ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಆಸ್ತಿ ನೋಂದಣಿ

Published 22 ಸೆಪ್ಟೆಂಬರ್ 2023, 15:38 IST
Last Updated 22 ಸೆಪ್ಟೆಂಬರ್ 2023, 15:38 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ ಉಪ ನೋಂದಣಾಧಿಕಾರಿ ಕಚೇರಿಗಳು ಶನಿವಾರದಿಂದ (ಸೆ.23) ಇದೇ 30ರವರೆಗೆ ಪ್ರತಿದಿನ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿವೆ.

ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಗಳು ಅ.1ರಿಂದಲೇ ಜಾರಿಯಾಗುತ್ತಿದ್ದು, ಹಳೆಯ ಮಾರ್ಗಸೂಚಿ ದರದಲ್ಲೇ  ನೋಂದಣಿ ಮಾಡಿಸಲು ಹಾಜರುಪಡಿಸುವ ದಸ್ತಾವೇಜುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಉಪ ನೋಂದಣಾಧಿಕಾರಿ ಕಚೇರಿಗಳ ಕೆಲಸದ ಸಮಯನ್ನು ವಿಸ್ತರಿಸಲಾಗಿದೆ. 

ಸೆ.23ರಂದು ನಾಲ್ಕನೇ ಶನಿವಾರವಾದರೂ ಕಚೇರಿಗಳು ಕೆಲಸ ಮಾಡಲಿವೆ. ಈ ಸೌಲಭ್ಯ ಸೆ.30ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ನೋಂದಣಿ ಮಹಾಪರಿವೀಕ್ಷಕಿ ಮತ್ತು ಮುದ್ರಾಂಕಗಳ ಆಯುಕ್ತೆ ಬಿ.ಆರ್.ಮಮತಾ ತಿಳಿಸಿದ್ದಾರೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆ ಎರಡು ಹಂತಗಳಲ್ಲಿ ಸ್ಥಿರಾಸ್ತಿ ದರ ಪರಿಷ್ಕರಣೆ ಮಾಡಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿನ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಹಾಗೂ ಎರಡನೇ ಹಂತದಲ್ಲಿ ರಾಜ್ಯದ ಇತರೆ 28 ಜಿಲ್ಲೆಗಳ ದರ ಪರಿಷ್ಕರಣೆ ಮಾಡಲಾಗಿತ್ತು. ಈ ಬಾರಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಸರಾಸರಿ ಹೆಚ್ಚಳ ಮಾಡದೇ, ಹೊಸದಾಗಿ ಸಿದ್ಧಪಡಿಸಿರುವ ಮಾನದಂಡಗಳ ಆಧಾರದಲ್ಲಿ ಶೇಕಡ 5ರಿಂದ ಶೇಕಡ 70ರವರೆಗೂ ಹೆಚ್ಚಳ ಮಾಡುವ ಪ್ರಸ್ತಾವವನ್ನು ಕರಡು ಪಟ್ಟಿಯಲ್ಲಿ ಪ್ರಕಟಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT