ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿ ನೇಹಾ ಕೊಲೆ ಲವ್‌ ಜಿಹಾದ್‌ ಅಲ್ಲ: ಗೃಹ ಸಚಿವ ಜಿ. ಪರಮೇಶ್ವರ

Published 19 ಏಪ್ರಿಲ್ 2024, 8:19 IST
Last Updated 19 ಏಪ್ರಿಲ್ 2024, 8:19 IST
ಅಕ್ಷರ ಗಾತ್ರ

ತುಮಕೂರು: ‘ಹುಬ್ಬಳ್ಳಿಯ ಕಾಲೇಜೊಂದರ ಆವರಣದಲ್ಲಿ ನಡೆದ ವಿದ್ಯಾರ್ಥಿನಿ ಕೊಲೆ ಪ್ರಕರಣ ಲವ್‌ ಜಿಹಾದ್‌ ಅಲ್ಲ’ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ನಮಗೆ ಸಿಕ್ಕ ಮಾಹಿತಿ ಪ್ರಕಾರ ವಿದ್ಯಾರ್ಥಿನಿ ಮತ್ತು ಆರೋಪಿ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ವಿದ್ಯಾರ್ಥಿನಿ ದೂರ ಆಗಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ. ಮಗಳ ಹಿಂದೆ ಹೋಗುತ್ತಿದ್ದ ತಾಯಿ ಮೇಲೆಯೂ ಹಲ್ಲೆಯಾಗಿದ್ದು, ಅವರನ್ನು ರಕ್ಷಿಸಲಾಗಿದೆ. ಇದು ಆಕಸ್ಮಿಕವಾಗಿ ನಡೆದ ಘಟನೆ. ಆರೋಪಿ ವಿರುಧ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಘಟನೆಯಲ್ಲಿ ಲವ್‌ ಜಿಹಾದ್‌ ಕಾಣಿಸಿಲ್ಲ. ‘ನನ್ನನ್ನು ಬಿಟ್ಟು ಬೇರೆ ಮದುವೆ ಮಾಡಿಕೊಳ್ಳುತ್ತಾಳೆ’ ಎಂದು ಆರೋಪಿ ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ನನಗೆ ಪೂರ್ತಿ ಮಾಹಿತಿ ಗೊತ್ತಿಲ್ಲ. ಇಂತಹ ವಿಚಾರದಲ್ಲಿ ಕಾಂಗ್ರೆಸ್‌ ಅನ್ನು ದೂಷಣೆ ಮಾಡುವುದೇ ಬಿಜೆಪಿಯವರ ಕೆಲಸ. ಅದು ಅಷ್ಟು ಸಮಂಜಸ ಅಲ್ಲ. ನಾವು ಕಾನೂನು ಪ್ರಕಾರ ಎಲ್ಲವನ್ನು ನಿಯಂತ್ರಿಸುತ್ತೇವೆ. ಚುನಾವಣೆ ಸಂದರ್ಭದಲ್ಲಿ ಎಲ್ಲ ವಿಚಾರಗಳನ್ನು ರಾಜಕೀಯ ದೃಷ್ಟಿಯಿಂದ ನೋಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಶ್ರೀರಾಮ ನವಮಿ ದಿನ ಬೆಂಗಳೂರಿನಲ್ಲಿ ನಡೆದ ಘಟನೆ ದುರದೃಷ್ಟಕರ. ಜೈ ಶ್ರೀರಾಮ್ ಘೋಷಣೆ ಕೂಗುವುದು ಸಹಜ. ಅದಕ್ಕೆ ವಿರುದ್ಧವಾಗಿ ಮತ್ತೊಬ್ಬರು ಬೇರೆ ಘೋಷಣೆ ಕೂಗಿದ್ದಾರೆ. ಘಟನೆ ನಡೆದ ಬಳಿಕ ಅವರನ್ನು ವಶಕ್ಕೆ ಪಡೆದು ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ, ಓಲೈಸುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸರ್ಕಾರದ ಸಮಯದಲ್ಲೂ ಇಂತಹ ಹಲವು ಘಟನೆಗಳು ನಡೆದ ಬಗ್ಗೆ ಮಾಹಿತಿ ಇದೆ. ಆರ್‌.ಅಶೋಕ, ಆರಗ ಜ್ಞಾನೇಂದ್ರ, ಬಸವರಾಜ ಬೊಮ್ಮಾಯಿ ಅವರು ಗೃಹ ಮಂತ್ರಿಯಾಗಿದ್ದಾಗ ಇಂತಹ ಘಟನೆಗಳು ವರದಿಯಾಗಿವೆ. ಕಾನೂನು ಬಾಹಿರವಾಗಿ ನಡೆದುಕೊಳ್ಳುವವರು ಯಾವುದೇ ಸಮುದಾಯದವರಾಗಲಿ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT