ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾಪಕರ ‘ಪ್ರತಿಭಾ ಪಲಾಯನ’!

ಅವಧಿ ಪೂರ್ಣಗೊಳ್ಳುವ ಮೊದಲೇ ಹಳೇ ಮೈಸೂರು ಜಿಲ್ಲೆಗಳಿಗೆ 125 ಅಧ್ಯಾಪಕರ ನಿಯೋಜನೆ
Last Updated 26 ಜನವರಿ 2019, 18:44 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರಿ ವೈದ್ಯರು ಮಾತ್ರವಲ್ಲ, ಸರ್ಕಾರಿ ಕಾಲೇಜುಗಳ ಅಧ್ಯಾಪಕರೂ ಕಾರ್ಯ ನಿರ್ವಹಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ‘ಪ್ರತಿಭಾ ಪಲಾಯನ’ಕ್ಕೆ ಉನ್ನತ ಶಿಕ್ಷಣ ಇಲಾಖೆಯೇ ಸಾಥ್‌ ನೀಡಿದೆ!

ಇತ್ತೀಚೆಗೆ ಉನ್ನತ ಶಿಕ್ಷಣ ಇಲಾಖೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಎಂಬ ಕಾರಣ ನೀಡಿ, ಏಕ ಆದೇಶದ ಮೂಲಕ 125 ಅಧ್ಯಾಪಕರನ್ನು ಸಾಮೂಹಿಕವಾಗಿ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳ ಸರ್ಕಾರಿ ಕಾಲೇಜು
ಗಳಿಗೆ ನಿಯೋಜಿಸಿದೆ. ಈ ಸಾಮೂಹಿಕ ನಿಯೋಜನೆ ಹಿಂದೆ ಭ್ರಷ್ಟಾಚಾರದ ಆರೋಪವೂ ಕೇಳಿ ಬಂದಿದೆ.

ನಿಯೋಜನೆ ಮೂಲಕ ಗ್ರಾಮಾಂತರ ಪ್ರದೇಶದಿಂದ ‘ಬಿಡುಗಡೆ ಭಾಗ್ಯ’ ಪಡೆದಿರುವ ಅಧ್ಯಾಪಕರು 2017 ರಲ್ಲಿ ನೇಮಕಗೊಂಡಿದ್ದರು. ಇವರು ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಗ್ರಾಮಾಂತರ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿ
ದ್ದರು.ಅವಧಿ ಮುಗಿಯವುದಕ್ಕೆ ಮೊದಲೇ ವಾಮಮಾರ್ಗದ ಮೂಲಕ ನಿಯೋಜನೆ ಮೂಲಕ ತಮಗೆ ಬೇಕಾದ ಕಡೆಗೆ ಪೋಸ್ಟಿಂಗ್‌ ಮಾಡಿಸಿಕೊಂಡಿದ್ದಾರೆ. ಶಾಸಕರು ಮತ್ತು ಇತರ ಪ್ರಭಾವಿಗಳು ಅಧ್ಯಾಪಕರ ಪರವಾಗಿ ಶಿಫಾರಸು ಪತ್ರ
ಗಳನ್ನು ನೀಡಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ಮೆರಿಟ್‌ ಪಟ್ಟಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿದ್ದವರನ್ನು ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಭಾಗದ ಸಣ್ಣ ಪಟ್ಟಣಗಳಿಗೆ ನೇಮಕಾತಿ ಆದೇಶ ನೀಡಲಾಗಿತ್ತು. ಆಗ ಸರ್ಕಾರದ ಉದ್ದೇಶ ಗ್ರಾಮಾಂತರ ಪ್ರದೇಶದಲ್ಲಿ ಗುಣಮಟ್ಟ ನೀಡಬೇಕು ಎಂಬುದೇ ಆಗಿತ್ತು.

ಆದರೆ, 2018 ರ ಏಪ್ರಿಲ್‌– ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇದ್ದ ಕಾರಣ ವರ್ಗಾವಣೆ ಪ್ರಕ್ರಿಯೆ ನಡೆಯಲಿಲ್ಲ. ಪ್ರತಿ ವರ್ಷ ಕೌನ್ಸೆಲಿಂಗ್‌ ಮೂಲಕವೇ ವರ್ಗಾವಣೆ ನಡೆಸಲಾಗುತ್ತಿತ್ತು. ವರ್ಗಾವಣೆ ನಿಯಮಾವಳಿಗಳಲ್ಲಿ ದೋಷ ಇದೆ ಎಂಬ ಕಾರಣಕ್ಕೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಮೊದಲಿಗೆ ನಿಯಮಾವಳಿಗಳನ್ನು ಸರಿಪಡಿಸಿದ ಬಳಿಕವೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯ ಕೇಳಿ ಬಂದಿತ್ತು.

ಈ ವರ್ಷ ಏಪ್ರಿಲ್‌– ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ವರ್ಗಾವಣೆ ಸಾಧ್ಯತೆ ಇಲ್ಲ ಎಂಬ ಕಾರಣಕ್ಕೆ ಭಾರಿ ಸಂಖ್ಯೆಯಲ್ಲಿ ನಿಯೋಜನೆ ಮೇಲೆ ಕಳುಹಿಸಲಾಗಿದೆ. ನಿಯೋಜನೆ ಮೇಲೆ ಅಧ್ಯಾಪಕರು ಹೋಗಿರುವುದರಿಂದ ಪರೀಕ್ಷಾ ಸಮಯದಲ್ಲೇ ಆ ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಈ ಸಾಮೂಹಿಕ ನಿಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ. ಏಕೆಂದರೆ ಬಹುಪಾಲು ಮೈಸೂರು, ಬೆಂಗಳೂರು ಜಿಲ್ಲೆಗಳಿಗೇ ನಿಯೋಜನೆ ಪಡೆದಿದ್ದಾರೆ ಎಂದು ಕಾಲೇಜು ಅಧ್ಯಾಪಕರ ಸಂಘದ ಪದಾಧಿಕಾರಿಯೊಬ್ಬರು ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅನಿಲ್‌ಕುಮಾರ್‌, ‘ಇದಕ್ಕೆ(ನಿಯೋಜನೆ) ಸಂಬಂಧಿಸಿದ ಯಾವುದೇ ಕಡತಕ್ಕೆ ಸಹಿ ಹಾಕಿಲ್ಲ. ವರ್ಗಾವಣೆಯನ್ನು ಕಾಯ್ದೆ ಪ್ರಕಾರವೇ ಮಾಡುತ್ತೇವೆ. ಶೈಕ್ಷಣಿಕ ವರ್ಷ ಆರಂಭವಾಗುವುದಕ್ಕೆ ಮೊದಲೇ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಕಳೆದ ಎರಡು ವರ್ಷಗಳಿಂದ ವರ್ಗಾವಣೆಯೇ ಆಗಿಲ್ಲ.
ಡೆಪ್ಯೂಟೇಷನ್‌ನಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ’ ಎಂದು ಹೇಳಿದರು.

ಮೈಸೂರು ಜಿಲ್ಲೆಗೆ ಅತಿ ಹೆಚ್ಚು ನಿಯೋಜನೆ

ಉನ್ನತ ಶಿಕ್ಷಣ ಸಚಿವರ ತವರು ಜಿಲ್ಲೆಯಾದ ಮೈಸೂರು ಜಿಲ್ಲೆಗೆ ಅತಿ ಹೆಚ್ಚು ಅಂದರೆ, 44 ಅಧ್ಯಾಪಕರು ನಿಯೋಜನೆ ಪಡೆದು ಬಂದಿದ್ದಾರೆ. ಇದರಲ್ಲಿ ಮೈಸೂರು ನಗರಕ್ಕೆ 30 ಮಂದಿ ನಿಯೋಜನೆ ಪಡೆದಿದ್ದಾರೆ. ಬೆಂಗಳೂರು ಜಿಲ್ಲೆಗೆ 27, ತುಮಕೂರು ಜಿಲ್ಲೆ 11, ಮಂಡ್ಯ 8, ರಾಮನಗರ ಮತ್ತು ಕೋಲಾರ ತಲಾ 6 ಮತ್ತು ಹಾಸನ ಜಿಲ್ಲೆಗೆ 3 ಅಧ್ಯಾಪಕರು ನಿಯೋಜನೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT