ ಚೆಕ್‌‍ಪೋಸ್ಟ್‌ಗಳು ಕಣ್ಣಿದ್ದು ಕುರುಡಾಗಿವೆ. ಹಫ್ತಾ ಸಂಗ್ರಹಣೆಗೆ ಮೀಸಲಾಗಿವೆ. ನಿಯಮಗಳ ಉಲ್ಲಂಘನೆಯನ್ನೂ ಪರಿಗಣಿಸುತ್ತಿಲ್ಲ.

4. ಜಿಪಿಎಸ್‌ ಅಳವಡಿಸಿರುವ ವಾಹನಗಳು ಕೆಲ ಜಿಲ್ಲೆಗಳಲ್ಲಿ ಸಂಚರಿಸುತ್ತಿವೆ. ಆದರೆ ಹಲವೆಡೆ ಈ ನಿಯಮ ಪಾಲನೆಯಾಗುತ್ತಿಲ್ಲ. ದಾಖಲೆಗಳಲ್ಲಿ ಕೊಟ್ಟಿರುವ ಸಂಖ್ಯೆಯಿರುವ ವಾಹನಗಳ ಬದಲಿಗೆ ಬೇರೆ ಲಾರಿಗಳನ್ನು ಮರಳು ಸಾಗಣೆಗೆ ಬಳಸಲಾಗುತ್ತಿದೆ.

5. ಕರಾವಳಿ ಸೇರಿದಂತೆ ಹಲವೆಡೆ ಮರಳು ಎತ್ತಲು ಯಂತ್ರಗಳನ್ನು ಬಳಸಲಾಗುತ್ತಿದೆ.

ಭಾಗ–2

ಕರಾವಳಿಯಲ್ಲಿ ನದಿಗಳ ಒಡಲು ಬಗೆದು ದೋಚಿರುವ ಮರಳು ಮತ್ತೆ ಸಂಗ್ರಹವಾಗಲು 5000 ವರ್ಷಗಳೇ ಬೇಕು

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಶಕಗಳಿಂದ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಪರಿಸರದ ಮೇಲೆ ಸರಿಪಡಿಸಲಾರದಷ್ಟು ಹಾನಿ ಮಾಡಿದೆ ಎಂದುಪರಿಸರವಾದಿಗಳು ಮತ್ತು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ನೇತ್ರಾವತಿ, ಫಲ್ಗುಣಿ, ಸೀತಾ, ಸ್ವರ್ಣ ಹಾಗೂ ಪಂಚಗಂಗಾವಳಿನದಿದಡಗಳಲ್ಲಿ ಸಾಗಿರುವ ಅನಿಯಂತ್ರಿತ ಮರಳು ಗಣಿಗಾರಿಕೆ ಜಲಚರಗಳ ಮೇಲೆ ಪರಿಣಾಮ ಬೀರುವುದರೊಂದಿಗೆನದಿಗಳನ್ನು ಹಾದಿತಪ್ಪುವಂತೆ ಮಾಡಿದೆ.

ಸಾಮಾನ್ಯವಾಗಿ ಮೀನುಗಾರರು ಸಾಂಪ್ರದಾಯಿಕ ರೀತಿಯಲ್ಲಿ ಮರಳು ಹೊರತೆಗೆಯುವ ಕಾರ್ಯಗಳನ್ನು ನಡೆಸುತ್ತಾರೆ. ಆದರೆ, ರಾಜ್ಯ ಮತ್ತು ನೆರೆ ರಾಜ್ಯಗಳ ಪ್ರಮುಖ ನಗರಗಳಲ್ಲಿ ಮರಳಿಗಾಗಿ ಹೆಚ್ಚುತ್ತಿರುವ ಬೇಡಿಕೆ ಕರಾವಳಿ ಭಾಗದಲ್ಲಿ ದೊಡ್ಡದೊಂದು ಅನಾಹುತವನ್ನೇ ಸೃಷ್ಟಿಸಿದೆ. ಬೃಹತ್‌ ದೋಣಿಗಳು, ಭೂಮಿ ಬಗೆಯುವ ಬೃಹತ್‌ ಯಂತ್ರಗಳು ನಿರಂತರ ಮರಳು ಬಗೆಯುವ ಕಾರ್ಯದಲ್ಲಿ ತೊಡಗಿವೆ. ಇದರಿಂದಾಗಿ ಕರಾವಳಿ ಭಾಗದ ಅತಿ ಸೂಕ್ಷ್ಮ ಪರಿಸರ ವ್ಯವಸ್ಥೆಯ ಕೊಂಡಿ ಕಳಚುವಂತಾಗಿದೆ. ಮರಳು ಬಗೆಯುವ ಕಾರ್ಯಕ್ಕಾಗಿ ಗುತ್ತಿಗೆದಾರರು ಅತಿ ಕಠಿಣ ಲೋಹದ ಉಪಕರಣಗಳನ್ನು ಬಳಸುತ್ತಿದ್ದು, 15–25 ಅಡಿಗಳಷ್ಟು ಕಂದಕ ಕೊರೆಯುತ್ತಿದ್ದಾರೆ. ಈ ಕಾರ್ಯದಲ್ಲಿ ನಿಯೋಜನೆಗೊಂಡಿರುವವ ಪೈಕಿ ಶೇ 90ರಷ್ಟು ಕಾರ್ಮಿಕರು ಉತ್ತರ ಭಾರತದವರಾಗಿದ್ದಾರೆ.

ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌)ದ ನಿಯಮಾವಳಿಗಳಿದ್ದರೂ ಸಹ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಮರುಳು ಗಣಿಗಾರಿಕೆಗಳಲ್ಲಿ ಶೇ 75ರಷ್ಟು ಅಕ್ರಮವಾದುದು ಎಂದು ಸ್ಥಳೀಯ ಪರಿಸರ ಹೋರಾಟಗಾರರು ಹೇಳುತ್ತಾರೆ.'ಅತಿಯಾಗಿ ಮರಳು ಹೊರ ತೆಗೆಯುದುನದಿಯ ಸಹಜ ಹರಿಯುವಿಕೆಯ ದುಷ್ಪರಿಣಾಮ ಉಂಟುಮಾಡುತ್ತದೆ. ನದಿಯ ಹರಿಯುವಿಕೆಯಲ್ಲಿ ಆಗುವ ಯಾವುದೇ ವ್ಯತ್ಯಾಸದಿಂದ ನದಿತೀರಗಳಲ್ಲಿ ಕೊರೆತ ಉಂಟಾಗುತ್ತದೆ.ಮುಂಗಾರಿನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗುತ್ತದೆ. ನದಿಪಾತ್ರಗಳಲ್ಲಿ ಮರಳಿನ ಪ್ರಮಾಣ ಕಡಿಮೆಯಾಗುವುದರಿಂದ ನದಿಯ ಆಳ ಮತ್ತು ವಿಸ್ತಾರದಲ್ಲಿ ಹೆಚ್ಚಳವಾಗುತ್ತದೆ. ಇದರಿಂದ ನದಿ ನೀರಿನೊಂದಿಗೆ ಲವಣಯುಕ್ತ ನೀರು ಸೇರುವ ಸಂಭವ ಅಧಿಕ’ ಎನ್ನುತ್ತಾರೆಸೂರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ ಅಪ್ಲೈಡ್‌ ಮೆಕಾನಿಕ್ಸ್‌ ಮತ್ತು ಹೈಡ್ರಾಲಿಕ್ಸ್‌ ವಿಭಾಗದಲ್ಲಿ ಪ್ರೊಫೆಸರ್‌ ಆಗಿದ್ದ ಡಾ.ಎಸ್‌.ಜಿ.ಮಯ್ಯ.

ಮಿತಿಮೀರಿದಮರಳು ಗಣಿಗಾರಿಕೆಯ ನೇರ ಪರಿಣಾಮವನ್ನು ಮಂಗಳೂರಿನ ಹೊರವಲಯದ ’ಪಾವೂರು ಉಳಿಯ ಕುದ್ರು’ ನಿವಾಸಿಗಳು ಎದುರಿಸುತ್ತಿದ್ದಾರೆ. ಇಲ್ಲಿನ ಬಹುತೇಕ ಜನರ ಜೀವನ ನಿರ್ವಹಣೆಗೆ ಮೀನುಗಾರಿಕೆ ಮತ್ತು ಬೀಡಿ ಕಟ್ಟುವ ಕಾರ್ಯವೇ ಆಧಾರ. ಆದರೆ, ಅತಿಯಾದ ಮರಳು ಗಣಿಗಾರಿಕೆ ಮತ್ತು ಪರಿಸರದಲ್ಲಿ ಉಂಟಾಗಿರುವ ಅಸಮತೋಲನದಿಂದಾಗಿ ಮೀನುಗಾರಿಕೆ ಗಣನೀಯವಾಗಿ ಕುಸಿದಿದೆ. ಇಲ್ಲಿನ ಸ್ಥಿತಿ ಮೀನುಗಾರರನ್ನು ಗ್ರಾಮದಿಂದ ಹೊರಗೆ ಪರ್ಯಾಯ ಕೆಲಸಗಳನ್ನು ಕಂಡುಕೊಳ್ಳುವ ಅನಿವಾರ್‍ಯತೆಗೆ ದೂಡಿದೆ.

ನಿಯಮಗಳ ಪ್ರಕಾರ ಪರವಾನಗಿ ಹೊಂದಿರುವವರು ನಿಗದಿತ ವಲಯದಲ್ಲಿ ದೈಹಿಕ ಶ್ರಮದ ಮೂಲಕಮರಳು ತೆಗೆಯಬಹುದು. ಆದರೆ ಜಿಲ್ಲೆಯಲ್ಲಿ ಬೃಹತ್‌ ಯಂತ್ರಗಳು, ಭೂಮಿ ಬಗೆಯುವ ಯಂತ್ರಗಳನ್ನು ಮರಳು ಗಣಿಗಾರಿಕೆಗೆ ಬಳಸಲಾಗುತ್ತಿದೆ ಎಂದು ಮರಳು ತೆಗೆಯುವ ಪ್ರಕ್ರಿಯೆಯ ವಿವರ ನೀಡುತ್ತಾರೆ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್‌)ದ ಪ್ರಧಾನ ಕಾರ್ಯದರ್ಶಿ ಶಶಿಧರ್‌ ಶೆಟ್ಟಿ.

’ಬೆಳಗ್ಗಿನ ಸಮಯದಲ್ಲಿ ಮಾತ್ರ ಮರಳು ಗಣಿಗಾರಿಕೆ ನಡೆಸಬೇಕು, ಸೇತುವೆಗಳ ಸುತ್ತಲಿನ 500 ಮೀಟರ್‌ ಆವರಣದಲ್ಲಿ ಮರಳು ತೆಗೆಯುವಿಕೆಗೆ ನಿಷೇಧವಿದೆ. ಆದರೆ ಈ ಯಾವ ನಿಯಮಗಳೂ ಇಲ್ಲಿ ಪಾಲನೆಯಾಗುತ್ತಿಲ್ಲ.ದೋಣಿಗಳು ನೀರಿನಲ್ಲಿ ಸಾಗಲು ಅನುಕೂಲವಾಗುವ ನಿಟ್ಟಿನಲ್ಲಿ ಮಾತ್ರ ನದಿ ದಡಗಳಲ್ಲಿ ಮರಳು ತೆಗೆಯಲು ಅವಕಾಶವಿದೆ.ಯಂತ್ರ ವಾಹನಗಳ ಸಾಗಣೆಗೆ ಅನುಕೂಲವಾಗುವ ರೀತಿಯಲ್ಲಿ ಅಡ್ಡವಿರುವ ಮರಗಳನ್ನೂ ನೆಲಕ್ಕುರುಳಿಸಿ ಮರಳು ಸಾಗಣೆ ಸುಲಭಗೊಳಿಸಕೊಳ್ಳಲಾಗುತ್ತಿದೆ. ಕೆಲಜಾತಿಯ ಮೀನುಗಳುನದಿದಡಗಳ ಸಮೀಪ ಮೊಟ್ಟೆಯಿಟ್ಟಿರುತ್ತವೆ, ಮುಂಗಾರಿನಲ್ಲಿಮರಳು ಗಣಿಗಾರಿಕೆ ನಡೆಸುವುದರಿಂದ ಜಲಚರಗಳ ಬೆಳವಣಿಗೆಗೂ ತೊಂದರೆಯಾಗುತ್ತದೆ. ನದಿಯಲ್ಲಿ ಹೇರಳವಾಗಿ ದೊರೆಯುತ್ತಿದ್ದ ಚಿಪ್ಪಿನ ಹುಳು ಅಥವಾ ಬಳಚು (ತುಳುವಿನಲ್ಲಿ ಮಾರ್ವಾಯ್‌) ಹಾಗೂ ಕೆಲವು ರೀತಿಯ ನಳ್ಳಿಗಳ ಪ್ರಮಾಣದಲ್ಲಿ ಕ್ರಮೇಣ ಇಳಿಕೆಯಾಗಿದೆ.ಬಂಟ್ವಾಳ, ಬೆಳ್ತಂಗಡಿಮತ್ತು ಮಂಗಳೂರು ತಾಲ್ಲೂಕುಗಳ 39 ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಲೋಕಾಯುಕ್ತ ಪೊಲೀಸರು ಪ್ರಸ್ತಾಪಿಸಿದ್ದರೂ ಈವೆರೆಗೂ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಶಶಿಧರ್‌ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಇತ್ತೀಚೆಗೆ ಉಂಟಾದ ಬಂಟ್ವಾಳದ ‌ಮೂಲಾರಪಟ್ಟಣ ಸೇತುವೆ ಕುಸಿತಕ್ಕೆ ಅಕ್ರಮ ಮರಳು ಗಣಿಗಾರಿಕೆಯೇ ಕಾರಣ ಎಂದು ಪರಿಸರವಾದಿಗಳು ಹೇಳುತ್ತಿದ್ದು, ಅಧಿಕೃತವಾಗಿ ಈ ಕುರಿತು ಘೋಷಣೆಯಾಗಿಲ್ಲ.ಮೀನುಗಳ ಸಂತಾನೋತ್ಪತ್ತಿ ಕ್ರಿಯೆಗೆ ಅನುಕೂಲವಾಗುವ ನಿಟ್ಟಿನಲ್ಲಿಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ತೆಗೆಯುವುದಕ್ಕೆ 2018ರ ಜೂನ್‌ 12ರಿಂದ ನಿಷೇಧ ಹೇರಲಾಗಿದೆ. ಇದೇ ವರ್ಷ ಜನವರಿಯಿಂದ ಈವರೆಗೂ 19 ಅಕ್ರಮ ಮರಳು ಗಣಿಗಾರಿಕೆ ಪ್ರದೇಶಗಳ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನದಿ ಪಾತ್ರದಲ್ಲಿ 1 ಇಂಚು ಮರಳು ಸಂಗ್ರಹವಾಗಲು, ಯಾವುದೇ ಅಡಚಣೆಗಳಿಲ್ಲದೆ ಒಂಬತ್ತು ವರ್ಷ ನಿರಂತರವಾಗಿ ನದಿಯ ಹರಿಯುವಿಕೆ ಇರಬೇಕಾಗುತ್ತದೆ. ಈಗಾಗಲೇ ನದಿ ದಡಗಳಿಂದ ಬಗೆಯಲಾಗಿರುವ ಮರಳು ಪುನಃ ಸಂಗ್ರಹಗೊಳ್ಳಲು 5,000 ವರ್ಷಗಳೇ ಬೇಕಾಗುತ್ತವೆ.

ಭಾಗ –3

ಮರಳಿನ ಲಭ್ಯತೆ ಕಡಿಮೆಯಾದ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪರ್ಯಾಯ ವಸ್ತುಗಳ ಬಳಕೆ ಆರಂಭವಾಗಿದೆ (ಚಿತ್ರ: ಅನುಪ್ ತಿಪ್ಪೆಸ್ವಾಮಿ)
ಮರಳಿನ ಲಭ್ಯತೆ ಕಡಿಮೆಯಾದ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪರ್ಯಾಯ ವಸ್ತುಗಳ ಬಳಕೆ ಆರಂಭವಾಗಿದೆ (ಚಿತ್ರ: ಅನುಪ್ ತಿಪ್ಪೆಸ್ವಾಮಿ)

ಭೂಮಿಯ ಒಡಲಲ್ಲಿ ಮರಳು ಖಾಲಿ, ಮುಂದೇನು ಪರ್ಯಾಯ?

ಮನೆ ಅಥವಾವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗುವವರಿಗೆ ಮರಳಿನ ಲಭ್ಯತೆಯೇ ದೊಡ್ಡ ಸಮಸ್ಯೆ. ಮರಳಿನ ಕೊರತೆಯಿಂದಾಗಿ ಬೆಲೆ ದುಬಾರಿಯಾಗಿದೆ. ಮುಂಜಾನೆ ಅಥವಾ ತಡರಾತ್ರಿ ಮಾತ್ರ ಮರಳು ಸಾಗಣೆ ಮಾಡುತ್ತಿದ್ದಾರೆ. ಗುತ್ತಿಗೆದಾರರು ಹಾಗೂ ಬಿಲ್ಡರ್‌ಗಳಿಗೆ ಮರಳು ಸಾಗಣೆದಾರರೊಂದಿಗೆ ಸಂಪರ್ಕವಿರುತ್ತದೆ. ಆದರೆ ಕಟ್ಟಡ ನಿರ್ಮಾಣಕ್ಕಾಗಿ ಹಣ ವ್ಯಯಿಸುವ ಜನರಿಗೆ ಮರಳಿನ ವಾಸ್ತವ ಬೆಲೆ, ಲಭ್ಯತೆ ಮತ್ತು ಅದರ ಗುಣಮಟ್ಟದ ಬಗ್ಗೆ ತಿಳಿದಿರುವುದಿಲ್ಲ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಮರಳಿಗೆ ಕೊರತೆಯಿಲ್ಲ. ‘ಇಲ್ಲಿಯವರೆಗೂ ಈ ಕುರಿತು ನನಗೆ ಯಾರೊಬ್ಬರೂ ದೂರು ನೀಡಿಲ್ಲ.ಲೋಕೋ‍ಪಯೋಗಿ ಇಲಾಖೆಯು ಎಂದೂ ಮರಳು ಕೊರತೆ ಬಗ್ಗೆ ಮಾತನಾಡಿಲ್ಲ. ಕಟ್ಟಡ ನಿರ್ಮಾಣ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮರಳು ಸಾಗಣೆ ಆದ್ಯತೆ ಪಡೆದುಕೊಳ್ಳುತ್ತಿದೆ. ಅನಧಿಕೃತ ಮರಳು ಗಣಿಗಾರಿಕೆ ತಡೆಯಲು ನಿಯಮಿತವಾಗಿ ದಾಳಿಗಳನ್ನು ನಡೆಸುತ್ತಿದ್ದೇವೆ’ ಎಂದು ಇಲಾಖೆಯ ನಿರ್ದೇಶಕ ಎನ್‌.ಎಸ್‌. ಪ್ರಸನ್ನ ಕುಮಾರ್‌ ತಿಳಿಸಿದರು.

ಮರಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹಾಗೂ ಪರಿಸರ ಹಾನಿಯನ್ನು ತಪ್ಪಿಸಲು ರಾಜ್ಯ ಸರ್ಕಾರವು ಕೃತಕ ಮರಳು (ಎಂ–ಸ್ಯಾಂಡ್‌) ಬಳಕೆಯನ್ನು ಪ್ರೋತ್ಸಾಹಿಸುತ್ತಿದೆ. ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿದ 2017–18ರ ‘ಕರ್ನಾಟಕ ಆರ್ಥಿಕ ಸಮೀಕ್ಷೆ’ಯ ಪ್ರಕಾರ ಕೃತಕ ಮರಳು ಬಳಕೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ‘ಪರಿಸರ ಸಮತೋಲನವನ್ನು ಕಾಪಾಡಲು ಮತ್ತು ಅಂತರ್ಜಲದ ಆಗುವ ಪ್ರತಿಕೂಲ ಪರಿಣಾಮವನ್ನು ತಡೆಗಟ್ಟಲು ಸರ್ಕಾರವು ನದಿ ಮರಳಿಗೆ ಪರ್ಯಾಯವಾಗಿ ಕೃತಕ ಮರಳು ಉತ್ಪಾದಿಸಲು ಕ್ರಮಗಳನ್ನು ಕೈಗೊಂಡಿದೆ. 2017–18ರಲ್ಲಿ ಒಟ್ಟು 18 ಜಿಲ್ಲೆಗಳಲ್ಲಿ ಕೃತಕ ಮರಳು ತಯಾರಿಸಲಾಗಿದ್ದು, ವಾರ್ಷಿಕ 3 ಕೋಟಿ ಮೆಟ್ರಿಕ್‌ ಟನ್‌ ಮರಳು ತಯಾರಿಸುವ ಗುರಿ ಹೊಂದಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹೀಗಿದ್ದಾಗಲೂ ಕೃತಕ ಮರಳಿನ ಗುಣಮಟ್ಟದ ಬಗ್ಗೆ ಪ್ರಶ್ನೆ ಉದ್ಭವವಾಗುವುದು ಸಹಜ. ಇಂತಹ ಆರೋಪಗಳನ್ನು ತಳ್ಳಿಹಾಕುವ ಪ್ರಸನ್ನ ಕುಮಾರ್‌, ‘ನದಿಗಳಿಂದ ಮರಳು ತೆಗೆದು ಮಾರುವುದನ್ನೇ ದಂಧೆ ಮಾಡಿಕೊಂಡವರಿಂದ ಇಂತಹ ವದಂತಿಗಳು ಹರಿದಾಡುತ್ತಿವೆ. ಕೃತಕ ಮರಳಿನ ಗುಣಮಟ್ಟ ಸರಿಯಿಲ್ಲ ಎನ್ನುವುದು ತಪ್ಪು. ಈ ಮರಳನ್ನು ಬಳಸಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಹಲವಾರು ಪ್ರದೇಶಗಳಿಗೆ ನಾನು ಸ್ವತಃ ಭೇಟಿ ನೀಡಿದ್ದೇನೆ. ಅಲ್ಲಿ ಬಳಸುತ್ತಿರುವ ಮರಳು ಉತ್ತಮ ಗುಣಮಟ್ಟದ ಬಗ್ಗೆ ಯಾರಿಗೂ ತಕರಾರು ಇಲ್ಲ’ ಎನ್ನುತ್ತಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮುಂದೆ ಮೂರು ಮುಖ್ಯ ಸವಾಲುಗಳಿವೆ. ನದಿಪಾತ್ರಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟುವುದು, ಕೃತಕ ಮರಳು ಬಳಕೆಯನ್ನು ಪ್ರೋತ್ಸಾಹಿಸುವುದು ಮತ್ತು ನದಿಯ ಮಧ್ಯಭಾಗದಲ್ಲಿ ಮರಳು ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸುವುದು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಈಗಾಗಲೇ ನದಿಗಳ ಮಧ್ಯಭಾಗದಲ್ಲಿ ಮರಳು ಗಣಿಯನ್ನು ನಿಷೇಧಿಸಿದೆ. ನದಿಗಳ ಮಧ್ಯಭಾಗದಿಂದ ಮರಳು ತೆಗೆಯುವವರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.

ಕಳೆದ 30 ವರ್ಷಗಳಿಂದ ಕಟ್ಟಡ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರ್ಕಿಟೆಕ್ಟ್ ಲಕ್ಷ್ಮಿ ಕೇಶವ ಅವರ ಪ್ರಕಾರ, ‘ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ನದಿಯ ಮರಳು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಕಟ್ಟಡಗಳನ್ನು ನಿರ್ಮಿಸುವವರು ಅನಿವಾರ್ಯವಾಗಿ ಎಂ–ಸ್ಯಾಂಡ್ ಬಳಕೆಗೆ ಮುಂದಾಗಿದ್ದಾರೆ.

‘ಉತ್ತಮ ಗುಣಮಟ್ಟದ ನೈಸರ್ಗಿಕ ಮರಳು ಲಭ್ಯವಿಲ್ಲ. ಕಳೆದ 2–3 ವರ್ಷಗಳಿಂದ ಪೂರೈಕೆಯಾಗುತ್ತಿರುವ ನದಿಮರಳಿನ ಗುಣಮಟ್ಟ ಕಳಪೆಯಾಗಿದೆ. ಮರಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮರಳು ಪೂರೈಕೆದಾರರು ನದಿಮರಳಿನೊಂದಿಗೆ ಕೃತಕ ಮರಳನ್ನು ಬೆರೆಸುತ್ತಿದ್ದಾರೆ. ಕೆಲವೊಮ್ಮೆ ಫಿಲ್ಟರ್ ಮರಳನ್ನು ಪೂರೈಸುತ್ತಾರೆ. ಹಾಗಾಗಿಯೇ ನಾವು ಸಂಪೂರ್ಣವಾಗಿ ನದಿ ಮರಳು ಬಳಕೆಯನ್ನು ನಿಲ್ಲಿಸಿ ಕೃತಕ ಮರಳನ್ನು ಉಪಯೋಗಿಸುತ್ತಿದ್ದೇವೆ. ಇದರಲ್ಲಿ ‘ಸಿಂಗಲ್‌ ವಾಷ್‌’ ಮತ್ತು ‘ಡಬಲ್‌ ವಾಷ್‌’ ಎಂಬ ಎರಡು ಗುಣಮಟ್ಟದ ಮರಳು ಲಭ್ಯ. ಸಿಂಗಲ್ ವಾಷ್ ಕಾಂಕ್ರಿಟಿಂಗ್ ಕೆಲಸಕ್ಕೆ ಸೂಕ್ತ, ಡಬಲ್ ವಾಷ್ ಪ್ಲಾಸ್ಟರಿಂಗ್‌ ಕೆಲಸಕ್ಕೆ ಸೂಕ್ತ’ ಎನ್ನುವುದು ಅವರ ವಿವರಣೆ.

‘ಮರಳಿನ ಲಭ್ಯತೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದಾಗಿ ಕಟ್ಟಡ ನಿರ್ಮಾಣ ಉದ್ಯಮವು ಪರ್ಯಾಯ ಪರಿಕರಗಳತ್ತ ಗಮನ ಹರಿಸುತ್ತಿದೆ’ ಎನ್ನುತ್ತಾರೆ ಕ್ರೆಡಾಯ್‌ನ (ಪ್ರೈವೇಟ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ) ಉಪಾಧ್ಯಕ್ಷರಾದ ಎಸ್.ಸುರೇಶ್ ಹರಿ.

ಸುರೇಶ್ ಹರಿ
ಸುರೇಶ್ ಹರಿ

‘ಅಗತ್ಯವಿರುವಷ್ಟು ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಮರಳು ಈಗ ಸಿಗುತ್ತಿಲ್ಲ. ಆಮದು ಮಾಡಿಕೊಂಡ ಮರಳಿನ ಬೆಲೆಯು (ಮಲೇಷ್ಯಾ ಮರಳು) ದುಬಾರಿ. ಸರ್ಕಾರವು ಮರಳು ನೀತಿಯನ್ನು ಉದಾರಗೊಳಿಸಬೇಕು ಎನಿಸುತ್ತದೆ. ಮರಳು ಬಳಕೆಯನ್ನು ಮಿತಗೊಳಿಸಲು ಲೋಹದ ಬಳಕೆಯನ್ನು ಹೆಚ್ಚಿಸುವ ಸಾಧ್ಯತೆಯನ್ನು ನಿರ್ಮಾಣ ಉದ್ಯಮ ಪರಿಶೀಲಿಸುತ್ತಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳುವರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯು ನಿರೀಕ್ಷೆಯಂತೆ ಯಶಸ್ವಿಯಾಗಲಿಲ್ಲ. ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳುವ ಸರ್ಕಾರಿ ಸಾಮ್ಯದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) 8,000 ಟನ್‌ ಮರಳನ್ನು ಆಮದು ಮಾಡಿಕೊಂಡಿದ್ದು, 4,000 ಟನ್‌ ಮರಳನ್ನು ಮಾರಾಟ ಮಾಡಿದೆ. ಎಂಎಸ್‌ಐಎಲ್‌ ಒಂದು ಟನ್‌ ಮರಳನ್ನು ₹4,000ಕ್ಕೆ ಮಾರುತ್ತಿದೆ.

ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಗೆ ಡಿಸೆಂಬರ್‌ 23, 2017ರಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದುಎಂಎಸ್‌ಐಲ್‌ ಮೂಲಗಳು ತಿಳಿಸಿವೆ. ಮರಳು ಆಮದು ಮಾಡಿಕೊಳ್ಳುವ ಕುರಿತು ತಿದ್ದುಪಡಿ ಬಂದ ಸಮಯದಲ್ಲಿ ಖಾಸಗಿ ಏಜೆನ್ಸಿಗಳು ಪರವಾನಗಿ ಪಡೆದುಕೊಳ್ಳಲು ಪ್ರಯತ್ನಿಸಿದ್ದವು. ಕಡಿಮೆ ಸಮಯದಲ್ಲಿಯೇ ರಾಜ್ಯ ಸರ್ಕಾರವು ಪರವಾನಗಿಯನ್ನು ನೀಡಿತ್ತು. ಈವರೆಗೆ ಮೂರು ಖಾಸಗಿ ಏಜೆನ್ಸಿಗಳು ಮರಳು ಆಮದು ಮಾಡಿಕೊಳ್ಳುತ್ತಿವೆ.

‘ಮರಳನ್ನು 50 ಕೆ.ಜಿ, 100 ಕೆ.ಜಿ ಅಥವಾ ಜಂಬೋ ಬ್ಯಾಗ್‌ ಲೆಕ್ಕದಲ್ಲಿ ವ್ಯಾಪಾರ ಮಾಡಬೇಕು ಎಂಬುದು ಮರಳು ಆಮದು ಮಾಡಿಕೊಳ್ಳುವ ಯೋಜನೆಯ ನಿಯಮಗಳಲ್ಲಿ ಒಂದು.ಖಾಸಗಿ ಸಂಸ್ಥೆಗಳು ಈಗಿರುವ ನಿಯಮವನ್ನು ಸಡಿಲಗೊಳಿಸಿ ಆಮದು ಮಾಡಿಕೊಂಡಿರುವ ಮರಳನ್ನು ಚಿಲ್ಲರೆಯಾಗಿ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿವೆ. ಗರಿಷ್ಠ ಬೆಲೆ ಮತ್ತು ಅಳತೆಯಿಲ್ಲದ ಮರಳು ಮಾರಾಟ ತಡೆಯುವುದು ಮರಳು ಆಮದು ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಆಮದು ಮಾಡಿಕೊಂಡಿರುವ ಮರಳನ್ನು ಇಚ್ಛೆಗೆ ಬಂದಂತೆ ಮಾರಾಟ ಮಾಡಲು ಅವಕಾಶಕೊಟ್ಟರೆ ಈ ಉದ್ದೇಶವೇ ವಿಫಲವಾದಂತೆ ಆಗುತ್ತದೆ. ಎಂಎಸ್‌ಐಎಲ್‌ ಮಾರುಕಟ್ಟೆಯನ್ನು ಅಪಾಯಕ್ಕೆ ದೂಡಿದಂತಾಗುತ್ತದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಮರಳಿನ ಲೋಕದ ಅಂಕಿಅಂಶಗಳು

ವಿವರ ಎಫ್‌ಐಆರ್ ಒಟ್ಟು ದೂರು ವಸೂಲಾದ ದಂಡದ ಮೊತ್ತ
ಅಕ್ರಮ ಮರಳು ಗಣಿಗಾರಿಕೆ 937 1,530 ₹2.49ಕೋಟಿ
ಅಕ್ರಮ ಮರಳು ಸಾಗಣೆ 8,165 18,510 ₹23.04 ಕೋಟಿ
ಅಕ್ರಮ ಮರಳು ಶೇಖರಣೆ 231 435 ₹17.44 ಕೋಟಿ
ಫಿಲ್ಟರ್‌ ಮರಳು 266 304 ₹29.30 ಲಕ್ಷ
ಒಟ್ಟು 9,599 20,779 ₹43.27 ಕೋಟಿ

ಮರಳು ಗಣಿಗಾರಿಕೆಗೆಅನುಮತಿ ಇರುವ ಪ್ರಮುಖ ಜಿಲ್ಲೆಗಳು

ಜಿಲ್ಲೆಯ ಹೆಸರು ಲಭ್ಯ ಮರಳು (ಲಕ್ಷ ಮೆಟ್ರಿಕ್ ಟನ್‌)
ಚಿತ್ರದುರ್ಗ 9.81
ರಾಯಚೂರು 6.61
ದಕ್ಷಿಣ ಕನ್ನಡ 6.11
ಬಳ್ಳಾರಿ 5.96
ಹಾಸನ 4.60
ಬೆಳಗಾವಿ 3.28
ಹಾವೇರಿ 3.19
ಗದಗ 2.71

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT