ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೃಹ ಜ್ಯೋತಿ’ ಯೋಜನೆಗೆ ಬೇಸಿಗೆ ತಾಪ: ಧಗೆ ತಡೆಗೆ ಹೆಚ್ಚಿನ ವಿದ್ಯುತ್ ಬಳಕೆ

ಮಿತಿ ದಾಟಿದವರಿಗೆ ಶುಲ್ಕದ ಬರೆ
Published 27 ಮಾರ್ಚ್ 2024, 20:42 IST
Last Updated 27 ಮಾರ್ಚ್ 2024, 20:42 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪ ನಿರಂತರವಾಗಿ ಏರುತ್ತಿದ್ದು, ಕಳೆದ ವರ್ಷದ ಫೆಬ್ರುವರಿ–ಮಾರ್ಚ್‌ಗಿಂತ ಈ ಬಾರಿ ಗೃಹ ವಿದ್ಯುತ್ ಬಳಕೆ ಶೇ 30ರಷ್ಟು ಹೆಚ್ಚಳವಾಗಿದೆ. ‘ಗೃಹ ಜ್ಯೋತಿ’ ಫಲಾನುಭವಿಗಳಿಗೂ ‘ಬಿಸಿ’ ತಟ್ಟಿದೆ.

ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ನಿಯಮಗಳ ಪ್ರಕಾರ ಸೌಲಭ್ಯ ಪಡೆದಿರುವ ಕುಟುಂಬಗಳು ಹಿಂದಿನ ಒಂದು ವರ್ಷ ಬಳಸಿದ್ದ ಸರಾಸರಿ ಯೂನಿಟ್‌ ಹಾಗೂ ಅದರ ಮೇಲೆ 10 ಹೆಚ್ಚುವರಿ ಯೂನಿಟ್‌ ಮಾತ್ರ ಉಚಿತವಾಗಿ ಪಡೆಯಬಹುದಾಗಿದೆ. ಅದಕ್ಕಿಂತ ಎಷ್ಟು ಹೆಚ್ಚು ಬಳಕೆ ಮಾಡಲಾಗುತ್ತದೆಯೇ ಅಷ್ಟು ಯೂನಿಟ್‌ಗಳಿಗೆ ಶುಲ್ಕ ಭರಿಸಬೇಕಾಗುತ್ತದೆ. ಬಳಕೆ 200 ಯೂನಿಟ್‌ ದಾಟಿದರೆ ಸಂಪೂರ್ಣ ಶುಲ್ಕ ತೆರಬೇಕಾಗುತ್ತದೆ. 

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಧಗೆ ನಿರಂತರವಾಗಿ ಏರುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ವಾಡಿಕೆಗಿಂತ ಮುನ್ನವೇ ಬಿಸಿಲಿನ ಕಾವು ಹೆಚ್ಚಾಗಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ದಾಖಲಾಗುತ್ತಿದೆ. ಉಷ್ಣಾಂಶ ಹೆಚ್ಚಳ ಹಾಗೂ ಗಾಳಿಯಲ್ಲಿ ತೇವಾಂಶ ಕಡಿಮೆ ಆಗಿರುವ ಕಾರಣ ಹಗಲು ಹಾಗೂ ರಾತ್ರಿ ಸಮಯದಲ್ಲೂ ಸೆಖೆ ಸಹಿಸಲಸಾಧ್ಯವಾಗಿದೆ.

ಕರಾವಳಿ ಹಾಗೂ ಕಲಬರಗಿ, ವಿಜಯಪುರ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ, ಬಾಗಲಕೋಟೆ, ದಾವಣಗೆರೆ, ಧಾರವಾಡ, ಹಾವೇರಿ, ಚಿತ್ರದುರ್ಗ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗಿದೆ. ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು, ಹಾಸನಗಳಲ್ಲೂ ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್‌ ಅಧಿಕ ಉಷ್ಣಾಂಶವಿದೆ. ರಾತ್ರಿ ವೇಳೆ ಸೆಖೆಯಿಂದ ಮುಕ್ತಿ ಪಡೆಯಲು ಜನರು ಫ್ಯಾನ್‌, ಕೂಲರ್‌ಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಇದರಿಂದ ಹೆಚ್ಚು ವಿದ್ಯುತ್‌ ಬಳಕೆಯಾಗುತ್ತಿದೆ. ಉಚಿತಕ್ಕೆ ನಿಗದಿ ಮಾಡಿರುವ ಯೂನಿಟ್‌ಗಳ ಮಿತಿ ದಾಟುತ್ತಿದೆ. 

ಚುನಾವಣಾ ಸಮಯದಲ್ಲಿ ಕಾಂಗ್ರೆಸ್‌ ನೀಡಿದ್ದ ಭರವಸಯಂತೆ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ 2023ರ ಆಗಸ್ಟ್‌ನಲ್ಲಿ ಚಾಲನೆ ನೀಡಲಾಗಿತ್ತು. ರಾಜ್ಯದ 1.60 ಕೋಟಿ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.

ಯೋಜನೆ ಜಾರಿಯಾದ 6 ತಿಂಗಳು ತಮಗೆ ನಿಗದಿಯಾದ ಯೂನಿಟ್‌ ಮಿತಿಯಲ್ಲಿಯೇ ಶೇ 99ರಷ್ಟು ಜನರು ಬಳಕೆ ಮಾಡುವ ಮೂಲಕ ಉಚಿತ ವಿದ್ಯುತ್‌ ಸೌಲಭ್ಯ ಅನುಭವಿಸುತ್ತಿದ್ದರು. ಆದರೆ, ಈ ತಿಂಗಳಲ್ಲಿ ಶೇ 16ರಷ್ಟು ಗ್ರಾಹಕರು ಹೆಚ್ಚುವರಿ ಬಳಕೆಯ ಶುಲ್ಕ ಪಾವತಿಸಬೇಕಿದೆ. ಶೇ 4ರಷ್ಟು ಗ್ರಾಹಕರು 200 ಯೂನಿಟ್‌ ಮಿತಿ ದಾಟಿದ್ದು, ಉಚಿತ ಸೌಲಭ್ಯದ ಅವಕಾಶದಿಂದ ವಂಚಿತರಾಗಿದ್ದಾರೆ. ಏಪ್ರಿಲ್‌ ವೇಳೆಗೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಬಾಡಿಗೆ ಮನೆಗಳ ಬವಣೆ

‘ಗೃಹ ಜ್ಯೋತಿ’ ಯೋಜನೆಯ ಫಲಾನುಭವಿ ಬಾಡಿಗೆದಾರರು ತಮ್ಮ ಮನೆ ಬದಲಿಸಿದರೂ ಈ ಯೋಜನೆಯನ್ನು ಮುಂದುವರಿಸಲು ಇಂಧನ ಇಲಾಖೆ ‘ಡಿ–ಲಿಂಕ್‌’ ಸೌಲಭ್ಯವನ್ನು ಕಲ್ಪಿಸಿದೆ. ಆದರೆ, ಬದಲಿಸಿದ ಬಾಡಿಗೆ ಮನೆಯಲ್ಲಿ ಹಿಂದಿನ ಬಾಡಿಗೆದಾರರು ಬಳಸಿದ್ದ ಸರಾಸರಿ ಯೂನಿಟ್‌ನಷ್ಟೇ ಬಳಸಬೇಕಿದೆ. 

‘ರಾಜಾಜಿನಗರದ ಬಾಡಿಗೆ ಮನೆಯಲ್ಲಿ 3 ವರ್ಷ ಇದ್ದೆವು. ಗೃಹ ಜ್ಯೋತಿ ಸೌಲಭ್ಯ ಪಡೆದಾಗ ಸರಾಸರಿ 140 ಯೂನಿಟ್‌ ಸಿಕ್ಕಿತ್ತು. ಈಗಿರುವ ಮಂಜುನಾಥ ಬಡಾವಣೆಯ ಮನೆಯ ಸರಾಸರಿ 90 ಯೂನಿಟ್‌ ಇದೆ. ಇದರಿಂದ ಪ್ರತಿ ತಿಂಗಳು ಹೆಚ್ಚುವರಿ ಶುಲ್ಕ ಭರಿಸುತ್ತಿದ್ದೇವೆ’ ಎನ್ನುತ್ತಾರೆ ರಾಜೀವ್‌ ಏಕಬೋಟೆ.

ಜಲ ವಿದ್ಯುತ್‌ ಕುಂಠಿತ, ಇತರೆ ಹೆಚ್ಚಳ

ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವ ಕಾರಣ ಜಲ ವಿದ್ಯುತ್‌ ಉತ್ಪಾದನೆ 1 ಸಾವಿರ ಮೆಗಾವಾಟ್‌ಗೆ ಸೀಮಿತವಾಗಿದೆ. ಉಳಿದ ಮೂಲಗಳಿಂದ ಹೆಚ್ಚುವರಿ ಪಡೆಯುತ್ತಿರುವ ಕಾರಣ ವಿದ್ಯುತ್‌ ಅಭಾವ ಎದುರಾಗಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.

ಉಷ್ಣ ವಿದ್ಯುತ್ ಸ್ಥಾವರಗಳಿಂದ 3,250, ಉತ್ತರ ಪ್ರದೇಶ–ಪಂಜಾಬ್‌ನಿಂದ 900, ಖಾಸಗಿ ವಿದ್ಯುತ್ ಉತ್ಪಾದಕರಿಂದ 500, ಕೇಂದ್ರ ಗ್ರಿಡ್‌ನಿಂದ 452, ಕೇಂದ್ರೀಯ ಉತ್ಪಾದನಾ ಕೇಂದ್ರಗಳಿಂದ (ಸಿಜಿಎಸ್‌) 4 ಸಾವಿರ ಮೆಗಾವಾಟ್‌ ಪಡೆಯಲಾಗುತ್ತಿದೆ. ರಾಜ್ಯದ ಪವನ, ಸೌರಶಕ್ತಿ ಮತ್ತು ಇತರ ಯೋಜನೆಗಳಿಂದ ಬೇಡಿಕೆ ಇರುವ 17 ಸಾವಿರ ಮೆಗಾವಾಟ್‌ ಸಿಗುತ್ತಿದೆ ಎಂದರು. ಕೃಷಿ ಪಂಪ್‌ಸೆಟ್‌, ಕೈಗಾರಿಕೆ ಹಾಗೂ ಗೃಹ ಬಳಕೆಗೆ ಸಮರ್ಪಕ ವಿದ್ಯುತ್ ಲಭ್ಯವಾಗಿದೆ. ಎಸ್‌ಎಸ್ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ಲೋಡ್‌ಶೆಡ್ಡಿಂಗ್‌ ಮಾಡದಂತೆ ಸೂಚಿಸಲಾಗಿದೆ. ಸಮರ್ಪಕ ವಿದ್ಯುತ್ ಸರಬರಾಜಿನ ಮೇಲ್ವಿಚಾರಣೆಗೆ ಪ್ರತಿ ಜಿಲ್ಲೆಗೆ ಮುಖ್ಯ ಎಂಜಿನಿಯರ್ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ವಿವರ ನೀಡಿದರು.

ಗೃಹ ವಿದ್ಯುತ್‌ ಬಳಕೆ ಕಳೆದ ಬಾರಿಗಿಂತ ಶೇ 30ರಷ್ಟು ಹೆಚ್ಚಾಗಿದೆ. ಫಲಾನುಭವಿಗಳು ತಮಗೆ ನಿಗದಿಯಾದ ಯೂನಿಟ್‌ಗಳಿಗಿಂತ ಹೆಚ್ಚುವರಿ ಬಳಕೆಗಷ್ಟೇ ಶುಲ್ಕ ಪಾವತಿಸಬೇಕು.
–ಕೆ.ಜೆ. ಜಾರ್ಜ್‌, ಇಂಧನ ಸಚಿವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT